ಶುಕ್ರವಾರ, ನವೆಂಬರ್ 15, 2019
23 °C
ಮೂರು ತಿಂಗಳಿಂದ ವಾಡಿ ಪಟ್ಟಣ ವಾಸಿಗಳನ್ನು ಪೀಡಿಸಿ ಡೆಂಗಿ, ಹಗಲಿರುಳು ಕೆಲಸ ಮಾಡಿದ ಆರೋಗ್ಯ ಸಿಬ್ಬಂದಿ

ನಿಯಂತ್ರಣಕ್ಕೆ ಬಂದ ಡೆಂಗಿ: ನಾಗರಿಕರು ನಿರಾಳ

Published:
Updated:
Prajavani

ವಾಡಿ: ಕಳೆದ ಮೂರು ತಿಂಗಳಿನಿಂದ ಪಟ್ಟಣದ ನಿವಾಸಿಗಳ ನಿದ್ದೆಗೆಡಿಸಿದ್ದ ಡೆಂಗಿ ಈಗ ತುಸು ಹತೋಟಿಗೆ ಬಂದಿದೆ. ಈವರೆಗೆ ಆರೋಗ್ಯ ಇಲಾಖೆಯಿಂದ 76 ಶಂಕಿತ ಮಾದರಿ ಪರಿಶೀಲಿಸಲಾಗಿದ್ದು, 16 ಡೆಂಗಿ ಪಾಸಿಟಿವ್ ಬಂದರೆ, 3 ಚಿಕೂನ್ ಗುನ್ಯ ಪ್ರಕರಣ ಬೆಳಕಿಗೆ ಬಂದಿವೆ. ಒಂದು ಸಾವು ದಾಖಲಾಗಿದೆ.

ರೋಗ ನಿಯಂತ್ರಣಕ್ಕಾಗಿ ಜನರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವಲ್ಲಿ ಶ್ರಮಿಸಿದ ಆರೋಗ್ಯ ಇಲಾಖೆಯ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. 

ಡೆಂಗಿ ವ್ಯಾಪಕವಾಗಿ ಹರಡುವ ಸಾಧ್ಯತೆ ಮನಗಂಡ ಆರೋಗ್ಯ ಇಲಾಖೆ 23 ವಾರ್ಡ್‌ಗಳಲ್ಲಿಯೂ ಪ್ರತಿ ಮನೆ ಮನೆಗೂ ಭೇಟಿ ನೀಡಿ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಮುಂದಾಯಿತು. 11 ಮೇಲ್ವಿಚಾರಕರ ನೇತೃತ್ವದಲ್ಲಿ ಸುತ್ತಲಿನ ಗ್ರಾಮಗಳ ಆಶಾ ಕಾರ್ಯಕರ್ತೆಯರನ್ನು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಒಳಗೊಂಡ ಒಟ್ಟು 30 ತಂಡ ರಚಿಸಿಕೊಂಡು ಕಾರ್ಯ ಪ್ರವೃತ್ತವಾಯಿತು.

ಅತಿ ಹೆಚ್ಚು ಪ್ರಕರಣಗಳು ಪತ್ತೆಯಾದ 7, 16 ಹಾಗೂ 18ನೇ ವಾರ್ಡಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿದ ಪುರಸಭೆಯ ಆರೋಗ್ಯ ಮತ್ತು ನೈರ್ಮಲ್ಯ ವಿಭಾಗ ಸಹ ನಿರಂತರ ಫಾಗಿಂಗ್ ನಡೆಸುವುದರ ಮೂಲಕ ಸೊಳ್ಳೆಗಳ ಹತೋಟಿಗೆ ಕ್ರಮ ಕೈಗೊಂಡ ಪರಿಣಾಮ ರೋಗ ಹತೋಟಿಗೆ ಬರಲು ಕಾರಣವಾಗಿದೆ. ಸದ್ಯ ಪಟ್ಟಣದಲ್ಲಿ ಡೆಂಗಿ ರೋಗದ ಭಯ ದೂರವಾಗಿದ್ದು, ಸ್ಥಳೀಯ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

'ಖಾಸಗಿ ವೈದ್ಯರು ಹಾಗೂ ಲ್ಯಾಬ್ ಮಾಲೀಕರ ಜೊತೆ ಸಭೆ ನಡೆಸಲಾಗಿದೆ. ಡೆಂಗಿ ಜ್ವರದ ಕುರಿತು ಖಾಸಗಿ ವೈದ್ಯರು ‘ಡೆಂಗಿ ಶಂಕಿತ’ ಎಂದು ಮಾತ್ರ ವರದಿ ಕೊಡಬಹುದು. ನಂತರ ಖಾಸಗಿ ವೈದ್ಯರು ಅದನ್ನು ಕಡ್ಡಾಯವಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಮಾತ್ರ ಡೆಂಗಿ ಖಚಿತ ಪ್ರಕರಣ ಎಂದು ಹೇಳಲು ಸಾಧ್ಯ. ಡೆಂಗಿ ಪಾಸಿಟಿವ್ ಬಂದು ಪ್ಲೇಟ್‌ಲೇಟ್, ರಕ್ತದ ಪ್ರಮಾಣ ಇಳಿಕೆಯಾದರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪ್ರಾರಂಭಿಸಲಾಗುತ್ತದೆ. ಇಲ್ಲದಿದ್ದರೆ ಇಲ್ಲ. ಖಾಸಗಿ ವೈದ್ಯರು ಡೆಂಗಿ ಶಂಕಿತ ವರದಿ ಆಧಾರದ ಮೇಲೆ ಚಿಕಿತ್ಸೆ ನೀಡಬಾರದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಸುರೇಶ ಮೇಕಿನ ಪ್ರತಿಕ್ರಿಯಿಸಿದ್ದಾರೆ.

ಪ್ರತಿಕ್ರಿಯಿಸಿ (+)