ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆ ರಸ್ತೆ ದುರಸ್ತಿಗೆ ಆಗ್ರಹ

ದಂಡಗುಂಡ-– ಯಾಗಾಪುರ ರಸ್ತೆಯಲ್ಲಿ ಗುಂಡಿ; ಸಂಚಾರಕ್ಕೆ ಸಮಸ್ಯೆ
Last Updated 18 ಫೆಬ್ರುವರಿ 2021, 8:06 IST
ಅಕ್ಷರ ಗಾತ್ರ

ದಂಡಗುಂಡ (ಚಿತ್ತಾಪುರ): ತಾಲ್ಲೂಕಿನ ದಂಡಗುಂಡ ಗ್ರಾಮದಿಂದ ಯಾಗಾಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮಳೆಯಿಂದ ಬೃಹತ್ ಗುಂಡಿ ಉಂಟಾಗಿದೆ. ಇದರಿಂದಾಗಿ ಈ ಮಾರ್ಗದ ವಾಹನಗಳ ಸಂಚಾರಕ್ಕೆ ತೀವ್ರ ಸಮಸ್ಯೆಯಾಗಿದೆ.

ಅಕ್ಟೋಬರ್‌ 2020 ರಲ್ಲಿ ಸುರಿದ ಧಾರಾಕಾರ ಮಳೆಗೆ ದಂಡಗುಂಡ-ಯಾಗಾಪುರ ಗ್ರಾಮಗಳ ನಡುವೆ ಇರುವ ಗುಡ್ಡದ ಇಳಿಜಾರಿನಲ್ಲಿ ಡಾಂಬರ್ ರಸ್ತೆಗೆ ಇದ್ದ ಕಿರು ಸೇತುವೆ ರಸ್ತೆಯು ಕೊಚ್ಚಿ ಹೋಗಿದೆ. ಗುಡ್ಡದಿಂದ ಬಂದ ಮಳೆ ನೀರಿನ ರಭಸದ ಪ್ರವಾಹಕ್ಕೆ ರಸ್ತೆ ಕೊಚ್ಚಿ ಹೋಗಿ ದೊಡ್ಡ ಗುಂಡಿ ನಿರ್ಮಾಣವಾಗಿದೆ.

ಇದೇ ರಸ್ತೆಯ ಮಾರ್ಗವಾಗಿ ದಂಡಗುಂಡ, ಸಂಕನೂರ, ಅಳ್ಳೊಳ್ಳಿ ಮುಂತಾದ ಗ್ರಾಮಗಳ ಜನರು ಯಾಗಾಪುರ, ಬೆಳಗೇರಾ ಮಾರ್ಗವಾಗಿ ಮತ್ತು ಯರಗೋಳ ಮಾರ್ಗವಾಗಿ ಯಾದಗಿರಿಗೆ ಹೋಗಿ ಬರುತ್ತಾರೆ. ಯಾದಗಿರಿ ಜಿಲ್ಲೆಯ ಅನೇಕ ಕಡೆಯಿಂದ ಜನರು ಇದೇ ರಸ್ತೆಯ ಮೂಲಕ ದಂಡಗುಂಡ ಬಸವಣ್ಣನ ಮಂದಿರಕ್ಕೆ ಬಂದು ಹೋಗುತ್ತಾರೆ ಎಂದು ದಂಡಗುಂಡದ ಮಲ್ಲಣ್ಣ ಅವರು ಹೇಳಿದರು.

ಬೆಳಗೇರಾ, ಯಾಗಾಪುರ, ಚಂದುನಾಯಕ ತಾಂಡಾ, ಶಿವನಗರ ತಾಂಡಾ ಜನರು ತಾಲ್ಲೂಕು ಕೇಂದ್ರ ಚಿತ್ತಾಪುರ ಪಟ್ಟಣಕ್ಕೆ ಇದೇ ರಸ್ತೆಯ ಮೂಲಕ ಬಂದು ಹೋಗುತ್ತಾರೆ. ಈ ಭಾಗದ ವಿವಿಧ ಗ್ರಾಮಗಳಿಗೆ ಯಾದಗಿರಿ ಜಿಲ್ಲೆಯ ಯರಗೋಳ, ಹತ್ತಿಕುಣಿ ಇತರೆ ಗ್ರಾಮಗಳ ಜನರು ಇದೇ ರಸ್ತೆಯ ಮೂಲಕ ಆಗಮಿಸುತ್ತಾರೆ.

ರಸ್ತೆಯ ಅರ್ಧಭಾಗ ನೀರಿನಲ್ಲಿ ಕೊಚ್ಚಿ ಹೋಗಿದೆ. ನಾಲ್ಕು ತಿಂಗಳು ಗತಿಸಿದರೂ ಸಂಬಂಧಿಸಿದ ಇಲಾಖೆಯ ಎಂಜಿನಿಯರ್ ರಸ್ತೆಯ ಸ್ಥಿತಿಗತಿ ಗಮನಿಸಿ ಕೊಚ್ಚಿ ಹೋದ ರಸ್ತೆಯ ದುರಸ್ತಿ ಮಾಡಿಸದೆ ನಿರ್ಲಕ್ಷಿಸಿದ್ದಾರೆ. ಹೀಗಾಗಿ ಇಲ್ಲಿ ವಾಹನ ಸಂಚಾರ ಮಾಡಲು ಆತಂಕ ಪಡುವಂತಾಗಿದೆ ಎಂದು ದಂಡಗುಂಡ, ಯಾಗಾಪುರ, ಚಂದು ನಾಯಕ ತಾಂಡಾ, ಶಿವನಗರ ತಾಂಡಾದ ಜನರು ಬೇಸರ ವ್ಯಕ್ತಪಡಿಸಿದರು.

ಕೊಚ್ಚಿ ಹೋದ ರಸ್ತೆಯಲ್ಲಿ ಉಂಟಾದ ಗುಂಡಿಯ ಪಕ್ಕದಲ್ಲಿ ರಸ್ತೆ ದುರಸ್ತಿ ಮಾಡಲಾಗಿದೆ. ಆದರೆ, ಸಂಚಾರಕ್ಕೆ ಸಮಸ್ಯೆ, ಆತಂಕ ಉಂಟು ಮಾಡಿರುವ ಸೇತುವೆಯ ಗುಂಡಿ ಮುಚ್ಚಿ ದುರಸ್ತಿ ಮಾಡಿಸಲು ಅಧಿಕಾರಿಗಳು ಕಡೆಗಣಿಸಿದ್ದಾರೆ ಎಂದು ಬೈಕ್ ಸವಾರ ರೇವಣಸಿದ್ದಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ಸಮಯದಲ್ಲಿ ಗುಂಡಿ ಕಾಣದೆ ಅಪಘಾತ ಸಂಭವಿಸಿದರೆ ಯಾರು ಹೊಣೆ? ಅಧಿಕಾರಿಗಳು ರಸ್ತೆಯ ಸೇತುವೆ ಸ್ಥಳದ ಗುಂಡಿ ಮುಚ್ಚಿಸಿ ರಸ್ತೆ ದುರಸ್ತಿ ಮಾಡಿಸಿ
ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ದಂಡಗುಂಡ ಮತ್ತು ಯಾಗಾಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಸೇತುವೆ ಮತ್ತು ರಸ್ತೆ ಕೊಚ್ಚಿ ಹೋಗಿರುವ ಕುರಿತು ಸ್ಥಳ ಪರಿಶೀಲಿಸಿ ದುರಸ್ತಿಗೆ ತುರ್ತು ಕ್ರಮ ಕೈಗೊಂಡು ಸಂಚಾರ ಸಮಸ್ಯೆ ಪರಿಹರಿಸುತ್ತೇವೆ.

ಶ್ರೀಧರ, ಎಇಇ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT