ಗುರುವಾರ , ಫೆಬ್ರವರಿ 20, 2020
19 °C
14 ತಿಂಗಳ ಬಳಿಕ ಕೊನೆಗೂ ಕೂಡಿ ಬಂದ ಮುಹೂರ್ತ

ಸಚಿವ ಕಾರಜೋಳ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಇದೇ 12ರಂದು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 10ಕ್ಕೆ ಆರಂಭವಾಗಲಿದೆ.

ಪ್ರಿಯಾಂಕ್‌ ಖರ್ಗೆ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ 2018ರ ಅಕ್ಟೋಬರ್‌ 1ರಂದು ಜಿಲ್ಲಾ ಮಟ್ಟದ ಕೆಡಿಪಿ ಸಭೆ ನಡೆದಿತ್ತು. 14 ತಿಂಗಳ ಬಳಿಕ ಕೆಡಿಪಿ ಸಭೆ ನಡೆಯುತ್ತಿದೆ. ಗೋವಿಂದ ಕಾರಜೋಳ ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಎರಡು ಬಾರಿ ಕೆಡಿಪಿ ಸಭೆ ನಿಗದಿಯಾಗಿತ್ತು. ಒಂದು ಬಾರಿ ಕೆಡಿಪಿ ಸಭೆಯಲ್ಲಿ ಭಾಗವಹಿಸಲು ಸದಸ್ಯರಿಗೆ ನಿಯಮದ ಪ್ರಕಾರ ಏಳು ದಿನಗಳ ಮುಂದೆ ಸಭಾ ಸೂಚನಾ ಪತ್ರ ನೀಡಿಲ್ಲ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮುಂದೂಡಲಾಗಿತ್ತು. ಎರಡನೇ ಬಾರಿ ನವೆಂಬರ್‌ 8ರಂದು ಸಭೆಯನ್ನು ನಿಗದಿಪಡಿಸಲಾಗಿತ್ತು. ಅಂದು ಅಯೋಧ್ಯೆ ತೀರ್ಪು ಇದ್ದುದರಿಂದ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ವಿಧಿಸಲಾಗಿತ್ತು. ಹೀಗಾಗಿ, ಕಾರಜೋಳ ಅವರು ಸಭೆಯನ್ನು ನಡೆಸದೇ ವಾಪಸ್‌ ತೆರಳಿದರು.

ಇದೀಗ ಮೂರನೇ ಬಾರಿಗೆ ಕೆಡಿಪಿ ಸಭೆಯನ್ನು ಆಯೋಜಿಸಲಾಗಿದೆ. ಸಚಿವರ ಮೊದಲ ಪ್ರವಾಸ ಪಟ್ಟಿಯ ಪ್ರಕಾರ ಇಡೀ ದಿನ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ, ನಂತರ ಬಂದ ಪ್ರವಾಸ ಪಟ್ಟಿಯ ಪ್ರಕಾರ ಬೆಳಿಗ್ಗೆ 10ರಿಂದ ಮಧ್ಯಾಹ್ನದವರೆಗೆ ಸಭೆ ನಡೆಯಲಿದೆ. ಮಧ್ಯಾಹ್ನ 3.30ರಿಂದ ಸಂಜೆ 5.30ರವರೆಗೆ ನಗರದಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಸಂಜೆ 5.30ಕ್ಕೆ ಕಲ್ಯಾಣ ಕರ್ನಾಟಕ ‍ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಜಿಲ್ಲೆಯ ಮ್ಯಾಕ್ರೊ ಕ್ರಿಯಾ ಯೋಜನೆ ತಯಾರಿಸುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ರಾತ್ರಿ 9.05ಕ್ಕೆ ಸೊಲ್ಲಾಪುರ–ಹಾಸನ ಎಕ್ಸ್‌ಪ್ರೆಸ್‌ ರೈಲಿನ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)