ಗುರುವಾರ , ಸೆಪ್ಟೆಂಬರ್ 29, 2022
28 °C
ಹಬ್ಬಕ್ಕೆ ಚಾಲನೆ ನೀಡಿದ ಜಾನಪದ ವಿ.ವಿ. ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್

ಸೇಂಟ್ ಜೋಸೆಫ್ ಕಾಲೇಜಿನಲ್ಲಿ ದೇಸಿ ಹಬ್ಬದ ಮೆರಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಇಳಕಲ್ ಸೀರೆ, ಗುಳೇದಗುಡ್ಡ ಖಣ ತೊಟ್ಟು, ಅಂದದ ಮೂಗುತಿ ತೊಟ್ಟ ವಿದ್ಯಾರ್ಥಿನಿಯರು, ಊಟಕ್ಕೆ ಕಟಕ್ ಬಿಳಿ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಹೋಳಿಗಿ, ದಪಾಟಿ, ಬದನಿಕಾಯಿ ಪಲ್ಯದ ಭೂರಿ ಭೋಜನ. ಜೊತೆಗೆ ಜಾನಪದ ಪರಂಪರೆಯ ಕುರಿತು ತಜ್ಞರಿಂದ ಮಾತು...

ಇದು ಇಲ್ಲಿನ ಇಂದಿರಾನಗರದ ಸೇಂಟ್ ಜೋಸೆಫ್ ಪಿ.ಯು. ಕಾಲೇಜಿನಲ್ಲಿ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ದೇಸಿ ಹಬ್ಬದಲ್ಲಿ ಕಂಡು ಬಂದ ದೃಶ್ಯಗಳು.

ಮುಖ್ಯ ವೇದಿಕೆಯಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ. ಭಾಸ್ಕರ್ ಅವರು ಡೊಳ್ಳು ಬಾರಿಸುವುದರ ಮೂಲಕ ದೇಸಿ ಹಬ್ಬಕ್ಕೆ ಶುಕ್ರವಾರ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ನಮ್ಮ ದೇಸಿ ಸಂಸ್ಕೃತಿ, ಕಲೆ, ಕೃಷಿ ಜಾನಪದ ಉಳಿಯ ಬೇಕಾದರೆ ಸಮಾಜ, ಸರ್ಕಾರ ಜಾನಪದಕ್ಕೆ ಮಹತ್ವ ಕೊಡಬೇಕು/ ವಿದ್ಯಾರ್ಥಿನಿಯರು ಸಮೂಹ ಗೀತಗಾಯನಗಳಾದ ಜೋಗುಳ ಹಾಡು, ತಾಯಿ, ತವರು, ಸೂಜುಮಲ್ಲಿಗೆ ಹಾಡುಗಳನ್ನು ಕೇಳಿ ನೋಡುಗರೆಲ್ಲರಿಗೂ ಆನಂದವನ್ನು ನೀಡಿರುವುದಕ್ಕೆ ಈ ದೇಸಿ ಹಬ್ಬ ಸಂಭ್ರಮ ಸಾಕ್ಷಿಯಾಗಿದೆ. ವಿಶ್ವವಿದ್ಯಾಲಯ ಮಟ್ಟದಲ್ಲಿ ಜರಗುವಂತಹ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ಯುವ ಸಮಾಜಕ್ಕೆ ನಮ್ಮ ದೇಸಿ ಸಂಸ್ಕೃತಿಯನ್ನು ತಿಳಿಸಿ ಕೊಡುವುದು ಇಂದು ಅವಶ್ಯಕವಾಗಿದೆ’ ಎಂದರು.

ಮುಖ್ಯ ಅತಿಥಿಯಾಗಿದ್ದ ಎಚ್‌ಕೆಸಿಸಿಐ ಗೌರವ ಕಾರ್ಯದರ್ಶಿ ಶರಣು ಪಪ್ಪಾ ಮಾತನಾಡಿ, ವಿದ್ಯಾರ್ಥಿಗಳ ಜಾನಪದ ಹಬ್ಬದ ಸಂಭ್ರಮ ಖುಷಿ ನೀಡಿದೆ. ಕಾಲೇಜಿನಲ್ಲಿ ಇಂತಹ ಕಾರ್ಯಕ್ರಮಗಳು ಜರಗುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ ಸಂತೋಷ ಬಿ. ಬಿಲಗುಂದಿ ಮಾತನಾಡಿ, ಪ್ರತಿಯೊಂದು ಶಾಲಾ, ಕಾಲೇಜುಗಳಲ್ಲಿ ನಮ್ಮ ದೇಸಿ ಸಂಸ್ಕೃತಿ ಕಲೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಮುಖ್ಯವಾಗಿದೆ’ ಎಂದು ತಿಳಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿ, ಆಧುನಿಕದ ಒತ್ತಡದ ಬದುಕಿಗೆ ಜಾನಪದ ಸಂಸ್ಕೃತಿ ಸಮಾಧಾನ ನೀಡುತ್ತದೆ. ಅಂತಹ ಶ್ರೇಷ್ಠ ಜಾನಪದ ಸಂಸ್ಕೃತಿಯ ಪ್ರದರ್ಶನ ಕಾಲೇಜಿನಲ್ಲಿ ಪ್ರದರ್ಶನವಾಗಿರುವುದು ಶ್ಲಾಘನೀಯ ಎಂದರು.

ಉದ್ಯಮಿ ಡಾ. ಸುಭಾಷ ಕಮಲಾಪುರೆ, ಸಂಸ್ಥೆಯ ಸಿಸ್ಟರ್ ಆಗ್ನೆಸ್, ಸಿಸ್ಟರ್ ಪ್ರಾಸ್ಸಿನ, ಪ್ರಾಂಶುಪಾಲರಾದ ಸಿಸ್ಟರ್ ಸ್ಮಿತಾ ಭಾಗವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವರಾಜ ಕೊನೇಕ ವಹಿಸಿದ್ದರು. 

ಕಾರ್ಯಕ್ರಮದ ಸಂಚಾಲಕ ಡಾ.ಚಿ.ಸಿ. ನಿಂಗಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಮ್ಮ ಕಾಲೇಜಿನಲ್ಲಿ ಜರುಗಿದ ದೇಸಿಹಬ್ಬ ಸಂಭ್ರಮ ಕಾರ್ಯಕ್ರಮ ಜಿಲ್ಲೆಯಾದ್ಯಂತ ಕಾಲೇಜುಗಳಲ್ಲಿ ಜರುಗಲಿ’ ಎಂದರು. ಇದೇ ಸಂದರ್ಭದಲ್ಲಿ ಬುಡಬುಡಿಕ್ಯಾ, ಆಣಿಪೀಣಿ ಹಾಡುಗಳನ್ನು ಹಾಡಿದರು.

ವಿದ್ಯಾರ್ಥಿನಿಯರಾದ ಪ್ರಿಯಾಂಕಾ, ಶಿವಲಿಂಗಮ್ಮ ಕಾರ್ಯಕ್ರಮ ನಿರೂಪಿಸಿದರು. ಪೂರ್ಣ ಒಂದು ದಿನ ಜಾನಪದ ಹಬ್ಬ ಸಂಭ್ರಮ ಜರುಗಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು