ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಮೂಲಸೌಕರ್ಯ ಕೊರತೆ, ದತ್ತ ಭಕ್ತರಿಗೆ ಖಾಸಗಿ ಲಾಡ್ಜ್‌ಗಳೇ ಗತಿ!

ಕೀಲಿ ಹಾಕಿದ ಯಾತ್ರಿ ನಿವಾಸ
Last Updated 28 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಕಲಬುರಗಿ: ಇತ್ತೀಚೆಗೆ ವೃದ್ಧೆಯ ಮೃತ ದೇಹ ನಾಯಿಗಳು ತಿಂದು ಸುದ್ದಿಯಲ್ಲಿದ್ದ ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರದ ಸುಕ್ಷೇತ್ರಕ್ಕೆ ಬರುವ ಭಕ್ತರು ಉಳಿದುಕೊಳ್ಳಲು ಖಾಸಗಿಯವರು ನಿರ್ವಹಿಸುವ ಲಾಡ್ಜ್‌ಗಳೇ ಆಸರೆಯಾಗಿವೆ.

ದತ್ತಾತ್ರೇಯ ದೇವಸ್ಥಾನವನ್ನು ಮುಜರಾಯಿ ಹಾಗೂ ಧಾರ್ಮಿಕ ದತ್ತಿ ಇಲಾಖೆ ನಿರ್ವಹಿಸುತ್ತಿದ್ದು, ವರ್ಷಕ್ಕೆ ಕೋಟ್ಯಂತರ ರೂಪಾಯಿ ವರಮಾನ ವಿವಿಧ ಸೇವೆಗಳ ರೂಪದಲ್ಲಿ ಸರ್ಕಾರದ ಕೈಸೇರುತ್ತಿದೆ. ಆದರೂ ಸುಸಜ್ಜಿತ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ.

ದತ್ತಾತ್ರೇಯ ಮಂದಿರದ ಹಿಂಭಾಗದಲ್ಲಿ ಎರಡು ಅತ್ಯಂತ ಹಳೆಯ ಕಾಲದ ಧರ್ಮಶಾಲೆಗಳಿವೆ. ಅದರಲ್ಲಿ ತಲಾ 18 ಕೊಠಡಿಗಳಿದ್ದು, ವಾಸಯೋಗ್ಯವಾಗಿಲ್ಲ. ಆದರೂ, ಅವೇ ಕೊಠಡಿಗಳನ್ನು ಬೇರೆ ರಾಜ್ಯ ಹಾಗೂ ಜಿಲ್ಲೆಗಳಿಂದ ಬರುವ ಭಕ್ತರಿಗೆ ನೀಡಲಾಗುತ್ತಿದೆ.

ಒಂದು ಧರ್ಮಶಾಲೆಯಲ್ಲಿ ದೇವಸ್ಥಾನ ಟ್ರಸ್ಟ್ ಕಮಿಟಿ ಕಚೇರಿಯಿದ್ದು, ಅದು ಮಾತ್ರ ಇದ್ದುದರಲ್ಲಿ ಸುಸಜ್ಜಿತವಾಗಿದೆ. ಇಡೀ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಛಾವಣಿಯ ಸಿಮೆಂಟ್ ಕಿತ್ತು ಹೋಗಿ, ಒಳಗಿನ ಕಬ್ಬಿಣದ ಸರಳುಗಳು ತುಕ್ಕು ಹಿಡಿದಿತ್ತು ಕಾಣಿಸುತ್ತದೆ. ಕಟ್ಟಡದ ಮಧ್ಯಭಾಗದಲ್ಲಿ ಗೋಡೆಯಿಂದಲೇ ಗಿಡವೊಂದು ಬೆಳೆದು ನಿಂತಿದೆ. ಎಲ್ಲಿ ಬೇಕೆಂದರಲ್ಲಿ ವೈರ್‌ಗಳು ತೂಗಾಡುತ್ತಿದ್ದು, ವಯಸ್ಸಾದವರು, ಮಕ್ಕಳ ಕೈಗೆಟಕುವಂತಿವೆ. ಮಳೆಗಾಲದಲ್ಲಂತೂ ನೀರು ಸೋರುತ್ತಲೇ ಇರುತ್ತವೆ.

ಜೀವ ಕೈಯಲ್ಲಿ ಹಿಡಿದುಕೊಂಡೇ ಈ ಎರಡೂ ಧರ್ಮಶಾಲೆಗಳಲ್ಲಿ ದಿನಗಳನ್ನು ಕಳೆಯಬೇಕಿದೆ.

ಇದರ ‍ಪ್ರಯೋಜನ ಪಡೆದುಕೊಂಡ ಖಾಸಗಿಯವರು ಗ್ರಾಮದಲ್ಲಿ ಸುಸಜ್ಜಿತ ವಸತಿಗೃಹಗಳನ್ನು ನಿರ್ಮಿಸಿ ದುಬಾರಿ ಬೆಲೆಗೆ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಿದ್ದಾರೆ.

ಬಳಕೆಯಾಗದೇ ಹಾಳಾದ ಯಾತ್ರಿ ನಿವಾಸ: ದೇವಲಗಾಣಗಾಪುರದ ಬಸ್ ನಿಲ್ದಾಣದ ಪಕ್ಕದಲ್ಲಿ ಮುಜರಾಯಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಉದ್ಘಾಟಿಸಿದ್ದರು. ಆದರೆ, ಅದನ್ನು ಬಳಸುವವರಿಗೆ ಶುಲ್ಕ ಎಷ್ಟು ವಿಧಿಸಬೇಕು ಎಂಬ ನಿರ್ಧಾರ ತೆಗೆದುಕೊಳ್ಳದೇ ಇರುವುದರಿಂದ ಅದನ್ನೂ ಬಳಕೆಗೆ ಮುಕ್ತ ಮಾಡಿಲ್ಲ ಎಂದು ದತ್ತಾತ್ರೇಯ ದೇವಸ್ಥಾನ ಟ್ರಸ್ಟ್ ಕಮಿಟಿ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

ಮೂರು ಧರ್ಮಶಾಲೆಗಳ ಪೈಕಿ ಎರಡು ಅತ್ಯಂತ ಹಳೆಯ ಕಟ್ಟಡಗಳಾಗಿದ್ದು, ಚಾವಣಿಯ ಸಿಮೆಂಟ್ ಕಿತ್ತು ಹೋಗಿದೆ. ಯಾವಾಗ ಬೇಕಾದರೂ ಬೀಳುಬಹುದಾಗಿದೆ. ಎರಡು ಧರ್ಮಶಾಲೆಗಳಲ್ಲಿ ಕೊಠಡಿಯೊಂದಕ್ಕೆ ನಿತ್ಯ ₹ 150 ಶುಲ್ಕ ಪಡೆಯುತ್ತಾರೆ. ಆದರೆ, ಇವು ಹಳೆಯದಾಗಿರುವುದರಿಂದ ಈ ಧರ್ಮಶಾಲೆಗಳಲ್ಲಿ ವಾಸ ಮಾಡುವುದು ಅಸಾಧ್ಯ. ಆದ್ದರಿಂದ ತಕ್ಷಣ ಇವುಗಳನ್ನು ನೆಲಸಮಗೊಳಿಸಿ ಹೊಸ ಯಾತ್ರಿ ನಿವಾಸಗಳನ್ನು ನಿರ್ಮಿಸಬೇಕು ಎನ್ನುತ್ತಾರೆ ಗ್ರಾಮದ ಮುಖಂಡ ತಿಪ್ಪಣ್ಣ ಚಿನಮಳ್ಳಿ.

‘ದೇವಸ್ಥಾನಕ್ಕೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವರಮಾನ ಕಾಣಿಕೆ ಹಾಗೂ ವಿವಿಧ ಸೇವೆಗಳ ರೂಪದಲ್ಲಿ ಬರುತ್ತಿದ್ದರೂ ಧಾರ್ಮಿಕ ದತ್ತಿ ಇಲಾಖೆ ನಿರ್ವಹಿಸುತ್ತಿರುವ ಧರ್ಮಶಾಲೆಗಳು ಅವ್ಯವಸ್ಥೆಯಿಂದ ಕೂಡಿವೆ. ಹೀಗಾಗಿ, ದತ್ತಾತ್ರೇಯ ದೇವರ ಮೇಲೆ ಭಾರ ಹಾಕಿ ಬಂದ ಭಕ್ತರು ಅನಿವಾರ್ಯವಾಗಿ ದೇವಸ್ಥಾನದ ಹೊರಗಿನ ಕಟ್ಟೆ, ಗ್ರಾಮಸ್ಥರ ಮನೆಗಳ ಹೊಗಭಾಗದ ಕಟ್ಟೆಗಳ ಮೇಲೆ ಮಲಗಿ ರಾತ್ರಿ ಮಲಗಬೇಕಿದೆ’ ಎನ್ನುತ್ತಾರೆ ದೇವಲ ಗಾಣಗಾಪುರ ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ವಡಗೇರಿ.

ಕೊಳಚೆ ನೀರು ಭೀಮಾನದಿಗೆ!
ದೇವಲ ಗಾಣಗಾಪುರದಲ್ಲಿ ಹರಿಯುವ ಕೊಳಚೆ ನೀರು ನೇರವಾಗಿ ಪಕ್ಕದಲ್ಲೇ ಇರುವ ಭೀಮಾ ನದಿಯನ್ನು ಕೂಡಿಕೊಳ್ಳುತ್ತದೆ.

ಸರ್ಕಾರ ಪುಣ್ಯ ಕ್ಷೇತ್ರಗಳಿಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಅದನ್ನು ಬಳಸಿಕೊಂಡು ಕೊಳಚೆ ನೀರನ್ನು ನದಿಗೆ ಹರಿಸುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ ಕೊಳಚೆ ನೀರು ಜೀವಜಲ ಸೇರುವುದನ್ನು ತಪ್ಪಿಸಬೇಕು. ದತ್ತನ ಸನ್ನಿಧಿಗೆ ಬರುವ ಭಕ್ತರು ಭೀಮಾ ನದಿಯಲ್ಲಿ ಪವಿತ್ರ ಸ್ನಾನವನ್ನೂ ಮಾಡುತ್ತಾರೆ. ಕೊಳಚೆ ನೀರು ನದಿಗೆ ಸೇರುವುದು ಗೊತ್ತಾದರೆ ಅವರಲ್ಲಿ ಯಾವ ಭಾವನೆ ಬರಲಿದೆ? ಎಂದು ಗ್ರಾಮ ಪಂಚಾಯಿತಿ ಸದಸ್ಯ ರಾಕೇಶ ವಡಗೇರಿ ಪ್ರಶ್ನಿಸಿದರು.

*
ಪ್ರವಾಸೋದ್ಯಮ ಇಲಾಖೆಯಿಂದ ಗಾಣಗಾಪುರ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 50 ಲಕ್ಷ ಬಿಡುಗಡೆ ಮಾಡಲಾಗಿತ್ತು. ಮುಜರಾಯಿ ಇಲಾಖೆ ಅಧೀನದಲ್ಲಿ ಇರುವುದರಿಂದ ನಾವು ನಿರ್ವಹಣೆಗೆ ಕೇಳಿಲ್ಲ.
–ಪ್ರಭುಲಿಂಗ ತಳಕೇರಿ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT