ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂಚೋಳಿ | ಹೆಸರು ಕಾಳಿನ ದರ ಕುಸಿತ: ಖರೀದಿ ಕೇಂದ್ರ ತೆರೆಯಲು ಮೀನಮೇಷ

ಮಾರುಕಟ್ಟೆಯಲ್ಲಿ ಹೆಸರು ಕಾಳಿನ ದರ ಕುಸಿತ; ಕ್ವಿಂಟಲ್‌ಗೆ ₹ 6800 ದಿಂದ ₹7200
Published : 19 ಆಗಸ್ಟ್ 2024, 5:52 IST
Last Updated : 19 ಆಗಸ್ಟ್ 2024, 5:52 IST
ಫಾಲೋ ಮಾಡಿ
Comments

ಚಿಂಚೋಳಿ: ತಾಲ್ಲೂಕಿನಲ್ಲಿ ಹೆಸರು ರಾಶಿ ಭರದಿಂದ ಸಾಗಿದೆ. ಆದರೆ ಬೆಳೆದ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ದರ ಕುಸಿದಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಮಾರುಕಟ್ಟೆಯಲ್ಲಿ ದರ ಕುಸಿದಾಗ ಪ್ರತಿಬಾರಿಯೂ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು, ಉದ್ದು ಖರೀದಿಗೆ ಸರ್ಕಾರ ಮುಂದಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ರಾಜ್ಯ ಸರ್ಕಾರ ಖರೀದಿ ಕೇಂದ್ರ ತೆರೆಯುವಲ್ಲಿ ಉದಾಸೀನ ತೋರಿದ್ದರಿಂದ ರೈತರು ತೊಂದರೆಗೆ ಸಿಲುಕುವಂತಾಗಿದೆ ಎಂದು ಹೆಸರು ಬೆಳೆಗಾರರು ದೂರುತ್ತಿದ್ದಾರೆ.

ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಹೆಸರು ಕಾಳು 7 ಸಾವಿರ, ಉದ್ದು 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಉದ್ದಿನ ರಾಶಿ ಆರಂಭವಾಗಿಲ್ಲ. ಆದರೆ ಹೆಸರು ರಾಶಿ ಈಗಾಗಲೇ ಶೇ 40ರಷ್ಟು ಪೂರ್ಣಗೊಂಡಿದೆ. ಎಕರೆಗೆ 4ರಿಂದ 5 ಕ್ವಿಂಟಲ್ ಇಳುವರಿ ಬರುತ್ತಿದ್ದು ರೈತರಿಗೆ ತೊಗರಿ ಬೆಳೆ ನಿರ್ವಹಣೆ ಜತೆಗೆ ಹಬ್ಬ ಹರಿದಿನಗಳ ಆಚರಣೆಗೆ ಆಲ್ಪಾವಧಿಯ ಹೆಸರು ಬೆಳೆ ವರದಾನವಾಗಿದೆ.

ತಾಲ್ಲೂಕಿನಲ್ಲಿ ಹೆಸರು 80 ಸಾವಿರ ಕ್ವಿಂಟಲ್, ಉದ್ದು 1.70 ಲಕ್ಷ ಕ್ವಿಂಟಲ್ ಉತ್ಪಾದನೆಯ ಸಾಧ್ಯತೆಯಿದೆ. ಆದರೆ  ಮಾರುಕಟ್ಟೆಯಲ್ಲಿ ದರ ಕುಸಿದಿದ್ದರಿಂದ ರೈತರು ನಷ್ಟಕ್ಕೊಳಗಾಗುವಂತೆ ಮಾಡಿದೆ. ಸರ್ಕಾರ ತಕ್ಷಣ ಮಧ್ಯಪ್ರವೇಶ ಮಾಡಿ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಧಾವಿಸಬೇಕು ಎಂದು ಕಲ್ಲೂರು ರೋಡ್ ಗ್ರಾಮದ ಪ್ರಗತಿಪರ ರೈತ ವೀರಾರೆಡ್ಡಿ ಪಾಟೀಲ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಹೆಸರು ಕಾಳಿನ ದರವನ್ನು ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಪ್ರತಿ ಕ್ವಿಂಟಲ್‌ಗೆ ₹8682 ದರ ನಿಗದಿಪಡಿಸಿದೆ. ಉದ್ದಿನ ಕಾಳಿಗೆ ಪ್ರತಿಕ್ವಿಂಟಲಗೆ ₹7400 ದರ ನಿಗದಿಪಡಿಸಿದೆ. ಸರ್ಕಾರದ ಈ ದರಕ್ಕೆ ಹೆಸರು ಮತ್ತು ಉದ್ದು ಖರೀದಿಸಿದರೆ ಬೆಳೆಗಾರರ ನೆರವಿಗೆ ಬಂದಂತಾಗುತ್ತದೆ.

ಹೆಸರು ಉದ್ದು ಬೆಂಬಲ ಬೆಲೆಗೆ ಖರೀದಿಸಲು ಖರೀದಿ ಕೇಂದ್ರಗಳನ್ನು ತೆರೆಯಲು ಸರ್ಕಾರದ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು -ಸಮದ ಪಟೇಲ್ ಜಂಟಿ ಕೃಷಿ ನಿರ್ದೆಶಕ ಕಲಬುರಗಿ

ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಮತ್ತು ಉದ್ದಿನ ಕಾಳು ಖರೀದಿಗೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಜತೆಗೆ ಚರ್ಚಿಸುತ್ತೇನೆ

-ಸುಭಾಷ ರಾಠೋಡ್ ಕೆಪಿಸಿಸಿ ಉಪಾಧ್ಯಕ್ಷ

ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯಿದ್ದರೆ ತಕ್ಷಣ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಹೆಸರು ಕಾಳು ಮತ್ತು ಉದ್ದಿನ ಕಾಳು ಖರೀದಿ ಕೇಂದ್ರ ತೆರೆಯಲು ಮುಂದಾಗಬೇಕು

-ವಿಶ್ವನಾಥರಡ್ಡಿ ಶೇರಿಕಾರ ಸಾಲೇಬೀರನಹಳ್ಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT