ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣ ಉಳಿಸಲು ಹೊರಟವರೇ ಪ್ರಾಣತೆತ್ತಾಗ..!

ಭೂಮಿಗೆ ಬರುವ ಮುನ್ನವೇ ಉಸಿರು ನಿಲ್ಲಿಸಿದ ಕಂದಮ್ಮ, ಸೂತಕಕ್ಕೆ ತಿರುಗಿದ ಚೊಚ್ಚಲ ಹೆರಿಗೆ ಸಂಭ್ರಮ
Last Updated 27 ಸೆಪ್ಟೆಂಬರ್ 2020, 16:13 IST
ಅಕ್ಷರ ಗಾತ್ರ

ಕಲಬುರ್ಗಿ: ತುಂಬು ಗರ್ಭಿಣಿ ಹಾಗೂ ಅವರ ಹೊಟ್ಟೆಯಲ್ಲಿ ಕುಡಿಯೊಡೆದ ಕಂದಮ್ಮನ ಜೀವ ಉಳಿಸಲು ಹೊರಟವರೇ ತಮ್ಮ ಪ್ರಾಣತೆತ್ತ ದಾರುಣ ಘಟನೆ ಇದು. ನಗರದಿಂದ ಕೇವಲ 15 ಕಿ.ಮೀ ದೂರದಲ್ಲಿವಾಗ್ಧರಿ– ರಿಬ್ಬನಪಲ್ಲಿ ಹೆದ್ದಾರಿಯ ಮೇಲೆ ಜವರಾಯ ಅವರಿಗಾಗಿ ಕಾದು ಕುಳಿತಿದ್ದ. ಯಾರೂ ನಿರೀಕ್ಷೆ ಮಾಡದ ರೀತಿಯಲ್ಲಿ ಏಳು ಜನರ ಪ್ರಾಣ ಕಿತ್ತುಕೊಂಡ. ಪರಸ್ಪರ ಸಂಬಂಧಿಕರೇ ಆದ ಇವರ ಕುಟುಂಬದಲ್ಲಿ ಈಗ ಶವಗಳ ಮುಂದೆ ಅಳುವುದಕ್ಕೆ ಹೆಣ್ಣುಮಕ್ಕಳೇ ಉಳಿದಿಲ್ಲ!

ನಗರ ಸಮೀಪದ ಸಾವಳಗಿ ಕ್ರಾಸ್‌ ಬಳಿ ಭಾನುವಾರ ನಸುಕಿನ 4.30ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಏಳು ಜನ ಪ್ರಾಣ ಕಳೆದುಕೊಂಡು, ಒಬ್ಬ ಮಹಿಳೆ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ.

ಇನ್ನೂ ಕೇವಲ 20 ನಿಮಿಷ ಕಳೆದಿದ್ದರೆ ಸಾಕು; ಅವರೆಲ್ಲ ಸುಸೂತ್ರವಾಗಿ ನಗರ ಸೇರಿ, ಗರ್ಭಿಣಿಯ ಹೆರಿಗೆಯನ್ನು ಸಂಭ್ರಮಿಸುತ್ತಿದ್ದರು. ತನ್ನ ಗರ್ಭದಲ್ಲಿ ಮೂಡಿದ ಕರುಳಕುಡಿಯನ್ನು ಬಾಣಂತಿಯು ಮಡಿಲಲ್ಲಿ ಆಡಿಸುತ್ತಿದ್ದರು, ಅಜ್ಜಿ– ತಾತ ತಮ್ಮ ಮೊಮ್ಮಗುವನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು, ಮಗಳ ಚೊಚ್ಚಲ ಹೆರಿಗೆಗೆ ತಾಯಿ ಗಡಿಬಿಡಿಯಲ್ಲಿ ಸಂಭ್ರಮಿಸುತ್ತಿದ್ದರು, ತಂಗಿಯ ಮಗುವನ್ನು ಎತ್ತಿಕೊಳ್ಳುವ ಕಾತರದಲ್ಲಿ ಬಂದಿದ್ದ ಸೋದರ ಮಾವ... ಆದರೆ, ವಿಧಿ ಆಟ ಬೇರೆಯೇ ಆಗಿತ್ತು. ಗರ್ಭದಲ್ಲಿದ್ದ ಕೂಸು ಹೊರಗಿನ ಪ್ರಪಂಚವನ್ನು ನೋಡುವ ಮುನ್ನವೇ ಕಣ್ಣುಮುಚ್ಚಿತು. ಕೂಸಿನ ತಾಯಿ, ಅಜ್ಜಿ, ತಾತ, ಮಾವ, ಸೋದರ ಬಂಧುಗಳೂ ಇಹಲೋಕ ತ್ಯಜಿಸಿದರು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ತಂದೆ ಕೂಡ ದುಬೈನ ಖತಾರ್‌ ನಗರದಲ್ಲಿ ಕಣ್ಣೀರಾಗಿದ್ದಾರೆ!

ಮರಣೋತ್ತರ ಪರೀಕ್ಷೆಗೆ ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ದೇಹಗಳನ್ನು ಸಾಗಿಸಲಾಯಿತು. ಸ್ಥಳಕ್ಕೆ ಧಾವಿಸಿದ ಕುಟುಂಬದ ಸಂಬಂಧಿಕರನ್ನು ಸಂತೈಸದ ಪರಿಸ್ಥಿತಿ.ಆರ್ಥಿಕವಾಗಿ ಸಶಕ್ತರಾದ ಈ ಕುಟುಂಬಗಳಲ್ಲಿ ಹಲವರು ವಿವಿಧ ಉದ್ಯೋಗ ಮಾಡಿಕೊಂಡಿದ್ದಾರೆ. ಆದರೆ, ಇಡೀ ಕುಟುಂಬದಲ್ಲಿ ಈಗ ಯಾರು ಯಾರಿಗೂ ಸಮಾಧಾನ ಮಾಡುವ ಸ್ಥಿತಿ ಇಲ್ಲ.

ಸ್ಮಶಾನ ಮೌನ: ಆಳಂದ ಪಟ್ಟಣದ ಖಾಯತ ಸ್ಟಯಿಲೊ ಟೇಲರ್‌ ಅವರ ಕುಟುಂಬದಲ್ಲಿ ಸಂಭವಿಸಿದ ಈ ದುರಂತಕ್ಕೆ ಪಟ್ಟಣದಲ್ಲಿ ಸ್ಮಶಾನ ಮೌನ ಆವರಿಸಿದೆ. ಸಗರಿ ಗಲ್ಲಿ, ಸುಲ್ತಾನಪುರ ಗಲ್ಲಿ ಹಾಗೂ ಮಟಕಿ ರಸ್ತೆಯಲ್ಲಿನ ಚೌಸ್‌, ಮುಚ್ಚಾಲೆ, ಟಪ್ಪೆವಾಲೆ, ಸಗರಿ ಕುಟುಂಬದ ಮನೆಗಳಲ್ಲಿ ದುಃಖ ಮಡುಗಟ್ಟಿದೆ.

ಸಂತೈಸುವ ಮನಸ್ಸುಗಳು ಸಹ ಶವದ ನಿರೀಕ್ಷೆಯಲ್ಲಿ ದಿನವಿಡೀ ಕಾಯುತ್ತ ಕುಳಿತ ದೃಶ್ಯ ಮನಕಲಕುವಂತಿತ್ತು. ಮರಣೋತ್ತರ ಪರೀಕ್ಷೆ ನಂತರ ಆಳಂದ ಪಟ್ಟಣದಲ್ಲಿ ಸಂಜೆ ಮೃತರ ಸಾಮೂಹಿಕ ಅಂತ್ಯಕ್ರಿಯೆ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು ಭಾರವಾದ ಹೆಜ್ಜೆ ಹಾಕುತ್ತಲೆ ಕತ್ತಲಲ್ಲಿ ಕಣ್ಣೀರು ಸುರಿಸಿದರು.

ಹೆದ್ದಾರಿಯಲ್ಲಿ ಮರಣ ಮೃದಂಗ:ವಾಗ್ದರಿ– ರಿಬ್ಬನಪಲ್ಲಿ ರಾಜ್ಯ ಹೆದ್ದಾರಿಯಲ್ಲಿ ಪದೇಪದೇ ಇಂತ ಅಪಘಾತಗಳು ಸಂಭವಿಸುತ್ತಲೇ ಇವೆ. ಇದರಿಂದಾಗಿ ವಾಹನ ಸವಾರರು ಇದನ್ನು ‘ಸಾವಿನ ಹೆದ್ದಾರಿ’ ಎಂದು ಕರೆದಿದ್ದೂ ಇದೆ.

ಇದೇ ಹೆದ್ದಾರಿಯಲ್ಲಿರುವ ಆಳಂದ– ಕಲಬುರ್ಗಿ ನಡುವೆ ಕೆಲ ವರ್ಷಗಳ ಹಿಂದೆ ಬಸ್ ಅಪಘಾತದಲ್ಲಿ 16 ಜನ, ಕಳೆದ ವರ್ಷ ಕಾರಿ ಪಲ್ಟಿಯಾಗಿ 6 ಜನ ಮೃತಪಟ್ಟಿದ್ದರು. ಬೈಕ್‌, ಕಾರ್‌ ಅಪಘಾತಗಳು ಆಗಾಗ ಸಂಭವಿಸುತ್ತಲೇ ಇರುತ್ತವೆ. ಭಾನುವಾರ ಸಂಭವಿಸಿದ ಅಪಘಾತವನ್ನು ನೋಡಲು ಬೈಕ್‌ ಮೇಲೆ ಬಂದಿದ್ದ ಇಬ್ಬರು ಯುವಕರು, ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡ ಘಟನೆಯೂ ನಡೆಯಿತು.

ರಸ್ತೆ ತುಂಬ ಅಚ್ಚುಕಟ್ಟಾಗಿದ್ದು ಕಿರಿದಾಗಿದೆ. ಆಳಂದ ಹಾಗೂ ಕಲಬುರ್ಗಿ ನಗರದಗಳ ಮಧ್ಯೆ ವಾಣಿಜ್ಯ, ಶಿಕ್ಷಣ, ರಾಜಕೀಯ ಮುಂತಾದ ಕಾರಣಗಳಿಗೆ ವಾಹನ ಓಡಾಟ ಹೆಚ್ಚು. ಆದರೆ, ಬಹುಪಾಲು ಕಡೆ ರಸ್ತೆ ತಿರುವು ಸೂಚಕಗಳು, ಮಾರ್ಗದರ್ಶಿ ಫಲಕಗಳು, ರೋಡ್‌ಬ್ರೇಕರ್‌ಗಳು ಇಲ್ಲದಿರುವುದೂ ಅಪಘಾತಗಳಿಗೆ ಕಾರಣ ಎಂಬುದು ಚಾಲಕರ ಅಭಿಮತ.

ಎರಡು ಕುಟುಂಬದ 7 ಜನ ಸಾವು

ಆಳಂದ: ಕಲಬುರ್ಗಿ ತಾಲ್ಲೂಕಿನ ಸಾವಳಗಿ ಕ್ರಾಸ್ ಹತ್ತಿರ ಭಾನುವಾರ ನಸುಕಿನಲ್ಲಿ, ನಿಂತಿದ್ದ ಲಾರಿಗೆ ಕಾರೊಂದು ಹಿಂದಿನಿಂದ ಡಿಕ್ಕಿ ಹೊಡೆದು ಪಟ್ಟಣದ ಏಳು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇವರಲ್ಲಿ ಒಬ್ಬ ಗರ್ಭಿಣಿ ಸೇರಿ ನಾಲ್ವರು ಮಹಿಳೆಯರು ಹಾಗೂ ಮೂವರು ಪುರುಷರು ಇದ್ದಾರೆ. ಇನ್ನೊಬ್ಬ ಮಹಿಳೆ ತೀವ್ರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗರ್ಭಿಣಿ ಇರ್ಫಾನಾ ಬೇಗಂ (25), ಇವರ ತಾಯಿ ಜೈತುನ್‌ಬಿ (60), ಅತ್ತೆ ರುಖಿಯಾ ಬೇಗಂ (50), ದೊಡ್ಡ ಅತ್ತೆ ಅಬೇದಾಬಿ ಬೇಗಂ (50), ಕಾರ್‌ ಚಾಲಕ ಮುನೀರ್ (28), ಇರ್ಫಾನಾ ಅವರ ಅಣ್ಣ ಮಹಮ್ಮದ್ ಅಲಿ (38), ಕುಟುಂಬದ ಸ್ನೇಹಿತ ಶೌಕತ್ ಅಲಿ (29) ಮೃತಪಟ್ಟವರು. ಇರ್ಫಾನಾ ಅವರ ಸಂಬಂಧಿಯೇ ಆದ ಶಬಾನಾಬಿ (50) ತೀವ್ರವಾಗಿ ಗಾಯಗೊಂಡಿದ್ದಾರೆ.

ಇರ್ಫಾನಾ ಅವರಿಗೆ ಭಾನುವಾರ ನಸುಕಿನ 3 ಗಂಟೆಗೆ ಹೆರಿಗೆನೋವು ಆರಂಭವಾಗಿತ್ತು. ಕುಟುಂಬದವರು ಅವರನ್ನು ಆಳಂದದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಗರ್ಭಿಣಿಯ ರಕ್ತದೊತ್ತಡ ತೀವ್ರ ಕಡಿಮೆಯಾದ ಕಾರಣ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿಗೆ ಕರೆದೊಯ್ಯುವಂತೆ ಅಲ್ಲಿನ ವೈದ್ಯರು ಸೂಚಿಸಿದರು. ತಕ್ಷಣ ಎಚ್ಚೆತ್ತುಕೊಂಡ ಕುಟುಂಬದವರು ನಸುಕಿನ 4ಕ್ಕೆ ಸಂಬಂಧಿಕರಾದ ಮುನೀರ್‌ ಅವರ ಕಾರ್‌ ಮಾಡಿಕೊಂಡು ಕಲಬುರ್ಗಿಯತ್ತ ನಡೆದರು. ಗರ್ಭಿಣಿಯೊಂದಿಗೆ ಇತರ ಏಳು ಮಂದಿ ಕೂಡ ಕಾರಿನಲ್ಲಿ ಬಂದಿದ್ದರು.

ಬೇಗ ಆಸ್ಪತ್ರೆ ತಲುಪುವ ಭರದಲ್ಲಿ ಚಾಲಕ ಅತಿವೇಗವಾಗಿ ಕಾರ್‌ ಓಡಿಸುತ್ತಿದ್ದರು. ಅಷ್ಟರಲ್ಲಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕಾರ್‌ ಡಿಕ್ಕಿ ಹೊಡೆಯಿತು. ಅಪಘಾತದ ರಭಸ ಎಷ್ಟಿತ್ತೆಂದರೆ; ದೊಡ್ಡ ಲಾರಿ ಕೂಡ ರಸ್ತೆ ಪಕ್ಕದಲ್ಲಿ ಉರುಳಿ ಬಿದ್ದಿತು. ಕಾರ್‌ ಸಂಪೂರ್ಣ ನಜ್ಜುಗುಜ್ಜಾಯಿತು. ಎರಡೂ ವಾಹನಗಳು ರಸ್ತೆ ಪಕ್ಕದ ತಗ್ಗಿನಲ್ಲಿ ಸಂಗ್ರಹಗೊಂಡ ನೀರಿನಲ್ಲಿ ಬಿದ್ದವು.

ಒಳಗಿದ್ದವರ ತಲೆ, ಕೈ, ಕಾಲು, ಹೊಟ್ಟೆ ಹಾಗೂ ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದರು ಎಂದು ಪ್ರತ್ಯಕ್ಷ್ಯದರ್ಶಿಗಳು ತಿಳಿಸಿದರು. ಅಪಘಾತವಾಗಿ ಎರಡು ತಾಸಿನ ನಂತರವೂ ಶವಗಳನ್ನು ವಾಹನದಿಂದ ಹೊರಗೆ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಗ್ರಾಮದ ಯುವಕು ಕಾರಿನ ಬಾಗಿಲುಗಳನ್ನು ಮುರಿದು ಶವಗಳನ್ನು ಹೊರತೆಗೆದರು.

ಇರ್ಫಾನಾ ಅವರ ಪತಿ ಮೊಹಮದ್‌ ಶಫಿ (28) ಎ.ಸಿ ಎಂಜಿನಿಯರ್‌ ಆಗಿದ್ದು, ದುಬೈನ ಖತಾನ್‌ನಲ್ಲಿದ್ದಾರೆ. ವರ್ಷದ ಹಿಂದಷ್ಟೇ ಇವರ ಮದುವೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT