ಸೋಮವಾರ, ನವೆಂಬರ್ 18, 2019
22 °C
15 ದಿನಕ್ಕೊಮ್ಮೆ ಕಾಮಗಾರಿಗಳ ಪ್ರಗತಿ ಪರಿಶೀಲನೆ; ಜಿಲ್ಲಾಧಿಕಾರಿ ಶರತ್

‘ಕಾಮಗಾರಿ ತ್ವರಿತಗೊಳಿಸಲು ಅಲ್ಪಾವಧಿ ಟೆಂಡರ್‌ ಕರೆಯಿರಿ’

Published:
Updated:
Prajavani

ಕಲಬುರ್ಗಿ: ನಗರ–ಪಟ್ಟಣ ಪ್ರದೇಶದಲ್ಲಿ ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಇದುವರೆಗೆ ಅರಂಭಿಸದ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡಿ. ಆರ್ಥಿಕ ವರ್ಷ ಮುಗಿಯಲು ಕೇವಲ 5 ತಿಂಗಳು ಬಾಕಿ ಇರುವುದರಿಂದ ದೀರ್ಘಾವಧಿ ಟೆಂಡರ್ ಬದಲು ಅಲ್ಪಾವಧಿ ಟೆಂಡರ್ ಕರೆದು ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ಶರತ್‌ ಬಿ. ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಭೌತಿಕ ಕಾಮಗಾರಿ ಮುಗಿದಿದ್ದಲ್ಲಿ ಆರ್ಥಿಕ ಪ್ರಗತಿ ಸಾಧಿಸಿ. ಒಟ್ಟಾರೆ ಬರುವ ಮಾರ್ಚ್‌ನೊಳಗೆ ಭೌತಿಕ ಮತ್ತು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ನಗರ ಸೇರಿದಂತೆ ಜಿಲ್ಲೆಯ ನಗರ-ಪಟ್ಟಣ ಪ್ರದೇಶದಲ್ಲಿ ಬೀದಿ ದೀಪಗಳನ್ನು ದಿನದಲ್ಲಿಯೂ ಉರಿಸಲಾಗುತ್ತಿದೆ. ವಿದ್ಯುತ್ ಸಂಪನ್ಮೂಲ ಸಂಗ್ರಹಣೆ ನಿಟ್ಟಿನಲ್ಲಿ ಅನಗತ್ಯ ದಿನದಲ್ಲಿಯೂ ವಿದ್ಯುತ್ ದೀಪಗಳು ಉರಿಯದಂತೆ ಎಚ್ಚರಿಕೆ ವಹಿಸಿ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಸಾರ್ವಜನಿಕರ ತೆರಿಗೆ ಹಣದಿಂದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಮರೆಯಬಾರದು. ಸ್ವೀಕೃತ ತೆರಿಗೆ ಹಣವನ್ನು ಸ್ಥಳೀಯರ ಶ್ರೇಯೋಭಿವೃದ್ಧಿಗೆ ವಿನಿಯೋಗಿಸಬೇಕು. ತೆರಿಗೆ ಹಣವನ್ನು ದುಂದು ವೆಚ್ಚ ಮಾಡಬಾರದು. ಮುಂದಿನ 15 ದಿನದೊಳಗೆ ಬಾಕಿ ಕಾಮಗಾರಿಗಳನ್ನು ಮುಗಿಸುವಂತೆ ತಾಕೀತು ಮಾಡಿದರು.

ಯಾವುದೇ ಕಾರಣಕ್ಕೂ ಕಾಮಗಾರಿ ನಿಧಾನಗತಿಗೆ ಕಾರಣ ಹೇಳುವುದನ್ನು ಬಿಡಿ. ಕಚೇರಿಯಲ್ಲಿ ಆಗಾಗ ಸಿಬ್ಬಂದಿಯೊಂದಿಗೆ ಪ್ರಗತಿ ಪರಿಶೀಲನೆ ಕೈಗೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲು ಮುತುವರ್ಜಿ ವಹಿಸಬೇಕು. ಅಧಿಕಾರಿಗಳು ಖುದ್ದಾಗಿ ಮುತುವರ್ಜಿ ವಹಿಸಿದಾಗ ಮಾತ್ರ ಕಾಲಮಿತಿಯಲ್ಲಿ ಯೋಜನೆಗಳು ಪೂರ್ಣಗೊಳಿಸಲು ಸಾಧ್ಯ ಎಂದರು.

15 ದಿನಕ್ಕೊಮ್ಮೆ ಸಭೆ: ಜಿಲ್ಲಾ ನಗರಾಭಿವೃದ್ಧಿ ಕೋಶ, ಮಹಾನಗರ ಪಾಲಿಕೆ ಮತ್ತು ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚಾಲ್ತಿಯಲ್ಲಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ 15 ದಿನಕೊಮ್ಮೆ ಕಡ್ಡಾಯವಾಗಿ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ವಸತಿ ಯೋಜನೆಯಲ್ಲಿ ಪ್ರಗತಿ ಸಾಧಿಸಿ: ವಸತಿ ಯೋಜನೆಯಡಿ ಫಲಾನುಭವಿಗಳ ಮನೆ ನಿರ್ಮಾಣದ ವಾಸ್ತವ ಸ್ಥಿತಿಯನ್ನು ಕಾಲಕಾಲಕ್ಕೆ ಕ್ಷೇತ್ರದ ಸಿಬ್ಬಂದಿಗಳು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಬೇಕಾಗಿರುತ್ತದೆ. ಇದನ್ನು ಮಾಡದ ಕಾರಣ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧನೆಗೆ ಅಡ್ಡಿಯಾಗುತ್ತಿದ್ದು, ಇದು ಸಹಿಸಲು ಸಾಧ್ಯವಿಲ್ಲ. ಮುಖ್ಯಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ತ್ವರಿತಗತಿಯಲ್ಲಿ ವಸತಿ ಯೋಜನೆಯನ್ನು ಪೂರ್ಣಗೊಳಿಸಿ ಎಂದರು.

ಡಿ.ಯು.ಡಿ.ಸಿ ಕಾರ್ಯನಿರ್ವಾಹಕ ಎಂಜಿನಿಯರ್‌ ಶಿವನಗೌಡ ಪಾಟೀಲ ಮಾತನಾಡಿ, ಸಿ.ಎಂ.ಎಸ್. ಟಿ.ಡಿ.ಪಿ. 2ನೇ ಹಂತದ ಯೋಜನೆಯಡಿ ಒಟ್ಟಾರೆ 84 ಕಾಮಗಾರಿಗಳನ್ನು ತೆಗೆದುಕೊಂಡು 81 ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಿಡುಗಡೆಯಾದ ₹ 54.01 ಕೋಟಿಯಲ್ಲಿ 51.99 ಕೋಟಿ ಖರ್ಚು ಮಾಡಲಾಗಿದೆ. ಚಿಂಚೋಳಿಯ ಸೇತುವೆ ಸೇರಿ 3 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸೋಮಪ್ಪ ಕಡಕೋಳ, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಕಾರ್ಯಪಾಲಕ ಎಂಜಿನಿಯರರು, ಕಿರಿಯ ಎಂಜಿನಿಯರ್‌ಗಳು ಇದ್ದರು.

ಪ್ರತಿಕ್ರಿಯಿಸಿ (+)