ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಡಿಜಿಸಿಎ ಅಂಗಳದಲ್ಲಿ ವಿಮಾನ ನೈಟ್‌ ಲ್ಯಾಂಡಿಂಗ್‌

Last Updated 1 ಏಪ್ರಿಲ್ 2023, 21:15 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ನಿಲುಗಡೆಗಾಗಿ (ನೈಟ್‌ ಲ್ಯಾಂಡಿಂಗ್‌) ಈಗಾಗಲೇ ಪೂರ್ಣಗೊಂಡಿರುವ ತಾಂತ್ರಿಕ ಕಾಮಗಾರಿಗಳು ಮತ್ತು ನಾವಿಗೇಷನಲ್‌ನ ಕಾರ್ಯನಿರ್ವಹಣೆಯ ಪರಿಶೀಲನೆಗೆ ದೆಹಲಿಯಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಪೈಲಟ್ ಹಾಗೂ ಫ್ಲೈಟ್‌ ಇನ್‌ಸ್ಪೆಕ್ಟೆರ್‌ ತಂಡಗಳು ಶನಿವಾರ ಭೇಟಿ ನೀಡಿ ಪರಿಶೀಲಿಸಿದ್ದು, ನೈಟ್‌ ಲ್ಯಾಂಡಿಂಗ್ ಸೇವೆಯ ಅನುಮೋದನೆ ಅಂತಿಮ ಘಟ್ಟಕ್ಕೆ ತಲುಪಿದೆ.

ದೆಹಲಿಯಿಂದ ವಿಶೇಷ ವಿಮಾನದೊಂದಿಗೆ ಬಂದ ಇಬ್ಬರು ಪೈಲಟ್‌ಗಳು ಒಂದೂವರೆ ಗಂಟೆ ವಿಮಾನ ನಿಲ್ದಾಣದ ಸುತ್ತಲೂ ಹಾರಾಟ ನಡೆಸಿದರು. ನೈಟ್‌ ಲ್ಯಾಂಡಿಂಗ್‌ ಸೇವೆಯಲ್ಲಿ ಮಹತ್ವದ ಪಾತ್ರವಹಿಸುವ ‘ಅಗತ್ಯ ನ್ಯಾವಿಗೇಷನಲ್ ಕಾರ್ಯಕ್ಷಮತೆಯ(ಆರ್‌ಎನ್‌ಪಿ)’ ಪ್ರಾಯೋಗಿಕ ಪರೀಕ್ಷೆ ಮಾಡಿದೆ. 5 ಕಿ.ಮೀ. ದೂರದಿಂದಲೂ ನಿಲ್ದಾಣದ ರನ್‌ವೇ ಪೈಲಟ್‌ಗೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪರಿಶೀಲನಾ ತಂಡವು ತಿಳಿಸಿತು.

ಪರಿಶೀಲನೆ ಬಳಿಕ ಡಿಜಿಸಿಎ ತಂಡದ ಕ್ಯಾಪ್ಟನ್‌ ಅನೂಪ್ ಕಚ್ರೋ ಮಾತನಾಡಿ, ‘ಕಲಬುರಗಿ ಜನರಿಗೆ ಇದು ಮಹತ್ವದ ದಿನವಾಗಿದ್ದು, ನಿಲ್ದಾಣದಲ್ಲಿನ ನೈಟ್‌ಲ್ಯಾಂಡಿಂಗ್‌ಗೆ ಸಿದ್ಧಗೊಂಡ ಎಲ್ಲ ಕಾರ್ಯಗಳು ತೃಪ್ತಿದಾಯಕ ಆಗಿವೆ. ಆರ್‌ಎನ್‌ಪಿ ಮತ್ತು ವಿಶ್ಯುವಲ್ ಫ್ಲೈಟ್ ರೂಟ್‌ಗೆ ಯಾವುದೇ ಅಡೆತಡೆಗಳಿಲ್ಲ. ರನ್‌ವೇ ಅನ್ನು ಪೈಲಟ್‌ 5 ಕಿ.ಮೀ. ದೂರದಿಂದ ಸ್ಪಷ್ಟವಾಗಿ ನೋಡಬಹುದು. ರಾತ್ರಿ ವೇಳೆ, ಮೋಡ ಕವಿದ ವಾತಾವರಣದಲ್ಲೂ ವಿಮಾನ ಸುಲಭವಾಗಿ ಇಳಿಸಬಹುದು’ ಎಂದರು.

‘ಕಲಬುರಗಿ ನಿಲ್ದಾಣವು ಸುಂದರವಾಗಿದ್ದು, ಉದ್ದದ ರನ್‌ವೇ ಹೊಂದಿದೆ. ಇಲ್ಲಿ ಅತ್ಯಾಧುನಿಕ ಮತ್ತು ಸುಧಾರಿತ ತಾಂತ್ರಿಕ ಸಲಕರಣೆಗಳು ಇದ್ದರೂ ಈವರೆಗೆ ಸಮರ್ಪಕವಾಗಿ ಬಳಕೆಯಾಗಿಲ್ಲ. ಇನ್ನು ಮುಂದೆ ಅವುಗಳ ಗರಿಷ್ಠ ಬಳಕೆ ಆಗಲಿದೆ. ಇದುವರೆಗಿನ ನಿರ್ಬಂಧಗಳು ಕೂಡ ದೂರಾಗಲಿದ್ದು, ಆರೋಗ್ಯ ತುರ್ತು ವೇಳೆಯಲ್ಲಿ ರೋಗಿಗಳನ್ನು ಯಾವುದೇ ಸಮಯದಲ್ಲಿ ಏರ್ ಲಿಫ್ಟ್‌ ಮಾಡಬಹುದು’ ಎಂದು ಹೇಳಿದರು.

‘5 ಕಿ.ಮೀ.ಗಿಂತಲೂ ಕಡಿಮೆ ಅಂತರದಲ್ಲಿ ರನ್‌ವೇ ಕಾಣಿಸಿಕೊಂಡರೆ ವಿಮಾನ ಇಳಿಸುವುದು ಪೈಲಟ್‌ಗೆ ಕಷ್ಟವಾಗುತ್ತದೆ. ಕಲಬುರಗಿ ನಿಲ್ದಾಣದ ಸುತ್ತ ಒಂದೂವರೆ ಗಂಟೆ ಹಾರಾಟ ನಡೆಸಿ, ಆರ್‌ಎನ್‌ಪಿ ಮತ್ತು ವಿಶ್ಯುವಲ್ ಫ್ಲೈಟ್ ರೂಟ್‌ ಪರಿಶೀಲಿಸಿದ್ದೇವೆ. 5 ಕಿ.ಮೀ. ದೂರದಿಂದ ನಿಖರವಾಗಿ ರನ್‌ವೇ ಕಾಣಿಸುತ್ತದೆ. ಬೇಸಿಗೆ ಈ ದಿನಗಳಲ್ಲಿ 8 ಕಿ.ಮೀ. ದೂರದಿಂದಲೂ ಗೊಚರವಾಗುತ್ತದೆ’ ಎಂದರು.

ನೈಟ್‌ಲ್ಯಾಂಡಿಂಗ್ ಅನುಮತಿಗೆ ಪ್ರತಿಕ್ರಿಯಿಸಿದ ಫ್ಲೈಟ್‌ ಇನ್‌ಸ್ಪೆಕ್ಟೆರ್‌ ದೇವೇಂದ್ರ ನಾಥ್, ‘ನೈಟ್‌ಲ್ಯಾಂಡಿಂಗ್ ಸಂಬಂಧಿತ ವರದಿಯನ್ನು ದೆಹಲಿಗೆ ತಲುಪಿದ ವಾರದೊಳಗೆ ಡಿಜಿಸಿಎಗೆ ಸಲ್ಲಿಸುತ್ತೇವೆ. ಅನುಮತಿ ಕೊಡುವುದು ಡಿಜಿಸಿಎ ಮೇಲಧಿಕಾರಿಗಳಿಗೆ ಬಿಟ್ಟದ್ದು. ಇದಕ್ಕೆ ಒಂದು ತಿಂಗಳು ಸಮಯ ತೆಗೆದುಕೊಳ್ಳಬಹುದು’ ಎಂದರು.

ಕ್ಯಾಪ್ಟನ್ ಶಕ್ತಿ ಸಿಂಗ್, ಫ್ಲೈಟ್ ಇನ್‌ಸ್ಪೆಕ್ಟರ್ ಅವಿನಾಶ ಯಾದವ್, ನಿಲ್ದಾಣ ಸಲಹೆಗಾರ ನರಸಿಂಹ ಮೆಂಡನ್ ಇದ್ದರು.

ನೈಟ್‌ ಲ್ಯಾಂಡಿಂಗ್‌ಗೆ ಬೇಕು ರಾಜಕೀಯ ಒತ್ತಡ!

‘ನೈಟ್‌ಲ್ಯಾಂಡಿಂಗ್ ಬೇಕಾದ ಮೂಲಸೌಕರ್ಯ ಜೋಡಣೆಯ ತಾಂತ್ರಿಕ ಕಾರ್ಯಗಳು, ಡಿಜಿಸಿಎನ ಪರಿಶೀಲನೆ ಮತ್ತು ವರದಿ ಸಲ್ಲಿಕೆ, ವಿಮಾನಯಾನ ಸೇವಾ ಸಂಸ್ಥೆಗಳ ಆಹ್ವಾನದಂತಹ ಕೆಲಸಗಳನ್ನು ಪೂರ್ಣಗೊಳಿಸಿದ್ದೇವೆ. ಕೊನೆಯ ಹಂತವಾಗಿ ಡಿಜಿಸಿಎನ ಅನುಮೋದನೆಗಾಗಿ ಎದುರು ನೋಡುತ್ತಿದ್ದು, ರಾಜಕೀಯ ನಾಯಕರು ಒಂದಿಷ್ಟು ಒತ್ತಡ ತರಬೇಕಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಡಾ. ಚಿಲಕಾ ಮಹೇಶ ಹೇಳಿದರು.

ಪ್ರಸ್ತುತ, ಸ್ಟಾರ್ ಏರ್ ಹಾಗೂ ಅಲಯನ್ಸ್ ಏರ್ ಸಂಸ್ಥೆಗಳು ಹಿಂಡನ್(ದೆಹಲಿ), ಬೆಂಗಳೂರು ಮತ್ತು ತಿರುಪತಿ ನಡುವೆ ಕಾರ್ಯಾಚರಣೆ ನಡೆಸುತ್ತಿವೆ. ನೈಟ್‌ಲ್ಯಾಂಡಿಂಗ್ ಬಳಿಕ ಹಾರಾಟ ಸೇವೆ ವಿಸ್ತರಣೆಯಾಗಲು ಇಂಡಿಗೊ, ಏರ್‌ಇಂಡಿಯಾ, ಆಕಾಶ್, ಟ್ರೂಜೆಟ್‌ ಸೇರಿ 5 ವಾಯುಯಾನ ಸಂಸ್ಥೆಗಳ ಸಿಇಒ ಜತೆ ಮಾತನಾಡಿದ್ದೇವೆ. ಜಿಲ್ಲೆಯಿಂದಲೂ ರಾಜಕೀಯ ವಲಯದಿಂದ ಒಂದಿಷ್ಟು ಒತ್ತಡ ಹೇರುವ ಅಗತ್ಯವಿದೆ’ ಎಂದರು.

‘ವಿಮಾನಗಳ ಪಾರ್ಕಿಂಗ್‌ಗೆ ಮನವಿ’

‘ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಾಗದ ಕೊರತೆಯಿಂದ ಹೈದರಾಬಾದ್‌ ನಿಲ್ದಾಣದಲ್ಲಿ ನಿಲುಗಡೆ ಆಗುತ್ತವೆ. ಆ ವಿಮಾನಗಳನ್ನು ಕಲಬುರಗಿಯಲ್ಲಿ ನಿಲ್ಲಿಸಿ, ಇಲ್ಲಿಂದ ಪ್ರಯಾಣಿಕರನ್ನು ಕರೆದೊಯ್ಯುವಂತೆ ವಿಮಾನಯಾನ ಸಂಸ್ಥೆಗಳಿಗೆ ಕೋರಿದ್ದೇವೆ’ ಎಂದು ಡಾ. ಚಿಲಕಾ ಮಹೇಶ ತಿಳಿಸಿದರು.

‘ನಿಲ್ದಾಣದ ಒಟ್ಟಾರೆ ಅಭಿವೃದ್ಧಿ, ರನ್‌ವೇಗೆ ₹50 ಕೋಟಿ ವಿನಿಯೋಗಿಸಲಾಗಿದೆ. ನಿಲ್ದಾಣದ ಪ್ರವೇಶ ಕಟ್ಟಡವು ಪ್ರಸ್ತುತ 100 ಪ್ರಯಾಣಿಕರ ಸಾಮರ್ಥ್ಯ ಹೊಂದಿದೆ. ಇದನ್ನು ವಿಸ್ತರಿಸಬೇಕಿದೆ. ಸ್ಥಳೀಯ ಶಾಸಕರು, ಸಂಸದರು ಬೆಂಬಲ ನೀಡುತ್ತಿದ್ದಾರೆ. ಕೆಕೆಆರ್‌ಡಿಬಿ ಸಹಕರಿಸುತ್ತಿದ್ದು, ನಿಲ್ದಾಣದ ಮುಂಭಾಗವನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT