ಮಂಗಳವಾರ, ಜುಲೈ 27, 2021
25 °C
ಕೇಂದ್ರ ಸರ್ಕಾರಕ್ಕೆ ಆಗ್ರಹ

ತೊಗರಿಗೆ ₹ 10 ಸಾವಿರ ಬೆಂಬಲ ಬೆಲೆ ಘೋಷಿಸಿ: ಬಿ.ಆರ್‌. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ತೊಗರಿಗೆ ₹ 10 ಸಾವಿರ ಬೆಂಬಲ ಬೆಲೆ ಘೋಷಿಸಬೇಕು ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ ಆಗ್ರಹಿಸಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕೇಂದ್ರ ಸರ್ಕಾರ ಈಚೆಗೆ ತೊಗರಿ ಸೇರಿದಂತೆ 14 ಮುಂಗಾರು ಬೆಳೆಗಳಿಗೆ ಘೋಷಿಸಿರುವ ಬೆಂಬಲ ಬೆಲೆ ಅವೈಜ್ಞಾನಿಕವಾಗಿದೆ. ಸ್ವಾಮಿನಾಥನ್ ವರದಿಗೂ ಈಗ ಕೇಂದ್ರ ಸರ್ಕಾರ ಘೋಷಿಸುತ್ತಿರುವ ಬೆಂಬಲ ಬೆಲೆ ಲೆಕ್ಕಾಚಾರದಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಹಣದುಬ್ಬರ, ಬೆಲೆ ಏರಿಕೆಯನ್ನು ಪರಿಗಣಿಸದೆ ನೀಡಿರುವ ಈ ಆದೇಶವನ್ನು ಕೂಡಲೇ ವಾಪಸ್ಸು ಪಡೆದು ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ಘೋಷಿಸಬೇಕು ಎಂದು ಅವರು ಒತ್ತಾಯಿಸಿದರು.

ರಾಯಚೂರು ಕೃಷಿ ವಿಶ್ವವಿದ್ಯಾಲಯದ ‘ಸುಧಾರಿತ ಬೇಸಾಯ ಕ್ರಮಗಳು’ ಕೃತಿಯ ಆಧಾರದಂತೆ ಪ್ರತಿ ಎಕರೆ ತೊಗರಿ ಬೆಳೆಯಲು ಕನಿಷ್ಠ ₹ 24,060 ವೆಚ್ಚವಾಗಲಿದೆ. ಪ್ರತಿ ಎಕರೆಗೆ 3.16 ಕ್ವಿಂಟಾಲ್ ಇಳುವರಿ ಇರುತ್ತದೆ. ಸದ್ಯದ ಲೆಕ್ಕಾಚಾರದಲ್ಲಿ ಕೇಂದ್ರ ಸರ್ಕಾರ ತೊಗರಿಗೆ ಘೋಷಿಸಿರುವ ₹ 6300 ಬೆಂಬಲ ಬೆಲೆ ಯಾವುದಕ್ಕೂ ಸಾಲದು. ಇದರಿಂದ ರೈತರಿಗೆ ಖರ್ಚು ಮಾಡಿದ ವೆಚ್ಚವೂ ಸಿಗದಂತಾಗುತ್ತದೆ ಎಂದು ತಿಳಿಸಿದರು.

ಸರ್ಕಾರ ಪ್ರಸಕ್ತ ವರ್ಷ ತೊಗರಿ ಬೆಳೆಗೆ ಘೋಷಿಸಿರುವ ಬೆಂಬಲ ಬೆಲೆ ಆದೇಶವನ್ನು ವಾಪಸ್ಸು ಪಡೆದು, ₹ 10 ಸಾವಿರ ಬೆಂಬಲ ಘೋಷಣೆಯ ಆದೇಶ ಹೊರಡಿಸಬೇಕು.  ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ತೊಗರಿಗೆ ಪ್ರೋತ್ಸಾಹಧನ ನೀಡಲಾಗಿತ್ತು. ಇದೇ ಮಾದರಿಯಲ್ಲಿ ರಾಜ್ಯ ಸರ್ಕಾರ ಪ್ರೋತ್ಸಾಹಧನ ಕೊಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ಮುಂಗಾರು ಬಿತ್ತನೆ ಆರಂಭವಾಗಿದ್ದು, ಬಿತ್ತನೆ ಬೀಜ, ರಸಗೊಬ್ಬರ ವಿತರಣೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಬಿತ್ತನೆ ಬೀಜ, ರಸಗೊಬ್ಬರ, ಕ್ರಿಮಿನಾಶಕ, ವಿದ್ಯುತ್ ಅನ್ನು ಸಬ್ಸಿಡಿ ದರದಲ್ಲಿ ಬೇಡಿಕೆ ಇರುವವರೆಗೂ ಸರಬರಾಜು ಮಾಡಬೇಕು. ರೈತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಜುಲೈ 1ರಂದು ಕಲ್ಯಾಣ
ಕರ್ನಾಟಕ ಭಾಗದ ಜಿಲ್ಲೆಗಳು ಹಾಗೂ ವಿಜಯಪುರ ಜಿಲ್ಲೆಯ ಸಂಸದರ ಮನೆ ಎದುರು ಧರಣಿ ಮಾಡಲಾಗುವುದು ಎಂದು ಅವರು ತಿಳಿಸಿದರು.

ರೈತ, ಕಾರ್ಮಿಕ, ದಲಿತ ಐಕ್ಯ ಹೋರಾಟ ಸಮಿತಿ ಮುಖಂಡರಾದ ಉಮಾಪತಿ ಪಾಟೀಲ ಹಾಗೂ ಶೌಕತ್ ಅಲಿ ಆಲೂರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು