ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ಯಾಜೆಟ್‌ಗಳ ಅತಿಬಳಕೆ ಅಪಾಯಕಾರಿ ವ್ಯಸನ: ಫೌಜಿಯಾ ತರನ್ನುಮ್ ಅಭಿಮತ

ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ, ವ್ಯಸನ ಮುಕ್ತ ದಿನಾಚರಣೆ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಭಿಮತ
Published 3 ಆಗಸ್ಟ್ 2024, 15:38 IST
Last Updated 3 ಆಗಸ್ಟ್ 2024, 15:38 IST
ಅಕ್ಷರ ಗಾತ್ರ

ಕಲಬುರಗಿ: ‘ಮದ್ಯಪಾನದಂಥ ಚಟಗಳಿಂತಲೂ ಯುವಜನರು ಮೊಬೈಲ್‌ ಫೋನ್‌ ಹಾಗೂ ಎಲೆಕ್ಟ್ರಾನಿಕ್‌ ಉಪಕರಣಗಳಿಗೆ(ಗ್ಯಾಜೆಟ್ಸ್) ದಾಸರಾಗುತ್ತಿರುವುದು ಅಪಾಯಕಾರಿ ವ್ಯಸನ’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಭಿಪ್ರಾಯಪಟ್ಟರು.

ನಗರದ ‌ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಸ್ಟಿಸ್ ಶಿವರಾಜ ಪಾಟೀಲ ಪ್ರತಿಷ್ಠಾನ ಹಾಗೂ ಸರ್ವಜ್ಞ ಪದವಿ ಪೂರ್ವ ಕಾಲೇಜಿನಿಂದ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಎಲೆಕ್ಟ್ರಾನಿಕ್‌ ಉಪಕರಣಗಳ ಅವ್ಯಾಹತ ಬಳಕೆಯಿಂದ ಸಮಯದ ಮೇಲಿನ ನಿಯಂತ್ರಣ ತಪ್ಪುತ್ತಿದೆ. ಸಾಮಾಜಿಕ ಜಾಲತಾಣ ತೆರೆದು ಕಣ್ಣಾಡಿಸುತ್ತ ಕುಳಿತರೆ, ನಾಲ್ಕು ತಾಸು ಕಳೆದಿದ್ದೇ ಗೊತ್ತಾಗಲ್ಲ. ನಾಲ್ಕು ಗಂಟೆ ಸರಿಯಾಗಿ ಬಳಸಿದರೆ ಜೀವನದಲ್ಲಿ ಮಹತ್ತರ ಸಾಧನೆ ಮಾಡಬಹುದು. ಅದಕ್ಕೆ ನನ್ನ ಬದುಕೇ ನಿದರ್ಶನ. ಕಂದಾಯ ಸೇವೆ ಅಧಿಕಾರಿಯಾಗಿದ್ದ ನಾನು ಕೆಲಸದೊಂದಿಗೆ ನಿತ್ಯ ನಾಲ್ಕು ತಾಸು ಅಧ್ಯಯನ ಮಾಡಿದ್ದ ಫಲವಾಗಿ ನಾನು ನಿಮ್ಮ ಮುಂದೆ ಜಿಲ್ಲಾಧಿಕಾರಿಯಾಗಿ ಬಂದು ನಿಲ್ಲಲು ಸಾಧ್ಯವಾಯಿತು’ ಎಂದರು.

‘ಜೀವನ ಯಾವಾಗಲೂ ಕಷ್ಟಕರವಾಗಿಯೇ ತೋರುತ್ತದೆ. ಆದರೆ, ಜೀವನ ಸುಂದರವಾದ ಅವಕಾಶ. ನಾವು ನಿತ್ಯವೂ ಕೃತಜ್ಞತೆಯೊಂದಿಗೆ ದಿನವನ್ನು ಆರಂಭಿಸಿದ್ದೆಯಾದರೆ, ಜೀವನ ನಮಗೆ ಸುಲಭವಾಗುತ್ತದೆ’ ಎಂದರು.

‘ಯಾವುದೇ ದೊಡ್ಡ ಕನಸು ಸಾಕಾರಕ್ಕೆ ದೃಢ ವಿಶ್ವಾಸದೊಂದಿಗೆ ಪರಿಶ್ರಮಪಟ್ಟರೆ, ಆ ಕನಸು ನನಸಾಗುತ್ತದೆ. ಜೀವನದಲ್ಲಿ ದೊಡ್ಡ ದೃಷ್ಠಿಕೋನ, ಉನ್ನತ ಮೌಲ್ಯಗಳು ಹಾಗೂ ಅಚಲ ಬದ್ಧತೆ ಇಟ್ಟುಕೊಳ್ಳಬೇಕು. ಸಾಧನೆಯ ಹಾದಿಯಲ್ಲಿ ಸುಲಭವಾಗಿ ಸೋಲೊಪ್ಪಿಕೊಳ್ಳಬಾರದು. ನಿಮ್ಮ ಮೇಲೆ ನಿಮಗೆ ಅಚಲ ವಿಶ್ವಾಸವಿರಬೇಕು’ ಎಂದು ಕಿವಿಮಾತು ಹೇಳಿದರು.

ಬೆಂಗಳೂರು ಬಸವ‌ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಮಾತನಾಡಿ, ‘ಸಮಾಜ ತಾಂತ್ರಿಕವಾಗಿ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ. ಆದರೆ, ನೈತಿಕವಾಗಿ ಅಧಃಪತನದತ್ತ ಸಾಗುತ್ತಿದೆ. ಇದಕ್ಕೆಲ್ಲ ಬಸವಣ್ಣನವರ ವಚನಗಳೇ ಪರಿಹಾರ’ ಎಂದರು.

‘ಬಸವ ನಾಡಿನ ಜೀವಿಗಳೆಲ್ಲ ಅಂಗ‌ಜೀವಿಗಳಲ್ಲ, ಬದಲಾಗಿ ಲಿಂಗಜೀವಿಗಳು. ಅಂಗ‌ಜೀವಿಗಳಾದರೆ ವ್ಯಸನಗಳು ಕಾಡಬಹುದು. ಹೀಗಾಗಿ ನಾವೆಲ್ಲ ಅಂಗದಿಂದ ಲಿಂಗದತ್ತ ನಡೆದರೆ ವ್ಯಸನ ಮುಕ್ತರಾಗುತ್ತೇವೆ’ ಎಂದರು.

ಜಸ್ಟಿಸ್ ಶಿವರಾಜ ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ, ನಿವೃತ್ತ ನ್ಯಾಯಾಧೀಶ ಎಸ್.ಎಂ.ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸರ್ವಜ್ಞ ಶಿಕ್ಷಣ ಸಂಸ್ಥೆಗಳ‌ ಸಮೂಹದ ಸಂಸ್ಥಾಪಕ ಪ್ರೊ. ಚನ್ನಾರಡ್ಡಿ ಪಾಟೀಲ ಉಪಸ್ಥಿತರಿದ್ದರು. ಡಿಡಿಪಿಯು ಶಿವಶರಣಪ್ಪ ಮೂಳೆಗಾಂವ ಮುಖ್ಯ ಅತಿಥಿಗಳಾಗಿ‌ ಪಾಲ್ಗೊಂಡಿದ್ದರು. ಅಭಿಷೇಕ ಪಾಟೀಲ, ಸಂಗೀತಾ ಪಾಟೀಲ, ಪ್ರಶಾಂತ ಕುಲಕರ್ಣಿ ವೇದಿಕೆಯಲ್ಲಿದ್ದರು.

ದುಶ್ಚಟಗಳ ಜೋಳಿಗೆಯನ್ನು ಕಾಣಿಕೆ ಪೆಟ್ಟಿಗೆ ಮಾಡಿಕೊಂಡಿದ್ದ ಮಹಾಂತ ಶಿವಯೋಗಿಗಳ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ದೇಶದ ಜೀವಾಳ ಅನ್ನದಾತರ ಗೌರವಾರ್ಥ ವಿದ್ಯಾರ್ಥಿಗಳು ರೈತ ಗೀತೆಗೆ ನೃತ್ಯ ‌ಮಾಡಿದರು. ದ್ವಿತೀಯ ‌ಪಿಯುಸಿ‌ಯ ಐವರು ವಿದ್ಯಾರ್ಥಿನಿಯರು, ಐವರು ವಿದ್ಯಾರ್ಥಿಗಳು ಪ್ರಥಮ ಪಿಯುಸಿಯ ಐವರು ವಿದ್ಯಾರ್ಥಿನಿಯರು ಹಾಗೂ ಐವರು ವಿದ್ಯಾರ್ಥಿಗಳಿಗೆ ಪುಷ್ಪ‌ ನೀಡುವ ಮೂಲಕ‌ ಸ್ವಾಗತಿಸಿದರು.

‘ಚಟ ಬದುಕಿಗೆ ವೈರಿ ಮಾರಿ’ ವಿಶೇಷ ಉಪನ್ಯಾಸ ನೀಡಿದ ಮುದಗಲ್‌–ತಿಮ್ಮಾಪುರ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿ ಮಾತನಾಡಿ ‘ಮನುಷ್ಯ ಜೀವನ ನಮ್ಮೆಲ್ಲರಿಗೂ ಸಿಕ್ಕಿರುವ ಅತ್ಯಮೂಲ್ಯ ಅವಕಾಶ. ದೇವರು ಸೃಷ್ಟಿ ಕೊಟ್ಟಿರುವ ಬೆಲೆಯುಳ್ಳ ಬದುಕನ್ನು ವ್ಯಸನಗಳಿಗೆ ದಾಸರಾಗಿಸದೇ ಸಾಧನೆಗೆ ಸೋಪಾನವಾಗಿಸಬೇಕು’ ಎಂದರು. ‘ಚಟ ಬದುಕಿಗೆ ವೈರಿ ಮಾರಿ. ವ್ಯಸನಗಳು ಮಾನವ ಸಮಾಜವನ್ನು ಹಾಳು ಮಾಡುತ್ತಿವೆ. ವ್ಯಸನಗಳಿಂದಾಗಿ ಹಳ್ಳಿ ಜನರ ಬದುಕು ನರಕವಾಗಿ ಬದಲಾಗುತ್ತಿದೆ. ಯುವಜನರು ವಿದ್ಯಾರ್ಥಿ ಜೀವನದಲ್ಲಿ ಆದರ್ಶಯುತ ಮೌಲ್ಯಗಳನ್ನು ಬದುಕಿನಲ್ಲಿ ತುಂಬಿಕೊಳ್ಳಬೇಕು. ವ್ಯಸನಮುಕ್ತ ಬದುಕು ಕಳೆಯುವ ಸಂಕಲ್ಪ ಮಾಡಬೇಕು’ ಎಂದು ಕಿವಿಮಾತು ಹೇಳಿದರು. ಬಳಿಕ ನೆರೆದಿದ್ದ ನೂರಾರು ಮಂದಿಗೆ ವ್ಯಸನಮುಕ್ತರಾಗುವ ಪ್ರತಿಜ್ಞಾ ವಿಧಿ ಬೋಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT