ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇಡಂ: ಸಮಸ್ಯೆಗಳ ಶೀಘ್ರ ಇತ್ಯರ್ಥಕ್ಕೆ ಸೂಚನೆ

ಜನರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್
Last Updated 6 ಜುಲೈ 2022, 10:59 IST
ಅಕ್ಷರ ಗಾತ್ರ

ಸೇಡಂ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಜನರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಈ ವೇಳೆ ಕೇಳಿಬಂದ ಸಮಸ್ಯೆಗಳನ್ನು ತಕ್ಷಣವೇ ಇತ್ಯರ್ಥ ಪಡಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಬರುವ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯ ಜನರು ತಹಶೀಲ್ದಾರ್ ಕಚೇರಿ ಎದುರು ನೆರೆದಿದ್ದರು. ಬೆಳಿಗ್ಗೆ 11.40ಕ್ಕೆ ಬಂದ ಜಿಲ್ಲಾಧಿಕಾರಿ, ತಹಶೀಲ್ದಾರ್ ಕೊಠಡಿಯಲ್ಲಿ ಜನರ ಸಮಸ್ಯೆಗಳನ್ನು ಸರತಿಯಂತೆ ಆಲಿಸಿದರು. ಜನರಿಂದ ಅಹವಾಲು ಸ್ವೀಕರಿಸಲು ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ನೋಂದಣಿ ಮಾಡಿಕೊಂಡು ಜನರನ್ನು ಒಳಗಡೆ ಬಿಟ್ಟರು.

ಪುರಸಭೆ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಗೆ ಸಂಬಂಧ ಪಟ್ಟ ಸುಮಾರು 60ಕ್ಕೂ ಅಧಿಕ ಅಹವಾಲುಗಳು ಬಂದಿವೆ. ಸುಮಾರು 5-6 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ. ಉಳಿದ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ ಎಂದು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ್ ಮಾಹಿತಿ ನೀಡಿದರು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಯಶವಂತ ಗುರುಕರ್, ಕೊಳಗೇರಿ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಸೇಡಂನಲ್ಲಿ ನಿರ್ಮಾಣವಾಗುತ್ತಿರುವ ಮನೆಗಳು ಅರ್ಧಕ್ಕೆ ನಿಂತಿವೆ ಎಂಬ ದೂರಿನ ಅರ್ಜಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸೇಡಂ ಪಟ್ಟಣದ ಕೋಳಿವಾಡದ ಕಸಾಯಿಖಾನೆ ಸ್ಥಳಾಂತರಕ್ಕೆ ಅರ್ಜಿ ಬಂದಿದ್ದು, ಕಸಾಯಿಖಾನೆ ಸ್ಥಳಾಂತರದ ಕುರಿತು ಪುರಸಭೆ ಅಧಿಕಾರಿಯೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು. ತಾಲ್ಲೂಕಿನ ನಾಡೆಪಲ್ಲಿ ಗ್ರಾಮದಲ್ಲಿ ಪೋಡಿ, ಹಿಸ್ಸಾ ಮಾಡುವ ಸಂಬಂಧ ದೂರು ಬಂದಿದೆ. ಕದ್ಲಾಪೂರದಲ್ಲಿ ಆಶ್ರಯ ಯೋಜನೆಯಡಿ ಹಕ್ಕಪತ್ರ ನೀಡಿದ್ದು, ವಾಸ್ತವದಲ್ಲಿ ಅಲ್ಲಿ ಜನರು ಇರಲಿಲ್ಲ. ಈ ಸಂಬಂಧ ಸ್ಥಳಕ್ಕೆ ತೆರಳಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸೂಚಿಸಿದ್ದೇನೆ. ಇದರಿಂದ ಸುಮಾರು 40-50 ಜನರಿಗೆ ಅನುಕೂಲವಾಗುತ್ತದೆ’ ಎಂದರು.

ಇದೇ ವೇಳೆ ಜೆಡಿಎಸ್ ಮುಖಂಡ ಬಾಲರಾಜ್ ಗುತ್ತೇದಾರ, ಸೇಡಂ ತಾಲ್ಲೂಕಿನ ವಿದ್ಯುತ್ ಸಮಸ್ಯೆ, ಸಾಮೂಹಿಕ ಶೌಚಾಲಯ, ವಿದ್ಯಾರ್ಥಿಗಳಿಗೆ ಬಸ್‌ ಸಮಸ್ಯೆ, ಶಾಲಾ ಕಟ್ಟಡಗಳು ಬಿರುಕು ಬಿಟ್ಟಿವೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು. ತಾಲ್ಲೂಕಿನ ಆಡಕಿ, ಮಾದ್ವಾರ ಗ್ರಾಮದ ಸೇತುವೆ ಕಳಪೆ ಕಾಮಗಾರಿಯಿಂದ ಕೂಡಿದೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮುಕ್ರಂಖಾನ್ ಜಿಲ್ಲಾಧಿಕಾರಿಗೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT