ಶನಿವಾರ, ಜನವರಿ 16, 2021
19 °C
ಮುಖಂಡರು, ಜಮೀನು ಮಾಲೀಕರಿಂದ ದೂರು–ಪ್ರತಿದೂರು

ಚಿತ್ತಾಪುರ| ಗೋರಿಗಳ ನೆಲಸಮ: ಮುಖಂಡರು, ಜಮೀನು ಮಾಲೀಕರಿಂದ ದೂರು–ಪ್ರತಿದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ತಾಪುರ: ತಾಲ್ಲೂಕಿನ ಬೆಣ್ಣೂರ (ಬಿ) ಗ್ರಾಮದ ಖಾಸಗಿ ಪಟ್ಟಾ ಜಮೀನಿನಲ್ಲಿ ಶವಸಂಸ್ಕಾರ ಮಾಡಿದ ಗೋರಿಗಳನ್ನು ನೆಲಸಮ ಮಾಡಲಾಗಿದೆ. ಈ ಕುರಿತು ಜಮೀನಿನ ಮಾಲೀಕ ಮತ್ತು ಗ್ರಾಮದ ಮುಸ್ಲಿಂ ಸಮಾಜದ ಮುಖಂಡರು ಮಾಡಬೂಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ನೀಡಿದ್ದಾರೆ.

‘ಗ್ರಾಮದ ಅಲ್ಲಾವುದ್ದಿನ್ ಅವರು 10 ವರ್ಷದ ಹಿಂದೆ ಅವರ ಸಹೋದರ ಸಂಬಂಧಿಯಿಂದ 6 ಎಕರೆ ಜಮೀನು ಖರೀದಿಸಿದ್ದರು. ಅದೇ ಜಮೀನಿನ 20 ಗುಂಟೆ ಜಾಗದಲ್ಲಿ ಮುಸ್ಲಿಂ ಸಮಾಜದವರು ಶವಸಂಸ್ಕಾರ ಮಾಡಿ ಗೋರಿಗಳನ್ನು ನಿರ್ಮಿಸುತ್ತಿದ್ದರು. ಖರೀದಿ ಬಳಿಕ ಅಲಾವುದ್ದೀನ್ ಶವಸಂಸ್ಕಾರಕ್ಕೆ ಅವಕಾಶ ನೀಡುತ್ತಿರಲಿಲ್ಲ’ ಎಂದು ಗ್ರಾಮದ ಮುಖಂಡರೊಬ್ಬರು ತಿಳಿಸಿದರು.

ಈ ಸಂಬಂಧ ಸಂಧಾನ ಸಭೆ ನಡೆಸಿದ ಮುಸ್ಲಿಂ ಸಮಾಜದ ಮುಖಂಡರು, ‘ಹಿಂದಿನಿಂತೆಯೇ ಶವಸಂಸ್ಕಾರ ಮುಂದುವರೆಸಲು ಖಬರಸ್ಥಾನಕ್ಕೆ ಜಮೀನು ಕೊಡುವಂತೆ ಅಲ್ಲಾವುದ್ದಿನ್‌ಗೆ ಕೋರಿದ್ದರು. ಅದಕ್ಕೆ ಉತ್ತರವಾಗಿ, ‘ಹಣ ಕೊಟ್ಟು ಖರೀದಿ ಮಾಡಿಕೊಳ್ಳಿ’ ಎಂದು ಹೇಳಿದ್ದರು.

ಗೋರಿ ತೆರವು: ‘ಅಲ್ಲಾವುದ್ದಿನ್ ಅವರು ತಮ್ಮ ಜಮೀನಿನಲ್ಲಿ ಇದ್ದ ಐದಾರು ಗೋರಿಗಳನ್ನು ನೆಲಸಮ ಮಾಡಿದ್ದಾರೆ. ಇನ್ನೂ ಮೂರು–ನಾಲ್ಕು ಗೋರಿಗಳಿದ್ದು, ಅವು ತಮ್ಮ ತಂದೆ, ತಾಯಿಯ ಮತ್ತು ಕುಟುಂಬದವರ ಗೋರಿಗಳೆಂದು ಮಾಹಿತಿ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಮಸ್ಯೆ ಕುರಿತು ತಹಶೀಲ್ದಾರ್ ಮತ್ತು ತಮ್ಮ ಇಲಾಖೆ ಮೇಲಧಿಕಾರಿಗೆ ಮಾಹಿತಿ ನೀಡಲಾಗಿದೆ.  ಖಬರಸ್ಥಾನ ಮತ್ತು ಪಟ್ಟಾ ಜಮೀನು ಕುರಿತು ಸೂಕ್ತ ದಾಖಲೆ ತರುವಂತೆ ದೂರುದಾರರಿಗೆ ಸೂಚಿಸಲಾಗಿದೆ’ ಎಂದು ಪಿಎಸ್‌ಐ ವಿಜಯಕುಮಾರ ತಿಳಿಸಿದರು.

ಖಬರಸ್ಥಾನ ಸಮಸ್ಯೆ ಕುರಿತು ಮಾಡಬೂಳ ಪೊಲೀಸರಿಂದ ಮಾಹಿತಿ ಲಭಿಸಿದೆ. ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ, ದಾಖಲೆ ಪರಿಶೀಲನೆ ಮಾಡಲಾಗುತ್ತದೆ
ಉಮಾಕಾಂತಹಳ್ಳೆ, ತಹಶೀಲ್ದಾರ್

ಖಬರಸ್ಥಾನ ಸಮಸ್ಯೆಯನ್ನು ಕಂದಾಯ ಇಲಾಖೆ ಇತ್ಯರ್ಥ ಮಾಡಬೇಕು ಅಥವಾ ನ್ಯಾಯಾಲಯ ತೀರ್ಮಾನಿಸಬೇಕು. ಸೋಮವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುವುದು
ವಿ.ಎನ್.ಪಾಟೀಲ, ಶಹಾಬಾದ್ ಡಿವೈಎಸ್ಪಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.