ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಡ್ಜ್ ಕೋರ್ಸ್ ಬೋಧನೆಗೆ ಒತ್ತು ಕೊಡಿ-ಪ್ರಗತಿ ಪರಿಶೀಲನಾ ಸಭೆ

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ ಕೃಷ್ಣ ಪ್ರಗತಿ ಪರಿಶೀಲನಾ ಸಭೆ
Last Updated 5 ಮೇ 2022, 16:32 IST
ಅಕ್ಷರ ಗಾತ್ರ

ಕಲಬುರಗಿ: ಎರಡು ವರ್ಷಗಳ ನಂತರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳಿಗೆ ಮುಂದಿನ ತರಗತಿಯ ಪಠ್ಯ ಅಭ್ಯಾಸಕ್ಕೆ ತೊಂದರೆಯಾಗದ ರೀತಿಯಲ್ಲಿ ಬ್ರಿಡ್ಜ್ ಕೋರ್ಸ್ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕೈಗಾರಿಕಾಭಿವೃದ್ಧಿ ಆಯುಕ್ತರೂ ಆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗುಂಜನ್ ಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ಕೋವಿಡ್ ಕಾರಣ ಮಕ್ಕಳು ಭೌತಿಕ ಕಲಿಕೆಯಿಂದ ವಿಮುಖರಾಗಿದ್ದಾರೆ. ಈ ಹಂತದಲ್ಲಿ ಮಕ್ಕಳಿಗೆ ಸಂಪರ್ಕ ಕೋರ್ಸುಗಳ ಅಗತ್ಯವಿದ್ದು, ಶಿಕ್ಷಕರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಇದಲ್ಲದೆ ಸೇತುವೆ ಕೋರ್ಸ್‍ಗಳ ಸರಿಯಾಗಿ ಅನುಷ್ಠಾನವಾಗುತ್ತಿರುವ ಕುರಿತು ಅಧಿಕಾರಿಗಳು ನಿಗಾ ವಹಿಸಬೇಕು. ಎಸ್ಸೆಸ್ಸೆಲ್ಸಿ ಫಲಿತಾಂಶ ರ‍್ಯಾಂಕಿಂಗ್‍ನಲ್ಲಿ ಜಿಲ್ಲೆ ಮೊದಲ 10ರಲ್ಲಿ ಬರುವಂತೆ ಕಾರ್ಯನಿರ್ವಹಿಸಿ ಎಂದರು.

ಶಾಲೆಗಳಲ್ಲಿ ಶೌಚಾಲಯ, ಕಟ್ಟಡ, ಕುಡಿಯುವ ನೀರಿನಂತಹ ಮೂಲಸೌಕರ್ಯಗಳನ್ನು ಉತ್ತಮಗೊಳಿಸಬೇಕು. ಶಾಲೆಗಳಲ್ಲಿನ ಕೊಠಡಿ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು ಹೀಗೆ ಪ್ರತಿಯೊಂದು ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. 2 ವರ್ಷಗಳ ನಂತರ ಶಾಲೆ ಆರಂಭವಾಗುತ್ತಿರುವುದರಿಂದ ಶಾಲಾ ಹಂತದಲ್ಲಿ ಯಾವುದೇ ಹಳೆ ಕೆಲಸ, ಕಾಮಗಾರಿಗಳು ಬಾಕಿ ಇದ್ದಲ್ಲಿ ಕೂಡಲೇ ಪೂರ್ಣಗೊಳಿಸಬೇಕು ಎಂದು ಡಿಡಿಪಿಐ ಅಶೋಕ ಭಜಂತ್ರಿ ಅವರಿಗೆ ನಿರ್ದೇಶನ ನೀಡಿದರು.

ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಸತಿ ನಿಲಯದಲ್ಲಿನ ಮಕ್ಕಳಿಗೆ ಗುಣಮಟ್ಟದ ಊಟ, ಉಪಾಹಾರ ಪೂರೈಕೆ ಮಾಡಬೇಕು. ಸ್ವಚ್ಛತೆ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ವಸತಿ ನಿಲಯದ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನದ ಬಗ್ಗೆಯೂ ತರಬೇತಿ ನೀಡಬೇಕು ಎಂದರು.

ನಗರದ ವಸತಿ ನಿಲಯದಲ್ಲಿ ಮಂಜೂರಾದ ಸಂಖ್ಯೆಗಿಂತ 1300 ವಿದ್ಯಾರ್ಥಿಗಳು ಹೆಚ್ಚಿಗೆ ಪ್ರವೇಶಾತಿ ಪಡೆದುಕೊಂಡಿದ್ದೇವೆ. ವಿದ್ಯಾರ್ಥಿಗಳ ನಿರ್ವಹಣೆಗೆ ಹೆಚ್ಚುವರಿ ಗುತ್ತಿಗೆ ಮೂಲಕ ಪಡೆಯಲಾದ ಸಿಬ್ಬಂದಿ ವೇತನ ಪಾವತಿಗೆ ₹ 86 ಲಕ್ಷ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದು, ಬೇಗ ಮಂಜೂರಾತಿ ದೊರೆತಲ್ಲಿ ಅನುಕೂಲವಾಗಲಿದೆ ಎಂದು ಜಂಟಿ ನಿರ್ದೇಶಕ ಅಲ್ಲಾಬಕಷ್ ಅವರು ಸಭೆಯ ಗಮನಕ್ಕೆ ತಂದರು.

ಡೈರಿ ಬಿಡುಗಡೆ: ಜಿಲ್ಲಾ ಪಂಚಾಯಿತಿಯು ಹೊರತಂದಿರುವ 2022ನೇ ಸಾಲಿನ ಡೈರಿ ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಉಪವಿಭಾಗಾಧಿಕಾರಿ ಮೋನಾ ರೋತ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT