ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣಿನ ಗಣೇಶ ಮೂರ್ತಿಗೆ ಹೆಚ್ಚಿದ ಬೇಡಿಕೆ

ನಗರದ ವಿವಿಧೆಡೆ ಮಾರಾಟ; 13ರಂದು ಪ್ರತಿಷ್ಠಾಪನೆ
Last Updated 2 ಸೆಪ್ಟೆಂಬರ್ 2018, 14:52 IST
ಅಕ್ಷರ ಗಾತ್ರ

ಕಲಬುರ್ಗಿ: ಗಣೇಶ ಚತುರ್ಥಿ ಹಬ್ಬಕ್ಕೆ ಬಣ್ಣ ಬಣ್ಣದ ಗಣೇಶ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿರುವ ಬೆನ್ನಲ್ಲೇ, ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳು ಗಮನ ಸೆಳೆಯುತ್ತಿವೆ.

ಪರಿಸರಕ್ಕೆ ಹಾನಿಕಾರಕವಾಗಿರುವ ಬಣ್ಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಬಾರದು ಎಂದು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿರುವುದರಿಂದ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ, ಸ್ಥಳೀಯವಾಗಿ ಮಣ್ಣಿನ ಮೂರ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ವ್ಯಾಪಾರಿಗಳು ಬೇರೆ ಜಿಲ್ಲೆಗಳಿಂದ ಮೂರ್ತಿಗಳನ್ನು ತರಿಸಿ ಮಾರಾಟ ಮಾಡುತ್ತಿದ್ದಾರೆ.

‘ಮಣ್ಣಿನ ಗಣೇಶ ಮೂರ್ತಿಗಳಿಗೆ ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚುತ್ತಿದೆ. ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಮಾರಾಟ ಪ್ರಾರಂಭಿಸಿದ್ದೆ. ಜನರಲ್ಲಿ ಜಾಗೃತಿ ಇಲ್ಲದ ಕಾರಣ ಆ ವರ್ಷ ಕೇವಲ 280 ಮೂರ್ತಿಗಳು ಮಾರಾಟವಾದವು. ಈ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಿದ್ದರಿಂದ 2017ರಲ್ಲಿ 800 ಮೂರ್ತಿಗಳು ಮಾರಾಟವಾದವು’ ಎಂದು ವ್ಯಾಪಾರಿ ಸಂಗಮೇಶ ಪರೀಟ್ ಹೇಳುತ್ತಾರೆ.

‘ಈ ವರ್ಷ 5 ಸಾವಿರ ಮೂರ್ತಿಗಳು ಮಾರಾಟವಾಗುವ ಅಂದಾಜಿದೆ. ಈಗಾಗಲೇ 3 ಸಾವಿರ ಮೂರ್ತಿಗಳನ್ನು ತರಿಸಲಾಗಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ₹100 ರಿಂದ ₹2 ಸಾವಿರವರೆಗೆ ಲಭ್ಯ ಇವೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು ₹11 ಸಾವಿರದಿಂದ ಆರಂಭವಾಗುತ್ತವೆ’ ಎಂದು ಅವರು ಹೇಳುತ್ತಾರೆ.

‘ಬಾಗಲಕೋಟೆ ಜಿಲ್ಲೆಯಿಂದ ಮಣ್ಣಿನ ಮೂರ್ತಿಗಳನ್ನು ತರಿಸುತ್ತೇವೆ. ಬೇಡಿಕೆಗೆ ಅನುಗುಣವಾಗಿ ಮೊದಲೇ ಮುಂಗಡ ಪಾವತಿಸುತ್ತೇವೆ. ರಾಸಾಯನಿಕ ಬಣ್ಣ ಬಳಿದ ಗಣೇಶ ಮೂರ್ತಿಗಳನ್ನು ಕೆರೆ, ಬಾವಿಗಳಲ್ಲಿ ವಿಸರ್ಜಿಸುವುದರಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ಹೀಗಾಗಿ ಮಣ್ಣಿನ ಮೂರ್ತಿಗಳ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ’ ಎಂಬುದು ಅವರ ವಿವರಣೆ.

ನಿಲ್ಲದ ಪಿಒಪಿ ಗಣೇಶ ಮಾರಾಟ: ‘ಪ್ಲಾಸ್ಟರ್ ಆಫ್ ಪ್ಯಾರಿಸ್‌ (ಪಿಒಪಿ)ನಿಂದ ತಯಾರಿಸಿರುವ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು ಎಂದು ಪಾಲಿಕೆ ಮನವಿ ಮಾಡಿದರೂ ತಯಾರಿ ಹಾಗೂ ಮಾರಾಟ ನಡೆದಿದೆ. ಸ್ಥಳೀಯರು ತಯಾರಿಸಿದ ಹಾಗೂ ನೆರೆಯ ಅಕ್ಕಲಕೋಟೆಗಳಿಂದ ಪಿಒಪಿ ಗಣೇಶ ಮೂರ್ತಿಗಳನ್ನು ತಂದು ಮಾರಾಟ ಮಾಡಲಾಗುತ್ತಿದೆ. ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳ ಮಾರಾಟಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಡಿವಾಣ ಹಾಕಬೇಕು’ ಎಂದು ವ್ಯಾಪಾರಸ್ಥರು ಆಗ್ರಹಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT