ಬುಧವಾರ, ಮಾರ್ಚ್ 29, 2023
24 °C

ಪ್ರಕೃತಿ ವಿಕೋಪ ಅರಿಯಲು ಬೇಕಿದೆ ಆದ್ಯತೆ: ನಾಗತಿಹಳ್ಳಿ ಚಂದ್ರಶೇಖರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರಕೃತಿ ವಿಕೋಪಗಳನ್ನು ತುಸು ಮುಂಚಿತವಾಗಿಯೇ ಅರಿತುಕೊಳ್ಳುವಲ್ಲಿ ನಾವು ಸೋಲುತ್ತಿದ್ದೇವೆ. ಇದು ಆದ್ಯತೆಯ ಪ್ರಶ್ನೆಯೋ ಅಥವಾ ಅಧ್ಯಯನ ಕೊರತೆಯೋ ಕಾಣೆ. ಮನುಕುಲದ ಹಾನಿ ತಪ್ಪಿಸಲು ಬಹಳಷ್ಟು ಸಂಶೋಧನಾ ಕಸರತ್ತು ಮಾಡುವುದು ಅಗತ್ಯವಿದೆ’ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಸಲಹೆ ನೀಡಿದರು.

‘ಪ್ರಕೃತಿಯ ಮುನಿಸು ಎಷ್ಟು ದೊಡ್ಡ ಹಾನಿ ತಂದೊಡ್ಡುತ್ತದೆ ಎಂಬುದನ್ನು ನಾವು ಪದೇಪದೇ ನೋಡುತ್ತಿದ್ದೇವೆ. ಆದರೆ, ಇದರಿಂದ ಪಾಠ ಕಲಿತು ಸುಧಾರಿಸುತ್ತಿದ್ದೇವೆ ಅನಿಸುತ್ತಿಲ್ಲ. ನಿಸರ್ಗ ತನ್ನಷ್ಟಕ್ಕೇ ತಾನೇ ಮಾಡಿಕೊಳ್ಳುವ ಪರಿವರ್ತನೆಗಳ ಮುಂದೆ ಮನುಷ್ಯ ಬಹಳಷ್ಟು ಚಿಕ್ಕವನಾಗುತ್ತಾನೆ. ಸಂಕಷ್ಟದಿಂದ ಪಾರಾಗಲು ಪ್ರವಾಹ, ಅತಿವೃಷ್ಟಿ, ಬರದಂಥ ವಿಕೋಪಗಳನ್ನು ಇನ್ನಷ್ಟು ವೈಜ್ಞಾನಿಕವಾಗಿ ಅರಿತುಕೊಳ್ಳಬೇಕಿದೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ಹಿಂದೆ ಕೊಡಗಿನಲ್ಲಿ, ನಂತರ ಧಾರವಾಡ ಭಾಗದಲ್ಲಿ ಈಗ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ನೆರೆಯಿಂದ ಸಾಕಷ್ಟು ಹಾನಿ ಸಂಭವಿಸಿದೆ. ಸಂತ್ರಸ್ತರಿಗೆ ಇಡೀ ರಾಜ್ಯವೇ ನೆರವಾಗುತ್ತದೆ. ವೈಯಕ್ತಿಕವಾಗಿ ನನಗೆ ಆ ಭಾಗ– ಈ ಭಾಗ ಎಂಬ ಮಾನಸಿಕ ಅಂತರ ಇಲ್ಲ. ಬೆಂಗಳೂರು– ಕಲಬುರ್ಗಿ ಭೌಗೋಳಿಕವಾಗಿ ಮಾತ್ರ ದೂರ ಇವೆ. ಈ ಬಾರಿ ಕಲಬುರ್ಗಿ ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ಕೈಲಾದ ನೆರವು ನೀಡಬೇಕೆಂದು ಬಂದಿದ್ದೇನೆ. ನ. 15ರಂದು ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸುವ ಮೂಲಕ ಅವರಲ್ಲಿ ಜೀವನದ ಭರವಸೆ ತುಂಬುವ ಸಣ್ಣ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

‘ಬದಲಾದ ಸನ್ನಿವೇಶ ದಾನ ಕೊಡುವವರು ಹಾಗೂ ತೆಗೆದುಕೊಳ್ಳುವವರ ಮೇಲೆ ಅನುಮಾನ ಮೂಡುವಂತಿದೆ. ಮನೆಯಲ್ಲಿ ಬಿದ್ದಿದ್ದ ಬೇಡವಾದ ವಸ್ತುಗಳನ್ನು ಕೊಡುವುದು ದಾನವಲ್ಲ; ಅದು ಮನೆ ಸ್ವಚ್ಛ ಮಾಡಿಕೊಳ್ಳಲು ನೆಪವೆಂದಾಗುತ್ತದೆ ಅಷ್ಟೇ. ಹಾಗಾಗಿ, ಏನೂ ನಿರೀಕ್ಷೆ ಇಲ್ಲದೇ ನಿಷ್ಕಲ್ಮಷವಾಗಿ ನಾವು ಹೊಸ ಬಟ್ಟೆ, ಧಾನ್ಯ ಹಾಗೂ ಮಕ್ಕಳಿಗೆ ಕಲಿಕಾ ಸಾಮಗ್ರಿ ನೀಡುತ್ತಿದ್ದೇವೆ’ ಎಂದು ನಾಗತಿಹಳ್ಳಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು