ಬುಧವಾರ, ಮೇ 18, 2022
23 °C

‘ಬಿಇಒ ವೆಂಕಯ್ಯ ಇನಾಮದಾರ ವರ್ಗಾವಣೆ ರದ್ದುಪಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ: ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿ ವೀರಶೈವ ಸಮಾಜ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಶಾಸಕ ಡಾ.ಅಜಯಸಿಂಗ್ ಹಾಗೂ ತಹಶೀಲ್ದಾರ್ ವಿನಯಕುಮಾರ ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ವೀರಶೈವ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ದು ಸಾಹು ಅಂಗಡಿ ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಯ್ಯ ಇನಾಮದಾರ ಅವರನ್ನು ಜೇವರ್ಗಿಯಿಂದ ಯಾದಗಿರಿ ಜಿಲ್ಲೆ ಡಯಟ್ ಹಿರಿಯ ಉಪನ್ಯಾಸಕರಾಗಿ ವರ್ಗಾವಣೆ ಮಾಡಿರುವುದರಿಂದ ನಮ್ಮ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಣ ಪ್ರೇಮಿಗಳಿಗೆ ತುಂಬಲಾರದ ನಷ್ಟವಾಗಿದೆ. ಇನಾಮದಾರ ಅವರು ಜೇವರ್ಗಿಗೆ ವರ್ಗವಾಗಿ ಬಂದ ನಂತರ ತಾಲ್ಲೂಕಿನ ಶಿಕ್ಷಣ ವ್ಯವಸ್ಥೆ ಸಾಕಷ್ಟು ಉತ್ತಮವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡು ಒಂದು ವರ್ಷವೂ ಪೂರ್ಣಗೊಂಡಿಲ್ಲ.  ಆದರೂ ಯಾರದೋ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಿರುವುದು ಸರಿಯಾದ ಕ್ರಮವಲ್ಲ ಎಂದು ದೂರಿದರು.

ಶಿಕ್ಷಣ ಅದಾಲತ್ ಮೂಲಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಿದ್ದಾರೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರನ್ನು ಪ್ರೇರೆಪಿಸಿದ್ದಾರೆ. ಹಿಂದುಳಿದ ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿ ಸಾಧಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ದಕ್ಷ ಅಧಿಕಾರಿಯನ್ನು ಯಾವುದೇ ಕಾರಣಕ್ಕೂ ವರ್ಗಾವಣೆಗೊಳಿಸಬಾರದು ಎಂದು ಆಗ್ರಹಿಸಿದರು.

ವೀರಶೈವ ಸಮಾಜದ ಮುಖಂಡರಾದ ರಾಜಶೇಖರ ಸೀರಿ, ಸಂಗನಗೌಡ ಪಾಟೀಲ ಗುಳ್ಯಾಳ, ಶಿವಕುಮಾರ ಕಲ್ಲಾ, ಗುರುಲಿಂಗಯ್ಯಸ್ವಾಮಿ ಯನಗುಂಟಿ, ಅಶೋಕ ಗುಡೂರ, ಶಾಂತವೀರ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಭಗವಂತರಾಯ ನೇಂಗಾ, ಶ್ರೀಶೈಲಗೌಡ ಕರಕಿಹಳ್ಳಿ, ರವಿ ಅವಂಟಿ, ಈರಣ್ಣಗೌಡ ಅವರಾದ, ವಿಶ್ವ ಪಾಟೀಲ, ಸಾಹೇಬಗೌಡ ಬುಟ್ನಾಳ, ಪ್ರಕಾಶ ಪಾಟೀಲ, ಸಿದ್ದು ಸ್ಥಾವರಮಠ, ಅಯ್ಯಣ್ಣಗೌಡ ಮಾವನೂರ, ಕೇದಾರಲಿಂಗಯ್ಯ ಹಿರೇಮಠ, ವಿಶಾಲ ಭಂಕೂರ, ವಿಶಾಲ ಪವಾರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.