ಶನಿವಾರ, ಡಿಸೆಂಬರ್ 7, 2019
24 °C

ಶಿಕ್ಷಕರಿಬ್ಬರು ಸೇರಿ ನಾಲ್ವರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಬ್ಬರು ಶಿಕ್ಷಕರೂ ಸೇರಿದಂತೆ ವಿವಿಧ ಇಲಾಕೆಗಳ ನಾಲ್ವರು ನೌಕರರು ಗುರುವಾರ ಅಮಾನತುಗೊಂಡಿದ್ದಾರೆ.

ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ಲೋಪ, ಗೈರು ಹಾಜರಿ, ನಿರ್ಲಕ್ಷ್ಯ ಮತ್ತು ಹಣ ದುರುಪಯೋಗ ಮುಂತಾದ ಆರೋಪದ ಮೇಲೆ ಇವರನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.

ಚಿತ್ತಾಪುರ ತಾಲ್ಲೂಕಿನ ದಂಡಗುಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಾಂತೇಶ್ ಅವರನ್ನು ಹಣ ದುರುಪಯೋಗ ಮತ್ತು ಇಲಾಖೆಯ ವಿರುದ್ಧ ಅಪಪ್ರಚಾರ ಹಾಗೂ ಶಾಲಾಭಿವೃದ್ಧಿ– ಮೇಲುಸ್ತಾವರಿ ಸಮಿತಿ ಸದಸ್ಯರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಡಿಡಿಪಿಐ ಶಾಂತನಗೌಡ ಬಿರಾದಾರ ಅಮಾನತು ಮಾಡಿದ್ದಾರೆ.

ಇನ್ನೊಂದೆಡೆ, ನಗರದ ಜಗತ್ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿ ಸುವರ್ಣಾ ಅವರು ಕಾರಣ ನೀಡದೇ ಸುದೀರ್ಘ ಗೈರು ಹಾಜರಾದ ಕಾರಣ ಅಮಾನತು ಮಾಡಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಪೊಲೀಸ್ ಇಲಾಖೆ: 

ನಗರದಲ್ಲಿ ಮಂಗಳವಾರ ನಡೆದ ಮುಖ್ಯಮಂತ್ರಿಗಳ ಪ್ರವಾಸ ಕಾರ್ಯಕ್ರಮದ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದರೂ, ಗೈರು ಹಾಜರಾದ ಆರೋಪದ ಮೇಲೆ ಫರಹತಾಬಾದ್ ಪೊಲೀಸ್ ಠಾಣೆಯ ಮುಖ್ಯ ಕಾನ್‌ಸ್ಟೆಬಲ್‌ ಆನಂದ ಎಂಬುವವರನ್ನು ಅಮಾನತು ಮಾಡಲಾಗಿದೆ.

ಅಶಿಸ್ತು ಪ್ರದರ್ಶನ ಮತ್ತು ದುರ್ನಡತೆ ತೋರಿದ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಪಶು ಸಂಗೋಪನಾ ಇಲಾಖೆ: 

ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಡಿ ದರ್ಜೆ ನೌಕರ ಉಪೇಂದ್ರ ಎನ್ನುವವರನ್ನು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅಮಾನತು ಮಾಡಿದ್ದಾರೆ.

ಗುರುವಾರ ಸಚಿವರು ಕಚೇರಿಗೆ ಭೇಟಿ ನೀಡಿದಾಗ ಉಪೇಂದ್ರ ಸುದೀರ್ಘ ಅವಧಿಯಿಂದ ಗೈರು ಹಾಜರು ಇರುವುದು ಗೊತ್ತಾಯಿತು. ಇದರಿಂದ ಕೂಡಲೇ ಆಯುಕ್ತರಿಗೆ ಅಮಾನತು ಮಾಡುವಂತೆ ಬೆಳಗ್ಗೆ ಸೂಚಿಸಿದ್ದರು. ಸಂಜೆ ಅಮಾನತು ಆದೇಶ ಹೊರಬಿದ್ದಿದೆ.

*

ಚಿತ್ತಾಪುರ: ಕರ್ತವ್ಯ ನಿರ್ವಹಣೆಯಲ್ಲಿ ಲೋಪ, ಶಾಲಾ ಆಡಳಿತ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ, ನಿರ್ಲಕ್ಷ್ಯ ಆರೋಪದಡಿ ತಾಲ್ಲೂಕಿನ ದಂಡಗುಂಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯ ಶಿಕ್ಷಕ ಮಾಲತೇಶ ಬಬ್ಬಜ್ಜಿ, ತೊನಸನಹಳ್ಳಿ (ಎಸ್) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ನಿರ್ಮಲಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ದಂಡಗುಂಡ ಶಾಲೆ: ಮುಖ್ಯ ಶಿಕ್ಷಕ ಮಾಲತೇಶ ಅವರು ಒಪ್ಪಿಕೊಂಡಿರುವಂತೆ ಶಾಲೆಯ 8–9 ಬೆಂಚುಗಳನ್ನು ಮಾರಿದ್ದಾರೆ. ಎಷ್ಟಕ್ಕೆ ಮಾರಿದ್ದಾರೆ, ಎಷ್ಟು ಹಣ ಬಂತು ಎಂಬ ಮಾಹಿತಿ ಇಲ್ಲ. ಮಾರಿದ ಹಣ ಸರ್ಕಾರೇತರ ಖಾತೆಗೆ ಜಮೆ ಮಾಡಿದ್ದಾರೆ. ಅತಿಥಿ ಶಿಕ್ಷಕರ ಹೆಸರಲ್ಲಿ ಹೆಚ್ಚುವರಿ ಹಣ ಸ್ವಂತ ಡ್ರಾ ಮಾಡಿಕೊಂಡಿದ್ದಾರೆ.

2018ರಲ್ಲಿ ಶಾಲಾ ಮಕ್ಕಳಿಗೆ ಉಚಿತ ಶೂ, ಸಾಕ್ಸ್ ವಿತರಣೆ ದಾಖಲಾತಿ ಸರಿಯಾಗಿ ನಿರ್ವಹಿಸಿಲ್ಲ. ಹಣಕಾಸಿನ ನಿರ್ವಹಣೆ ದಾಖಲಾತಿ ನಿರ್ವಹಣೆಯಲ್ಲಿ ಲೋಪ ಎಸಗಿದ್ದಾರೆ. ಬಳಕೆ ಮಾಡಿದ ಹಣಕ್ಕೆ ರಸೀದಿ ತಿದ್ದುಪಡಿ ಮಾಡಿದ್ದಾರೆ. ಶಾಲೆಗೆ ಬೇಕಾದ ವಸ್ತು, ಸಾಮಗ್ರಿ ಖರೀದಿ ಮಾಡಿ ಹಣವನ್ನು ಮಾಲೀಕರ ಹೆಸರಲ್ಲಿ ಚೆಕ್ ನೀಡದೆ ಸೆಲ್ಫ್ ಡ್ರಾ ಮಾಡಿಕೊಂಡಿದ್ದಾರೆ. ಅನುಮೋದನೆ ಪಡೆಯದೆ ಸ್ಥಳೀಯ ರಜೆ ನೀಡಿದ್ದಾರೆ.

ಶಾಲೆಯ ನಗದು ಪುಸ್ತಕ ಮತ್ತು ಎಸ್.ಡಿ.ಎಂ.ಸಿ ನಗದು ಪುಸ್ತಕ ನಿರ್ವಹಿಸದೆ ನೋಟ್‌ಬುಕ್‌ನಲ್ಲಿ ಬರೆದಿದ್ದಾರೆ. ಶಿಕ್ಷಕರ ಬೋಧನಾ ಟಿಪ್ಪಣಿ ಬರೆದಿಲ್ಲ. ಪಠ್ಯ ವಿಭಜನೆ, ಸೇತುಬಂಧ ಮಾಡಿರುವುದಿಲ್ಲ. ಪೂರ್ವ ಪರೀಕ್ಷೆ ತೆಗೆದುಕೊಂಡಿಲ್ಲ. ದಾಖಲಾತಿ ಪುಸ್ತಕದಲ್ಲಿ ಅನೇಕ ವಿದ್ಯಾರ್ಥಿಗಳ ಜನ್ಮ ದಿನಾಂಕ, ಹೆಸರು, ತಂದೆಯ ಹೆಸರು, ಅಡ್ಡ ಹೆಸರು ತಿದ್ದುಪಡಿ ಮಾಡಿದ್ದಾರೆ. ವರ್ಗಾವಣೆ ಪ್ರಮಾಣ ಪತ್ರದಲ್ಲಿಯೂ ದಾಖಲಾತಿ ಇಲ್ಲದೆ ತಿದ್ದುಪಡಿ ಮಾಡಿದ್ದಾರೆ.

ತೊನಸನಹಳ್ಳಿ (ಎಸ್) ಶಾಲೆ: ಮುಖ್ಯ ಶಿಕ್ಷಕಿ ನಿರ್ಮಲಾ ಅವರು ಮಕ್ಕಳಿಗೆ ಅವಾಚ್ಯವಾಗಿ ಬೈಯುತ್ತಾರೆ. ಸಮಾಜ ವಿಜ್ಞಾನದ ಒಂದು ಪಾಠವನ್ನೂ ಬೋಧಿಸಿಲ್ಲ. ಬಿಸಿಯೂಟಕ್ಕೆ ತಾವೇ ಅಲ್ಪಸ್ವಲ್ಪ ತರಕಾರಿ ತಂದು ಒಂದು ವಾರ ಅಡುಗೆ ಮಾಡುವಂತೆ ಹೇಳುತ್ತಾರೆ. ಮಕ್ಕಳಿಗೆ ಶುದ್ಧ ನೀರು ನೀಡುವುದಿಲ್ಲ. ಹುಳು ಇರುವ ನೀರು ಕುಡಿಯಲು ಹೇಳುತ್ತಾರೆ. ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಸೈಕಲ್ ವಿತರಣೆಗೆ ವಿದ್ಯಾರ್ಥಿಗಳಿಂದ ಹಣ ಪಡೆದಿದ್ದಾರೆ.

ವರ್ಗಾವಣೆ ಪ್ರಮಾಣಪತ್ರ ಕೊಡುವಾಗ ವಿದ್ಯಾರ್ಥಿಗಳಿಂದ ಹೆಚ್ಚಿನ ಹಣ ಪಡೆದಿದ್ದಾರೆ. ಬ್ಯಾಂಕ್ ಕೆಲಸ ಇದೆ ಎಂದು ಯಾರಿಗೂ ಹೇಳದೆ ಶಾಲೆಯಿಂದ ಹೋಗುತ್ತಾರೆ. 5ನೇ ತರಗತಿಗೆ ಮೂವರು ಮಕ್ಕಳ ಪ್ರವೇಶ ದಾಖಲಾತಿಗೆ ಹಣ ಪಡೆದುಕೊಂಡಿದ್ದಾರೆ. ಮಕ್ಕಳು, ಶಿಕ್ಷಕರು, ಸಿಬ್ಬಂದಿ ಎನ್ನದೆ ಎಲ್ಲರ ವಿರುದ್ಧ ಅನುಚಿತ ವರ್ತನೆ, ಅವಾಚ್ಯ ಶಬ್ದಗಳ ಬಳಕೆ ಮಾಡುತ್ತಾರೆ.

ಇವರಿಬ್ಬರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶಾಂತಗೌಡ ಅವರು ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಪ್ರತಿಕ್ರಿಯಿಸಿ (+)