ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‘ಸಿಹಿ’ಪ್ರಿಯರಿಗೆ ಬೆಲೆ ಏರಿಕೆ ‘ಕಹಿ’

ಶೇ 20ರಷ್ಟು ದರ ಹೆಚ್ಚಳ, ಅಂದು ಕೋವಿಡ್, ಇಂದು ದರ ಏರಿಕೆ ಬರೆ: ವಹಿವಾಟಿನ ನಿರೀಕ್ಷೆಯಲ್ಲಿ ವ್ಯಾಪಾರಿಗಳು
Last Updated 4 ನವೆಂಬರ್ 2021, 7:30 IST
ಅಕ್ಷರ ಗಾತ್ರ

ಕಲಬುರಗಿ: ಬೆಳಕಿನ ಹಬ್ಬ ದೀಪಾವಳಿಗೆ ಬಗೆಬಗೆಯ ಸ್ವಾದಿಷ್ಟ ಸಿಹಿ ತಿನಿಸುಗಳ ಆಹ್ಲಾದ ಸವಿಯುವವರ ರುಚಿಯನ್ನು ಬೆಲೆ ಏರಿಕೆ ಕಿತ್ತುಕೊಂಡಿದೆ. ಕಳೆದ ವರ್ಷ ಕೋವಿಡ್‌ ಜನರ ಹಬ್ಬದ ಸಂಭ್ರಮ ಮತ್ತು ವರ್ತಕರ ವಹಿವಾಟನ್ನು ಕಸಿದುಕೊಂಡಿತ್ತು. ಹಿಂದಿನ ಕಹಿ ಘಟನೆಗಳನ್ನು ಮರೆತು ಸಡಗರದ ದೀಪಾವಳಿಗೆ ಸಜ್ಜಾಗಿದ್ದ ಗ್ರಾಹಕ ಮತ್ತು ವ್ಯಾಪಾರಿಗಳಿಗೆ ಈ ಬಾರಿ ಬೆಲೆ ಏರಿಕೆ ಬಿಸಿ ತಟ್ಟಿದೆ.

ನಗರದಲ್ಲಿ ಸ್ವೀಟ್‌ ಮಾರ್ಟ್‌, ಬೇಕರಿ, ಆಹಾರ ಮಳಿಗೆಗಳಲ್ಲಿ ಈಗಾಗಲೇ ವಿಶೇಷ ತಿಂಡಿಗಳು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಗ್ರಾಹಕರು ಅವುಗಳನ್ನು ಮನೆಗಳಿಗೆ ಕೊಂಡೊಯ್ಯುತ್ತಿದ್ದಾರೆ. ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ, ರೈಲು ನಿಲ್ದಾಣ ಸೇರಿದಂತೆ ನಗರದ ವಿವಿಧೆಡೆ ಇರುವ ಮಹಾರಾಜ ಸ್ವೀಟ್ಸ್, ಮಾಮು ಪುರಿ ಸ್ವೀಟ್ಸ್, ದಿಲ್ಲಿವಾಲಾ ಸ್ವೀಟ್ಸ್, ಮಿಶ್ರಾ ಫೇಡಾ, ಮಾತೇಶ್ವರಿ ಸ್ವೀಟ್ಸ್, ಅಗರವಾಲ್ ಸ್ವೀಟ್ಸ್ ಸೇರಿದಂತೆ ಹಲವು ಮಳಿಗೆಗಳಲ್ಲಿ ಸಿಹಿ ತಿನಿಸುಗಳ ವ್ಯಾಪಾರ ನಡೆಯುತ್ತಿದೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಖರೀದಿಯ ಪ್ರಮಾಣ ಅರ್ಧದಷ್ಟು ತಗ್ಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಸಿಹಿ ತಿನಿಸು ತಯಾರಿಕೆಗೆ ಬೇಕಾಗುವ ಅಗತ್ಯ ಪದಾರ್ಥಗಳ ದರದಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಸಹಜವಾಗಿಯೇ ಸಿಹಿ ತಿನಿಸುಗಳ ದರ ಏರಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಹಕರು ಈ ವರ್ಷ ಕಡಿಮೆ ಪ್ರಮಾಣದಲ್ಲಿ ಸಿಹಿ ಖರೀದಿಸುತ್ತಿದ್ದಾರೆ ಎನ್ನುತ್ತಾರೆ ಮಿಶ್ರಾ ಪೇಡಾ ಮಳಿಗೆಯ ವ್ಯಾಪಾರಿ ಪಿ.ದಿನೇಶ.

ಕೆ.ಜಿಗೆ ಸುಮಾರು ₹120ರಿಂದ ಹಿಡಿದು ₹1600 ವರೆಗೆ ಸಿಹಿ ತಿನಿಸುಗಳು ಮಳಿಗೆಗಳಲ್ಲಿ ದೊರೆಯುತ್ತಿವೆ. ದೀಪಾವಳಿಯಲ್ಲಿ ಸಿಹಿ ಮೆಲ್ಲುವವರ ಸಂಖ್ಯೆ ದೊಡ್ಡದಿರುವ ಕಾರಣ, ಸಿಹಿತಿಂಡಿ ಅಂಗಡಿಗಳ ಮಾಲೀಕರು ಈ ಸಮಯದಲ್ಲಿ ಹೆಚ್ಚಿನ ಲಾಭವನ್ನು ಕೂಡಾ ಗಳಿಸುತ್ತಾರೆ. ಕೆಲವು ಸ್ವೀಟ್ಸ್‌ ಅಂಗಡಿಗಳಲ್ಲಿ ಹಬ್ಬದ ಅಂಗವಾಗಿ ಸಿಹಿ ತಿನಿಸುಗಳ ಮೇಲೆ ರಿಯಾಯಿತಿ ನೀಡಲಾಗಿದೆ.

ನಗರದಲ್ಲಿ ವೈವಿಧ್ಯಮಯ ಲಡ್ಡು, ಗುಲಾಬ್ ಜಾಮೂನ್, ಬರ್ಫಿ, ಜಹಾಂಗೀರ್, ಹಲ್ವಾ, ಪೇಡಾ, ಮೈಸೂರ್‌ ಪಾಕ್, ಜಿಲೇಬಿ, ಬರ್ಫಿ, ಕರದಂಟು, ಬದಾಮಿ ಚಿಕ್ಕಿ, ಬಾದುಶಾ, ಕಾಜುಕಾಟ್ಲಿ, ಶಂಕರ ಪೋಳಿ, ಸೋನಪಾಪಡಿ, ಮ್ಯಾಂಗೋ ಜೀಜು, ಆ್ಯಪಲ್ ಸ್ಟೀಟ್‌, ಮಾಲ್‌ ಪುರಿ, ಖವಾ, ಅಂಜೂರ್‌ ಬರ್ಫಿ ಸೇರಿದಂತೆ ಬಾಯಲ್ಲಿ ನೀರು ಉಕ್ಕಿಸುವ ತರಹೇವಾರಿ ಸಿಹಿ ತಿನಿಸುಗಳಿಗೆ ಗ್ರಾಹಕರಿಂದ ಬೇಡಿಕೆ ಕಂಡು ಬರುತ್ತಿದೆ. ಕೋವಿಡ್ ಬಳಿಕ ಗ್ರಾಹಕರ ಖರೀದಿಯ ಶಕ್ತಿ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿದೆ. ಹಬ್ಬದ ಪೂರ್ವ ಸಿದ್ಧತೆಯ ಖರೀದಿ ಸಾಮಾನ್ಯವಾಗಿದೆ. ಮಹಾಲಕ್ಷ್ಮಿ ಪೂಜೆಯ ದಿನದಂದು ಗ್ರಾಹಕರ ಖರೀದಿಯ ನೈಜ ಚಿತ್ರಣ ಸಿಗಲಿದೆ. ಕಳೆದ ವರ್ಷಕ್ಕಿಂತ ಸ್ವಲ್ಪ ಸುಧಾರಿಸಿದೆ ಎನ್ನುತ್ತಾರೆ ಮಹಾರಾಜ ಸ್ವೀಟ್ಸ್‌ ಮತ್ತು ಹೋಟೆಲ್‌ ಮಾಲೀಕ ಮೇರಾಜ್ ಅಲಿ. ಹಬ್ಬದ ಕಾರಣ ಮನೆಗಳಲ್ಲಿ ಸಿಹಿ ಖಾದ್ಯಗಳನ್ನು ತಯಾರಿಸುತ್ತಿರು ವುದರಿಂದ ಮಾರುಕಟ್ಟೆಯಲ್ಲಿ ಬದಾಮಿ, ಗೊಡಂಬಿ, ಅಡುಗೆ ಎಣ್ಣೆ, ಹಾಲು, ತುಪ್ಪ, ಸಕ್ಕರೆ, ಮೈದಾ ಹಿಟ್ಟು, ಹೆಸರು, ತೊಗರಿ, ಉದ್ದಿನ ಬೆಳೆ ಸೇರಿದಂತೆ ಹಲವು ಪದಾರ್ಥಗಳ ವಹಿವಾಟು ಜೋರಾಗಿ ನಡೆಯುತ್ತಿರುವುದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT