ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರ್ಜ್‌ಶೀಟ್ ಹಾಕಿದ ಬಳಿಕ ಉತ್ತರ ಕೊಡುವೆ

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
Last Updated 15 ಮಾರ್ಚ್ 2019, 9:39 IST
ಅಕ್ಷರ ಗಾತ್ರ

ಕಲ್ಬುರ್ಗಿ:‘ಡಾ.ಉಮೇಶ ಜಾಧವ ಪ್ರಕರಣದಲ್ಲಿ ನಾನು ಪ್ರಮುಖ ಆರೋಪಿ (ಎ1) ಆಗಿದ್ದೇನೆ. ನನ್ನ ಮೇಲೆ ಅವರು ಎಲ್ಲಾ ರೀತಿಯ ಚಾರ್ಜ್‌ಶೀಟ್‌ ಹಾಕಲಿ, ಅವುಗಳಿಗೆ ಒಮ್ಮೆಲೇ ಉತ್ತರ ಕೊಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯದಲ್ಲಿ ತಂತ್ರ–ಪ್ರತಿತಂತ್ರ, ಏಟು–ಎದಿರೇಟು ಸಹಜ. ಚಿಂಚೋಳಿಯ ಮನೆ ಮಗ ಓಡಿ ಹೋಗಿದ್ದಾನೆ. ಹೀಗಾಗಿ ನನ್ನನ್ನು ದತ್ತು ಪುತ್ರನಾಗಿ ಸ್ವೀಕರಿಸಿ ಎಂದು ಚಿಂಚೋಳಿಯ ಮತದಾರರಿಗೆ ಕೇಳಿಕೊಂಡಿದ್ದೇನೆ. ಮನೆ ಮಗ ಇದ್ದರೆ ಎಲ್ಲವನ್ನೂ ನೋಡಿಕೊಳ್ಳುತ್ತಾನೆ, ಮಗ ಇಲ್ಲದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಮಗನ ರೀತಿ ಕೆಲಸ ಮಾಡಬೇಕಾಗಿದೆ’ ಎಂದರು.

‘ಚಿತ್ತಾಪುರ ಮತಕ್ಷೇತ್ರದ ಜನರು ನನಗೆ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಅಲ್ಲಿಯ ಜನರ ಭಾವನೆಗಳಿಗೆ ಸ್ಪಂದಿಸಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಜಾಧವ ಹೇಳಿದರು ಎಂಬ ಕಾರಣಕ್ಕೆ ನಾನು ಚಿಂಚೋಳಿಯಿಂದ ಸ್ಪರ್ಧಿಸುವ ಅಗತ್ಯವಿಲ್ಲ. ಇಷ್ಟಕ್ಕೂ ನಾನು ಎಲ್ಲಿ ಸ್ಪರ್ಧಿಸಬೇಕು ಎಂಬುದನ್ನು ಮತದಾರರನ್ನು ಕೇಳಿ ನಿರ್ಧರಿಸಬೇಕೆ ಹೊರತು ಜಾಧವ ಅವರನ್ನು ಕೇಳಿ ಅಲ್ಲ’ ಎಂದು ಹೇಳಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಗದೇವ ಗುತ್ತೇದಾರ, ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಈರಣ್ಣ ಪಾಟೀಲ ಝಳಕಿ, ಮುಖಂಡರಾದ ಸಿ.ಬಿ.ಪಾಟೀಲ ಓಕಳಿ, ತಿಪ್ಪಣ್ಣಪ್ಪ ಕಮಕನೂರ, ಚಂದ್ರಶೇಖರ್ ಸುಲ್ತಾನಪುರ ಇದ್ದರು.

ಆಣೆ–ಪ್ರಮಾಣದ ಮೇಲೆ ನಂಬಿಕೆ ಇಲ್ಲ

‘ಪ್ರಾಮಾಣಿಕತೆ ಇಲ್ಲದವರು ಆಣೆ–ಪ್ರಮಾಣ ಮಾಡುತ್ತಾರೆ. ನನಗೆ ಆಣೆ–ಪ್ರಮಾಣದ ಮೇಲೆ ನಂಬಿಕೆ ಇಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾಧವ ಹೇಳಿಕೆಗೆ ತಿರುಗೇಟು ನೀಡಿದರು.

‘ನಾವು ದೇವಸ್ಥಾನಗಳಿಗೆ ಹೆಚ್ಚಾಗಿ ಹೋಗುವುದಿಲ್ಲ. ದೇವರ ಮೇಲೆ ನಮಗೆ ನಂಬಿಕೆ ಕಡಿಮೆ. ನಾನು ಮತ್ತು ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ನಂಬಿಕೆ ಮೇಲೆ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅಭಿವೃದ್ಧಿಯೇ ನಮ್ಮ ಆದ್ಯತೆ ಆಗಿದೆ’ ಎಂದು ಹೇಳಿದರು.

ನಾವು ‘ಬಿಪಿಎಲ್’ ಶಾಸಕರು!

‘ನಾವು (ಕಾಂಗ್ರೆಸ್ಸಿಗರು) ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಶಾಸಕರು. ಆಪರೇಷನ್‌ ಮಾಡುವಷ್ಟು ಹಣ ನಮ್ಮ ಬಳಿ ಇಲ್ಲ; ಅದರ ಅಗತ್ಯವೂ ನಮಗೆ ಇಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ನಾವು ಆಪರೇಷನ್ ‘ಹಸ್ತ’ ಮಾಡುವುದಿಲ್ಲ. ಆ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ. ಸಂವಿಧಾನಾತ್ಮಕವಾಗಿ ನಡೆದುಕೊಳ್ಳುತ್ತೇವೆ’ ಎಂದು ತಿಳಿಸಿದರು.

18ರಂದು ಹಲವರು ಪಕ್ಷ ಸೇರ್ಪಡೆ

‘ಮಾ.18ರಂದು ರಾಹುಲ್ ಗಾಂಧಿ ಕಲಬುರ್ಗಿ ನಗರಕ್ಕೆ ಬರಲಿದ್ದು, ಅಂದು ಬೆಳಿಗ್ಗೆ 11.30 ಗಂಟೆಗೆ ನೂತನ ವಿದ್ಯಾಲಯ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಪ್ರಿಯಾಂಕ್ ಹೇಳಿದರು.

‘ಈ ಕಾರ್ಯಕ್ರಮ ಬಳಿಕ ರಾಹುಲ್ ಗಾಂಧಿ ಬೆಂಗಳೂರಿಗೆ ತೆರಳಲಿದ್ದು, ಅಲ್ಲಿ ಯುವಕರು ಮತ್ತು ನವೋದ್ಯಮಿಗಳ ಜತೆ ಸಂವಾದ ನಡೆಸಲಿದ್ದಾರೆ. ಅದೇ ದಿನ ಕಲಬುರ್ಗಿಯಲ್ಲಿ ಹಲವು ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT