ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಳ್ಳಿ ಜನರ ಪ್ರೀತಿ ಮರೆಯಲಾರೆ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

Last Updated 16 ಅಕ್ಟೋಬರ್ 2021, 15:01 IST
ಅಕ್ಷರ ಗಾತ್ರ

ಕಾಳಗಿ: ‘ಜಿಲ್ಲಾಧಿಕಾರಿ ಆಗಿ ಕಲಬುರಗಿಗೆ ಬಂದ ಮೇಲೆ ಅನೇಕ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಆದರೆ ಭೂಕಂಪದ ಆತಂಕದ ಮಧ್ಯೆ ಬದುಕುತ್ತಿರುವ ಹೊಸಳ್ಳಿ ಎಚ್. ಗ್ರಾಮಸ್ಥರಿಂದ ನನಗೆ ಎಲ್ಲಿಯೂ ಸಿಗದಷ್ಟು ಪ್ರೀತಿ, ಸ್ವಾಗತ ಇಲ್ಲಿ ಲಭಿಸಿದೆ’ ಎಂದು ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ ಭಾವುಕರಾಗಿ ನುಡಿದರು.

ತಾಲ್ಲೂಕಿನ ಹಲಚೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಎಚ್. ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಅಂಗವಾಗಿ ನಡೆದ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕಂದಾಯ ಸಚಿವರ ಕನಸಿನಂತೆ ಹಳ್ಳಿಗಳ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವ ಉದ್ದೇಶದಿಂದ ಅಧಿಕಾರಿಗಳ ‘ಗ್ರಾಮ ವಾಸ್ತವ್ಯ’ ರೂಪಿಸಲಾಗಿದೆ. ಇಲ್ಲಿ ಕಂದಾಯ ಇಲಾಖೆಯ ವಿವಿಧ ಸಮಸ್ಯೆಗಳು, ಮನೆ, ಶೌಚಾಲಯ, ಕುಡಿಯುವ ನೀರು, ಪಿಂಚಣಿ, ಸರ್ಕಾರಿ ಜಮೀನು ಒತ್ತುವರಿ ಮೊದಲಾದ ಕುಂದುಕೊರತೆಗಳ ಬಗ್ಗೆ ಮತ್ತು ಸರ್ಕಾರಿ ಕಟ್ಟಡಗಳ ಕುರಿತಾಗಿ ಪರಿಶೀಲನೆ ನಡೆಸಲಾಗುವುದು’ ಎಂದರು.

‘ಭೂಮಿ ಇರುವರೆಗೂ ಭೂಕಂಪ ಇದ್ದುದೇ. ಯಾವಾಗ ಏನು ಬೇಕಾದರೂ ಆಗಬಹುದು. ಹೇಗೆ ಆಗುತ್ತದೆ ಎಂದು ಯಾರಿಂದಲೂ ಹೇಳಲು ಸಾಧ್ಯವಿಲ್ಲ. ಆದರೂ ಹೆಚ್ಚಿನ ಮಾಹಿತಿ ಕಲೆಹಾಕಲು ಹೈದರಾಬಾದ್‌ನಿಂದ ಭೂವಿಜ್ಞಾನಿಗಳ ತಂಡ ಆಗಮಿಸಲಿದೆ. ಭೂಕಂಪದ ಜಾಗೃತಿ ಬಗ್ಗೆ ಈಗಾಗಲೇ ಪೋಸ್ಟರ್, ಗೋಡೆ ಬರಹ ಬರೆಸಲಾಗಿದೆ. ಆದರೂ ಜನರಿಗೆ ಭಯ ಸಹಜ. ನಿಮ್ಮಂತೆ ನನಗೂ ಭಯವಿದೆ. ಈ ಹಿಂದೆ ಎರಡು ಬಾರಿ ಕೋವಿಡ್ ಅಲೆ, ಒಂದು ಬಾರಿ ಮಳೆ ನೀರಿನ ಪ್ರವಾಹ ಎದುರಿಸಿದ್ದೇವೆ. ಈ ಮೂಲಕವೇ ಜನರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದೇವೆ. ಜನರು ಸುರಕ್ಷಿತವಾಗಿರಲು ಎಚ್ಚರಿಕೆ ವಹಿಸಬೇಕು’ ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ.ದಿಲೀಷ್ ಶಶಿ ಮಾತನಾಡಿದರು. ಕಲಬುರಗಿ ಉಪವಿಭಾಗಾಧಿಕಾರಿ ಮೋನಾ ರೋಟ್, ತಾಲ್ಲೂಕು ಪಂಚಾಯಿತಿ ಇಒ ಅನಿಲಕುಮಾರ ರಾಠೋಡ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ಹಲಚೇರಾ ಗ್ರಾ.ಪಂ ಅಧ್ಯಕ್ಷೆ ಶಿವಗಂಗಾ ಅಂಬರೀಷ, ಇಇ ವಾಸುದೇವ ಅಗ್ನಿಹೋತ್ರಿ ಅನೇಕರು ವೇದಿಕೆಯಲ್ಲಿದ್ದರು. ಕಾಳಗಿ ತಹಶೀಲ್ದಾರ್ ನಾಗನಾಥ ತರಗೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಗ್ರಾಮಸ್ಥರು ವಿವಿಧ ಸೌಲಭ್ಯಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದಕ್ಕೂ ಮುಂಚೆ ಹಲಗೆ, ಡೊಳ್ಳು, ಪಟಾಕಿ ಸದ್ದಿನ ಮಧ್ಯೆ ಮೆರವಣಿಗೆಯೊಂದಿಗೆ ಗ್ರಾಮಸ್ಥರು ಜಿಲ್ಲಾಧಿಕಾರಿ ಅವರನ್ನು ಊರೊಳಗೆ ಬರಮಾಡಿಕೊಂಡರು.

ಉಪನ್ಯಾಸಕ ಮಲ್ಲಿಕಾರ್ಜುನ ಪಾಲಾಮೋರ ನಿರೂಪಿಸಿದರು. ರಾಚಯ್ಯಸ್ವಾಮಿ ಖಾನಾಪುರ ರೈತಗೀತೆ, ನಾಡಗೀತೆ ಪ್ರಸ್ತುತ ಪಡಿಸಿದರು.

ಮಾಸ್ಕ್ ಕೊಡಿಸಿದ ಡಿ.ಸಿ: ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ ಬಹಳಷ್ಟು ಜನರು ಪಾಲ್ಗೊಂಡಿದ್ದರು. ಈ ಎಲ್ಲರಿಗೆ ಮಾಸ್ಕ್ ಹಾಕಿಕೊಳ್ಳಲು ತಿಳಿಸಿ ಎಂದು ಡಿ.ಸಿ. ಅವರು ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಸ್ಥಳದಲ್ಲೇ ಎಲ್ಲರಿಗೂ ಮಾಸ್ಕ್ ಕೊಡಿಸಿದರು.

ಮಳೆ ಅಡ್ಡಿ: ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಿ ಊರೊಳಗಿನ ವಿವಿಧ ಸರ್ಕಾರಿ ಕಟ್ಟಡಗಳನ್ನು ವೀಕ್ಷಿಸಿ ಕೋಡ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿದರು.

ಬಳಿಕ ಅವರು ಹಿಂದಿರುಗಿ ವಿಶ್ರಾಂತಿ ಪೂರೈಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಲುವಾಗಿ ಸಂಜೆ 5ಕ್ಕೆ ವೇದಿಕೆಗೆ ಬರಬೇಕು ಎನ್ನುವಷ್ಟರಲ್ಲಿ ಧಾರಾಕಾರ ಮಳೆ ಸುರಿಯಲಾರಂಭಿಸಿತು. ಜಿಲ್ಲಾಧಿಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿಯೊಂದರಲ್ಲಿ ಆಶ್ರಯ ಪಡೆದರೆ, ವಿವಿಧ ಇಲಾಖೆ ಅಧಿಕಾರಿಗಳು, ಪೊಲೀಸರು, ಜನರು ಎಲ್ಲೆಂದರಲ್ಲಿ ಟೆಂಟ್, ದೇವಸ್ಥಾನ, ಶಾಲೆಯಲ್ಲಿ ನಿಂತುಕೊಂಡರು.

ರಭಸವಾದ ಮಳೆಗೆ ಶಾಮಿಯಾನ ತೊಯ್ದು ತೊಪ್ಪೆಯಾಯಿತು. ಆಗಾಗ ವಿದ್ಯುತ್ ಕೈಕೊಡುತಿತ್ತು. ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿ ಶಾಲಾ ಮಕ್ಕಳು ಮಳೆಯಲ್ಲಿ ತೋಯಿಸಿಕೊಂಡು ದಿಕ್ಕು ತೋಚದೆ ಮನೆಗೆ ಮರಳಿದರು. ಇದೇ ಮಳೆಯಲ್ಲೆ ಸಂಸದ ಡಾ.ಉಮೇಶ ಜಾಧವ ಹೊಸಳ್ಳಿ ಎಚ್. ಗ್ರಾಮಕ್ಕೆ ಬಂದು ಹೋದರು. ರಾತ್ರಿಯಾಗುತ್ತಿದ್ದಂತೆ ಜಿಲ್ಲಾಧಿಕಾರಿಗಳು ಶಾಲೆಯಲ್ಲಿ ವಾಸ್ತವ್ಯ ಮಾಡಿದರು. ಅಧಿಕಾರಿಗಳು ಸಾಥ್ ನೀಡಿದರು.

124 ಅರ್ಜಿ ಸಲ್ಲಿಕೆ; 33 ಅರ್ಜಿ ಸ್ಥಳದಲ್ಲಿಯೆ ಇತ್ಯರ್ಥ

ಹೊಸಳ್ಳಿ (ಎಚ್)ಯಲ್ಲಿ ಒಟ್ಟು 124 ಅರ್ಜಿ ಸ್ವೀಕೃತವಾಗಿದ್ದು, ಇದರಲ್ಲಿ 33 ಅರ್ಜಿಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.


ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ, ಗ್ರಂಥಾಲಯ ಕಟ್ಟಡ ಸ್ಥಾಪನೆ, ಪ್ರೌಢ ಶಾಲೆ ಸ್ಥಾಪನೆ, ಪಿಂಚಣಿ, ಪಹಣಿ ತಿದ್ದುಪಡಿ ಹೀಗೆ ವಿಭಿನ್ನ ಸಮಸ್ಯೆಗಳ ಅರ್ಜಿಗಳು ಸ್ವೀಕೃತವಾಗಿವೆ.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ 68 ಅರ್ಜಿ ಸ್ವೀಕೃತವಾಗಿದ್ದು, ಇದರಲ್ಲಿ ಪಿಂಚಣಿಗೆ ಸಂಬಂಧಿಸಿದ 33 ಅರ್ಜಿಗಳನ್ನು ಸ್ಥಳದಲ್ಲಿಯೇ ಬಗೆಹರಿಸಿ ಅರ್ಹ ಫಲಾನುಭವಿಗಳಿಗೆ ಆದೇಶ ಪತ್ರ ನೀಡಲಾಯಿತು. ಉಳಿದಂತೆ 35 ಅರ್ಜಿಗಳು ಪಹಣಿ ತಿದ್ದುಪಡಿಗೆ ಸಂಬಂಧಿಸಿದ್ದಾಗಿದ್ದು, ಮುಂದಿನ ಕ್ರಮ ಕೈಗೊಂಡಿದೆ.

ಇನ್ನುಳಿದಂತೆ 26 ತಾಲ್ಲೂಕು ಪಂಚಾಯತಿ, 4 ಕೃಷಿ ಇಲಾಖೆ, 12 ಪಂಚಾಯತ್ ರಾಜ್ ಇಲಾಖೆ, 4 ಭೂದಾಖಲೆಗಳ ಇಲಾಖೆ, 5 ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, 2 ಶಿಕ್ಷಣ ಇಲಾಖೆ, 2 ಜೆಸ್ಕಾಂ ಹಾಗೂ 2 ಸಾರಿಗೆ ಸಂಸ್ಥೆಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳು ಸ್ವೀಕೃತಗೊಂಡಿದ್ದು, ಇವುಗಳ ವಿಲೇವಾರಿಗೆ ಸಂಬಂಧಪಟ್ಟ ಇಲಾಖೆಗೆ ಅರ್ಜಿಗಳನ್ನು ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT