ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲ್ಯ ವಿವಾಹ ತಡೆ ಇನ್ನಷ್ಟು ಚುರುಕಾಗಲಿ: ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ

ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಗಳ ಸಭೆಯಲ್ಲಿ ಸೂಚನೆ
Last Updated 4 ಫೆಬ್ರುವರಿ 2021, 15:12 IST
ಅಕ್ಷರ ಗಾತ್ರ

ಕಲಬುರ್ಗಿ: ‘ಜಿಲ್ಲೆಯಲ್ಲಿ ಪ್ರಸಕ್ತ (2020-21) ಸಾಲಿನಲ್ಲಿ ಬಾಲ್ಯ ವಿವಾಹ ತಡೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಟೋಲ್ ಫ್ರೀ ಸಂಖ್ಯೆ (1098)ಗೆ ಬಂದ ದೂರುಗಳ ಕುರಿತಂತೆ ಮುಂದಿನ ಒಂದು ವಾರದೊಳಗೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ. ಜೋತ್ಸ್ನಾ ಅವರು ಅಧಿಕಾರಿಗಳಿಗೆ ಸೂಚಿಸಿದರು.

ನಗರದಲ್ಲಿ ಗುರುವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವಿವಿಧ ಜಿಲ್ಲಾ ಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2020-21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 89 ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಯಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಸಭೆಗೆ ಮಾಹಿತಿ ನೀಡಿದರು. ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಟೋಲ್ ಫ್ರೀ ಸಂಖ್ಯೆ ಬಂದ ಕರೆ ಎಷ್ಟು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಚೈಲ್ಡ್ ಲೈನ್ ಸಂಯೋಜಕ ಬಸವರಾಜ ಅವರು 110 ಬಾಲ್ಯ ವಿವಾಹ ಆಗುವ ಪ್ರಕರಣಗಳು ಸೇರಿದಂತೆ 154 ಹುಸಿ ಕರೆಗಳ ಮಾಹಿತಿ ಬಂದಿವೆ ಎಂದರು. ಈ ಹಿನ್ನೆಲೆಯಲ್ಲಿ ಪ್ರತಿ ಸಿಡಿಪಿಒಗಳು ತಮ್ಮ ತಾಲ್ಲೂಕಿನ ಎಲ್ಲಾ ಪ್ರಕರಣಗಳ ಸಮಗ್ರ ವರದಿ ನೀಡುವಂತೆ ಡಿ.ಸಿ ಸೂಚಿಸಿದರು.

ಇದಲ್ಲದೇ, ಬಾಲ್ಯ ವಿವಾಹ ತಡೆಗಟ್ಟಲು ಐ.ಇ.ಸಿ. ಚಟುವಟಿಕೆಗಳನ್ನು ತೀವ್ರಗೊಳಿಸಬೇಕು. ಪ್ರಕರಣ ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಎಫ್.ಐ.ಆರ್. ದಾಖಲಿಸಬೇಕು ಎಂದೂ ನಿರ್ದೇಶನ ನೀಡಿದರು.

ಜಿಲ್ಲೆಯ ನಿರ್ಗತಿಕ, ನಿರಾಶ್ರಿತ, ವಿಧವೆಯರು, ವಿಚ್ಛೇದಿತರು ಹಾಗೂ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ವಾಸಿಸಲೆಂದೇ ಕಲಬುರ್ಗಿ ನಗರದಲ್ಲಿ 2 ಸ್ವಾಧಾರ ಗೃಹಗಳು ಕಾರ್ಯನಿರ್ವಹಿಸುತ್ತಿವೆ. ಇಲ್ಲಿ 60 ಮಹಿಳೆಯರು ವಾಸವಿದ್ದಾರೆ. ಮಹಿಳೆಯರಿಗೆ ಕಂಪ್ಯೂಟರ್, ಟೇಲರಿಂಗ್ ಒಳಗೊಂಡಂತೆ ಉತ್ತಮ ಆದಾಯ ನೀಡುವ ವೃತ್ತಿಗಳ ತರಬೇತಿ ನೀಡಿ ಅವರನ್ನು ತಮ್ಮ ಬದುಕು ತಾವೇ ಕಟ್ಟಿಕೊಳ್ಳಲು ಶಕ್ತರನ್ನಾಗಿಸಬೇಕು ಮತ್ತು ವಿವಿಧ ಸರ್ಕಾರಿ ಸೌಲಭ್ಯಗಳನ್ನು ಇಂತಹ ಫಲಾನುಭವಿಗಳಿಗೆ ದೊರಕುವಂತಾಗಬೇಕು ಎಂದರು.

ನಗರ ಮತ್ತು ಗ್ರಾಮೀಣ ಪ್ರದೆಶದಲ್ಲಿರುವ ಮಾಜಿ ದೇವದಾಸಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಮತ್ತು ನಿವೇಶನ ಹೊಂದಿದವರಿಗೆ ಮನೆ ನಿರ್ಮಿಸಿ ಕೊಡಬೇಕಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಡಿಯುಡಿಸಿ ಯೋಜನಾ ನಿರ್ದೇಶಕರು ಸಮನ್ವಯ ಸಾಧಿಸಿಕೊಂಡು ಅರ್ಹ ಫಲಾನುಭವಿಗಳನ್ನು ಗುರುತಿಸಿ ನಿವೇಶನ/ ಮನೆ ಮಂಜೂರು ಮಾಡಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಲೈಂಗಿಕ ಅಲ್ಪಸಂಖ್ಯಾತರೊಬ್ಬರು ಮಾತನಾಡಿ, ‘ತಮಗೆ ಸರ್ಕಾರದಿಂದ ₹ 500 ಮಾಸಾಶನ ನೀಡುವ ಯೋಜನೆ ಇದೆ. ಇಲ್ಲಿನ ಕಂದಾಯ ಇಲಾಖೆಯಲ್ಲಿ ಯೋಜನೆಯ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲದ ಕಾರಣ ಮಾಸಾಶನ ತಮಗೆ ಸರಿಯಾಗಿ ತಲುಪುತ್ತಿಲ್ಲ. ಅಲ್ಲದೇ, ಮನೆಯಿಲ್ಲದೆ ಬಹಳಷ್ಟು ಜನ ಲೈಂಗಿಕ ಅಲ್ಪಸಂಖ್ಯಾತರಿದ್ದು, ಇವರಿಗೆ ಮನೆ ಮಂಜೂರು ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿ.ಆರ್.ಶೆಟ್ಟರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ್ ಮಾಲಿ, ಜಿಲ್ಲಾ ಶಸ್ತ್ರಜ್ಞ ಡಾ.ಅಂಬಾರಾಯ ರುದ್ರವಾಡಿ, ಡಿ.ಎಸ್.ಪಿ. ಜೇಮ್ಸ್ ಮಿನೇಜಸ್, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಎಸ್.ಎನ್.ಹಿರೇಮಠ, ಆಹಾರ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ, ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಕಿಶೋರಕುಮಾರ ದುಬೆ, ವಿವಿಧ ತಾಲ್ಲೂಕುಗಳ ಸಿಡಿಪಿಒಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಸಲಹೆಗಾರ ಭರತೇಶ ಶೀಲವಂತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT