ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ನೋವೇಟಿವ್ ಲ್ಯಾಬ್‌ ಆರಂಭ

Last Updated 23 ಫೆಬ್ರುವರಿ 2022, 13:28 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಎಚ್‌ಕೆಇ ಶಿಕ್ಷಣ ಸಂಸ್ಥೆಯ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿ ಬುಧವಾರ ಡೆನ್ಮಾರ್ಕ್ ರಾಯಭಾರಿ ಫ್ರೆಡ್ಡಿ ಸ್ವಾನ್ ಅವರು ನೂತನ ಇನೋವೇಟಿವ್ ಪ್ರಯೋಗಾಲಯವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಯುವಕರು ಅತ್ಯುತ್ತಮ ಜ್ಞಾನವನ್ನು ಪಡೆದುಕೊಂಡು ಬೆಳೆಯಬೇಕು. ಇಲ್ಲದಿದ್ದರೆ ದೇಶದ ಅಭಿವೃದ್ಧಿಯಾಗುವುದಿಲ್ಲ. ಪ್ರಕೃತಿ ಸುಂದರವಾಗಿದೆ. ಎಲ್ಲವೂ ಹಸಿರುಮಯವಾಗಿದೆ. ಹಸಿರು ತಂತ್ರಜ್ಞಾನ, ಗ್ರೀನ್ ಪಾರ್ಕ್‌, ಗ್ರೀನ್ ಸಿಟಿಯನ್ನು ಇಷ್ಟಪಡುತ್ತೇನೆ’ ಎಂದರು.

‘ನಿಮ್ಮಲ್ಲಿ ನಿಮಗೆ ಭರವಸೆಯಿರಲಿ, ನಿಮ್ಮ ಪ್ರತಿಭೆ, ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆಯಿರಲಿ. ಇನೋವೇಟಿವ್ ಲ್ಯಾಬ್‌ನ ಸದುಪಯೋಗ ಪಡೆದುಕೊಂಡು ಎಲ್ಲಾ ವಿದ್ಯಾರ್ಥಿಗಳು ತಂತ್ರಜ್ಞಾನ ಹಾಗೂ ಕೌಶಲ ಅಭಿವೃದ್ಧಿಯಲ್ಲಿ ಬೆಳವಣಿಗೆ ಹೊಂದಬೇಕು. ನಿಮ್ಮ ಕಾಲೇಜಿನಲ್ಲಿಯೇ ನಿಮಗೆ ಸಾಕಷ್ಟು ಅವಕಾಶವಿರುವಾಗ ನೀವು ಬೇರೆಲ್ಲೋ ಹೋಗುವ ಅವಶ್ಯಕತೆಯಿಲ್ಲ’ ಎಂದು ಹೇಳಿದರು.

ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕೌಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ಕವಿತಾ ಎಸ್. ಗೌಡ, ‘ಪ್ರಯೋಗಾಲಯದ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಇದರಿಂದ ಅವರ ಕೌಶಲ ಅಭಿವೃದ್ಧಿಯಾಗುತ್ತದೆ. ಬದಲಾಗುತ್ತಿರುವ ತಂತ್ರಜ್ಞಾನದಲ್ಲಿ ಹಲವಾರು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಪ್ರತಿಯೊಂದು ಕ್ಷೇತ್ರ, ವಿಭಾಗದಲ್ಲಿ ನಿಮ್ಮದೇ ಆದ ವಿಶೇಷ ಪ್ರತಿಭೆಯಿಂದ ಕೌಶಲಯ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಬೆಳೆಯಬೇಕು’ ಎಂದರು.

ಫ್ಲೆಕ್ಸಿಟ್ರಾನ್ ಕಂಪನಿಯ ಸಿಇಒ ಹಾಗೂ ಎಂ.ಡಿ. ಆರ್.ಎಸ್. ಹಿರೇಮಠ ಮಾತನಾಡಿ, ‘ಜ್ಞಾನ, ತಂತ್ರಜ್ಞಾನ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ಬೆಳೆಯುತ್ತಿರುವ ಜಗತ್ತಿನಲ್ಲಿ ನಮ್ಮ ವಿದ್ಯಾರ್ಥಿಗಳು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಈ ಲ್ಯಾಬ್ ಸಹಾಯಕವಾಗುತ್ತದೆ. ಬೇರೆಯವರು ನಮ್ಮನ್ನು ನೋಡಲಿ ಅಂತಲ್ಲ, ನಮ್ಮಲ್ಲಿರುವ ಜ್ಞಾನ ನಮ್ಮನ್ನು ಮತ್ತು ನಮ್ಮ ದೇಶವನ್ನು ಅಭಿವೃದ್ಧಿಗೊಳಿಸುವತ್ತ ನೀವೆಲ್ಲ ಲ್ಯಾಬ್‌ನ ಉಪಯೋಗ ಪಡೆದುಕೊಳ್ಳಿ’ ಎಂದು ಸಲಹೆ ನೀಡಿದರು.

ಎಚ್‌ಕೆಇ ಸೊಸೈಟಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಮಾತನಾಡಿ, ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸಂಶೋಧನಾಶೀಲತೆಯ ಬೆಳವಣಿಗೆಗೆ ಪೂರಕವಾಗಲಿ ಎಂಬ ಉದ್ದೇಶದಿಂದ ಈ ಪ್ರಯೋಗಾಲಯ ಆರಂಭಿಸಲಾಗಿದೆ. ಈ ಭಾಗದ ಎಲ್ಲಾ ಕ್ರಿಯಾಶೀಲ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕು. ಇದು ನಮ್ಮ ಕಾಲೇಜಿಗಷ್ಟೆ ಸೀಮಿತವಲ್ಲ. ಈ ಭಾಗದ ಎಲ್ಲಾ ಪ್ರತಿಭಾನ್ವಿತರಿಗೆ ಉಪಯೋಗವಾಗಬೇಕು’ ಎಂದು ಆಶಿಸಿದರು.

ಪ್ರಾಚಾರ್ಯ ಡಾ.ಎಸ್.ಎಸ್. ಕಲಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಉಪ ಪ್ರಾಚಾರ್ಯ ಡಾ. ಸಿದ್ದರಾಮ. ಆರ್. ಪಾಟೀಲ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.

ಎಚ್‌ಕೆಇ ಆಡಳಿತ ಮಂಡಳಿ ಉಪಾಧ್ಯಕ್ಷ ಡಾ. ಶರಣಬಸಪ್ಪ ಹರವಾಳ, ಕಾರ್ಯದರ್ಶಿ ಡಾ. ಜಗನ್ನಾಥ ಬಿಜಾಪುರ, ಜಂಟಿ ಕಾರ್ಯದರ್ಶಿ ಡಾ. ಮಹಾದೇವಪ್ಪ ರಾಂಪೂರೆ, ಆಡಳಿತ ಮಂಡಳಿ ಸದಸ್ಯರಾದ ಡಾ. ಶರಣಬಸಪ್ಪ ಬಿ. ಕಾಮರೆಡ್ಡಿ, ಡಾ. ಬಸವರಾಜ ಖಂಡೇರಾವ್, ಡಾ. ಕೈಲಾಸ್ ಬಿ. ಪಾಟೀಲ, ವಿನಯ್ ಎಸ್. ಪಾಟೀಲ, ಸೋಮನಾಥ ನಿಗ್ಗುಡಗಿ, ಡಾ. ಅನಿಲಕುಮಾರ ಪಟ್ಟಣ, ಸಾಯಿನಾಥ ಎನ್. ಪಾಟೀಲ, ಎನ್. ಗಿರಿಜಾ ಶಂಕರ, ಪ್ರಕಾಶ್ ಐ. ಬಬಲಾದಿ, ಡಾ. ಸಿ.ಸಿ. ಪಾಟೀಲ ಇದ್ದರು.

ಡಾ. ಶ್ರೀದೇವಿ ಸೋಮಾ ಪರಿಚಯಿಸಿದರು. ಡಾ. ಶಶಿಕಾಂತ ಆರ್. ಮಿಸೆ ವಂದಿಸಿದರು. ಪೂಜಾ ಹತ್ತರಕಿ ಪ್ರಾರ್ಥಿಸಿದರು. ಅಕ್ಷಯ ಆಸಪಲ್ಲಿ ನಿರೂಪಿಸಿದರು. ಉಪ ಪ್ರಾಚಾರ್ಯೆ ಡಾ. ಕಲ್ಪನಾ ವಾಂಜೇರಖೇಡ ಹಾಗೂ ಡೀನ್, ಪರೀಕ್ಷಾ ನಿಯಂತ್ರಕರು, ವಿಭಾಗದ ಮುಖ್ಯಸ್ಥರು, ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

‘ಕ.ಕ. ಪ್ರತಿಭೆಗಳನ್ನು ಗುರುತಿಸಬೇಕಿದೆ’

ಕಲ್ಯಾಣ ಕರ್ನಾಟಕ ಭಾಗದಲ್ಲಿ ಹಲವಾರು ಉತ್ತಮ ಪ್ರತಿಭೆಗಳಿದ್ದು, ಅವುಗಳಲ್ಲಿ ಎಷ್ಟೋ ಬೆಳಕಿಗೇ ಬಂದಿಲ್ಲ. ಅವರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗಬೇಕಿದೆ ಎಂದು ಡೆನ್ಮಾರ್ಕ್‌ನ ಭಾರತೀಯ ರಾಯಭಾರಿ ಫ್ರೆಡ್ಡಿ ಸ್ವೇನ್ ಅಭಿಪ್ರಾಯಪಟ್ಟರು.

ಪಿಡಿಎ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಪ್ರತಿಭೆಗಳು ಬೆಂಗಳೂರು, ಮುಂಬೈ, ಚೆನ್ನೈ ಅಥವಾ ದೆಹಲಿಯಲ್ಲೇ ಸಿಗುತ್ತವೆ ಎಂದೇನಿಲ್ಲ. ನಿತ್ಯ ಅನ್ನಕ್ಕಾಗಿ ಪರದಾಡುತ್ತಿರುವ ಈ ಭಾಗದಲ್ಲಿಯೂ ಉತ್ತಮ ಪ್ರತಿಭೆಗಳಿವೆ. ಅವುಗಳನ್ನು ಹೊರಗೆ ತರುವ ಕೆಲಸ ಆಗಬೇಕಿದೆ ಎಂದರು.

ಡೆನ್ಮಾರ್ಕ್ ದೇಶವು ಭಾರತದೊಂದಿಗೆ ಸೌರಶಕ್ತಿ, ಪವನಶಕ್ತಿ, ಜಲವಿದ್ಯುತ್‌ ವಲಯದಲ್ಲಿ ಪರಸ್ಪರ ಒಪ್ಪಂದ ಮಾಡಿಕೊಂಡಿವೆ. ಡೆನ್ಮಾರ್ಕ್‌ನಲ್ಲಿ ತಂತ್ರಜ್ಞಾನವು ಸಾಕಷ್ಟು ತುಟ್ಟಿಯಾಗಿದ್ದು, ಕೈಗೆಟಕುವ ದರದಲ್ಲಿ ಸಿಗುವುದು ಅಗತ್ಯವಾಗಿದೆ. ಉಜ್ವಲ ಭವಿಷ್ಯಕ್ಕಾಗಿ ವಿವಿಧ ಸರ್ಕಾರಗಳೊಂದಿಗೆ ಕೌಶಲ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ. ಎಲ್ಲರೂ ವೃತ್ತಿಪರ ಆಗಬೇಕು ಎಂದೇನಿಲ್ಲ. ಆದರೆ, ಕೌಶಲವುಳ್ಳವರಾಗಬೇಕು. ಡೆನ್ಮಾರ್ಕ್‌ನಲ್ಲಿ ವಿವಿಧ ಕಂಪನಿಗಳು ಕೌಶಲ ಇರುವ ನೌಕರರನ್ನು ಬಯಸುತ್ತಿವೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT