ಶುಕ್ರವಾರ, ಮೇ 27, 2022
23 °C
ಕಾಯಕಲ್ಪಕ್ಕೆ ಕಾದಿವೆ ಜಿಲ್ಲೆಯ ಬಹುಪಾಲು ಕೆರೆಗಳು, ಕುಡಿಯುವ ನೀರಿನ ನೆಲೆಗಳಿಗೇ ಇಲ್ಲ ಆಸರೆ, ನೀರು ಸಂಗ್ರಹ ಸಾಮರ್ಥ್ಯ ಕ್ಷೀಣ

ತುಂಬಿಕೊಂಡ ಹೂಳು, ಒತ್ತುವರಿ ಗೀಳು

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‌ಜಿಲ್ಲೆಯಲ್ಲಿರುವ ಬಹುಪಾಲು ಕೆರೆಗಳನ್ನು ಕಾಡುತ್ತಿರುವುದು ಎರಡು ಮುಖ್ಯ ಸಮಸ್ಯೆ. ಒಂದು ಒತ್ತುವರಿ ಮಾಡಿಕೊಳ್ಳುವವರು ಗೀಳು, ಇನ್ನೊಂದು ಅಪಾರ ಪ್ರಮಾಣದಲ್ಲಿ ತುಂಬಿಕೊಂಡ ಹೂಳು.

ಈ ಬಾರಿ ಮುಂಗಾರು ಮಳೆ ಹದವಾಗಿ ಬಿದ್ದಿದೆ. ಕೆರೆ– ಕಟ್ಟೆಗಳು ಕೂಡ ನಿರೀಕ್ಷೆಗಿಂತ ಮುಂಚಿತವಾಗಿಯೇ ಭರ್ತಿಯಾಗಿವೆ. ನಗರ, ಪಟ್ಟಣ ಹಾಗೂ ಗ್ರಾಮದ ಅಂಚಿಗೆ ಇರುವ ಕೆರೆಯ ಪ್ರದೇಶದಲ್ಲಿ ಕೆಲವರು ಮನೆ, ಮಳಿಗೆ ಕಟ್ಟಿಕೊಂಡಿದ್ದಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಕೆರೆಗಳ ವಿಸ್ತಾರ ಚಿಕ್ಕದಾಗುತ್ತ ಬಂದು, ನೀರು ಸಂಗ್ರಹ ಸಾಮರ್ಥ್ಯ ಕೂಡ ಕ್ಷೀಣಿಸುತ್ತಿದೆ.

ಬಹಳಷ್ಟು ಕೆರೆಗಳಲ್ಲಿ ಅಪಾರ ಪ್ರಮಾಣದ ಹೂಳು ತುಂಬಿದ್ದರಿಂದಲೇ ಹೆಚ್ಚಿನ ನೀರು ಹರಿದುಹೋಗುತ್ತಿದೆ. ಪ್ರತಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಹುಪಾಲು ಕೆರೆಗಳು ಬತ್ತುತ್ತವೆ. ಇದರಿಂದ ಅಂತರ್ಜಲ ಕೂಡ ಕುಸಿದು, ಕುಡಿಯುವ ನೀರಿಗೂ ತತ್ವಾರ ಪಡುವುದು ‘ಸಂಪ್ರದಾಯ’ದಂತೆ ಮುಂದುವರಿದಿದೆ.

ಮತ್ತೆ ಕೆಲವು ಗ್ರಾಮಗಳಲ್ಲಿ ಕೆರೆಯ ಅಂಗಳವೇ ಬಯಲು ಶೌಚದ ತಾಣವಾಗಿದೆ. ಇದರಿಂದ ನೀರು ಮಲಿನಗೊಂಡಿದ್ದು, ಬಟ್ಟೆ, ಪಾತ್ರೆ, ದನಗಳ ಮೈ ತೊಳೆಯುವುದಕ್ಕೂ ಬಾರದಂತಾಗಿವೆ.

ಸಿಹಿ ನೀರಿನ ಆಕರಗಳು: ಕಲಬುರ್ಗಿ ತಾಲ್ಲೂಕಿನ ಭೋಸಗಾ ಕೆರೆ ಈಗ ಶೇ 90ರಷ್ಟು ಭರ್ತಿಯಾಗಿದೆ. ನಗರಕ್ಕೆ ಶೇ 20ರಷ್ಟು ನೀರು ಪೂರೈಕೆ ಮಾಡುವ ಈ ಕೆರೆಯಲ್ಲೂ ನೀರು ಸಂಗ್ರಹ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಕಳೆದ ಬಾರಿ ಅತಿವೃಷ್ಟಿಯ ಕಾರಣ ಕೆರೆಯ ಕೋಡಿ ಏರಿ ನೀರು ಹೊರಚೆಲ್ಲಿತು. ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಕ್ಷೇತ್ರವಾಗಿ ಇದನ್ನು ಬೆಳೆಸಬೇಕು ಎಂಬ ಕನಸು ಮಾತ್ರ ಇನ್ನೂ ಕನಸಾಗೇ ಉಳಿದಿದೆ.

420 ಮಿಲಿಯನ್‌ ಕ್ಯೂಬಿಟ್‌ ಫೀಟ್‌ (ಎಂಸಿಎಫ್‌) ಸಾಮರ್ಥ್ಯದ ಖಾಜಾಕೋಟನೂರ ಕೆರೆಯಲ್ಲಿ ಕೂಡ ಅಪಾರ ಹೂಳು ತುಂಬಿಕೊಂಡಿದೆ. ಕುಡಿಯುವ ನೀರು ಹಾಗೂ ಮೀನುಗಾರಿಕೆಗೆ ಅಪಾರ ಅವಕಾಶ ನೀಡಬಲ್ಲ ಈ ಕೆರೆಗೆ ನಿರ್ವಹಣೆ ಇಲ್ಲದಿರುವುದೇ ಬಾಧೆ.

ಕೊನೆಗಾಣದ ಹೂಳು

ಅಫಜಲಪುರ: ಪಟ್ಟಣದ ಹೊರ ವಲಯದಲ್ಲಿನ ದೊಡ್ಡ ಕೆರೆಯು ಆರು ಗ್ರಾಮಗಳಿಗೆ ನೀರಿನ ನೆಲೆಯಾಗಿದೆ. ಬಾವಿ, ಬೋರ್‌ವೆಲ್‌ಗಳಲ್ಲಿ ನೀರುಕ್ಕಲು ಇದೇ ಕೆರೆ ಕಾರಣ. ಆದರೆ, ಇದರಲ್ಲೂ ಎರಡು ದಶಕಗಳಿಂದ ಅಪಾರ ಪ್ರಮಾಣದ ಹೂಳು ತುಂಬಿಕೊಂಡಿದೆ. ಹೀಗಾಗಿ, ಪ್ರತಿ ಬೇಸಿಗೆಯಲ್ಲೂ ಒಣಗಿಹೋಗುತ್ತದೆ. ಭೀಮಾ ಬ್ಯಾರೇಜ್‌ನಿಂದ ಕೆರೆಗೆ ನೀರು ತುಂಬಿಸಬೇಕು ಎನ್ನುವ ಕೂಗು ಕೇಳುತ್ತಲೇ ಇದೆ.

1983ರಲ್ಲಿ ಸುಮಾರು ₹ 20.8 ಲಕ್ಷ ವೆಚ್ಚದಲ್ಲಿ ನಿರ್ಮಾಣದ ಜಿನುಗು ಕೆರೆ 33.15 ಜಲಾನಯನ ಪ್ರದೇಶ ಹೊಂದಿದೆ. 8.38 ಹೆಕ್ಟೇರ್ ಪ್ರದೇಶದಲ್ಲಿ ನೀರು ತುಂಬಿದ್ದು, 73 ಕ್ಯುಸೆಕ್‌ನಷ್ಟ ನೀರು ಹೊರ ಬಿಡಲಾಗುತ್ತದೆ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್‌ ಶಾಂತಪ್ಪ ಜಾಧವ ಹೇಳುತ್ತಾರೆ.

ಧರ್ಮಸ್ಥಳ ಸಂಸ್ಥೆಯ ಮಾದರಿ ಕೆಲಸ

ಸೇಡಂ: ತಾಲ್ಲೂಕಿನ ಕೋಡ್ಲಾ ಗ್ರಾಮದಲ್ಲಿ ಎರಡು ವರ್ಷಗಳ ಹಿಂದೆ ಧರ್ಮ ಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹೂಳೆತ್ತದ್ದರಿಂದ ಕರೆಯ ಆಳ ಹೆಚ್ಚಿ ನೀರು ಸಂಗ್ರಹವಾಗಿದೆ. ಇದರಿಂದ ಇದರ ಸುತ್ತಲಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿದೆ.

ಮುಧೋಳದಲ್ಲಿ ರಾಮ ಕರೆ, ಊರ ಕೆರೆ ಇವೆ. ಕಾನಗಡ್ಡಾ, ಮೇದಕ್, ಮೋತಕಪಲ್ಲಿ, ಶಕಲಾಸಪಲ್ಲಿ ಸೇರಿದಂತೆ ವಿವಿಧೆಡೆ ಕೆರೆಗಳು ಹೂಳಿನಿಂದ ತುಂಬಿವೆ. ನರೆಗಾ ಅಡಿ ಹೂಳೆತ್ತಲು ಮುಂದಾಗಿದ್ದರೂ ಪರಿಣಾಮ ಅಷ್ಟಾಗಿ ಕಾಣಿಸಿವುದಿಲ್ಲ.

ಕೆರೆ ಇದ್ದೂ ಪ್ರಯೋಜನವಿಲ್ಲ

ಯಡ್ರಾಮಿ: ತಾಲ್ಲೂಕಿನ 16 ಕೆರೆಗಳು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತವೆ. ಹೀಗಾಗಿ, ಈ ಬಾರಿ ನರೇಗಾ ಕಾಮಗಾರಿಗಳಲ್ಲಿ ಕೆರೆ ಅಭಿವೃದ್ಧಿ ಕೆಲಸಗಳನ್ನೇ ಕೈಗೆತ್ತಿಕೊಳ್ಳಲಾಗಿದೆ. ಬದು ನಿರ್ಮಾಣ, ಹೂಳತ್ತುವ ಕಾಮಗಾರಿ ನಡೆಸಲಾಗಿದೆ.

ಬಿಳವಾರ, ಹಂಗರಗಾ, ಇಜೇರಿ, ಬಿಳವಾರ, ವಡಗೇರಾದಲ್ಲಿನ ಕೆರೆಗಳಲ್ಲೂ ಹುಳು ತುಂಬಿದೆ. ಬಿಳವಾರ ಸಣ್ಣ ಕೆರೆ ಇದ್ದು, ವಡಗೇರಾದಲ್ಲಿ ದೊಡ್ಡ ಕೆರೆ ಇದ್ದು, ಒತ್ತುವರಿ ಸಮಸ್ಯೆ ಎದುರಿಸುತ್ತಿದೆ. ಮಾತ್ರವಲ್ಲ ಗ್ರಾಮದ ಚರಂಡಿ ನೀರು ಈ ಕೆರೆಯ ಒಡಲು ಸೇರುತ್ತದೆ. ನೀರು ಗಬ್ಬೆದ್ದು ನಾರುತ್ತಿದ್ದು ಯಾವುದಕ್ಕೂ ಬಳಕೆ ಇಲ್ಲದಂತಾಗಿದೆ.

ಕಾಲುವೆಗಳಿಲ್ಲ

ಚಿಂಚೋಳಿ: ತಾಲ್ಲೂಕಿನಲ್ಲಿ ಸುಮಾರು 17 ಸಣ್ಣ ನೀರಾವರಿ, 2 ಬೃಹತ್ ನೀರಾವರಿ ಮತ್ತು 8 ಬ್ಯಾರೇಜುಗಳಿವೆ. ಆದರೆ, ಬಹಳಷ್ಟು ಕಡೆ ಕಾಲುವೆಗಳು ಇಲ್ಲ. ಹೀಗಾಗಿ, ಇವು ಕೃಷಿಗೆ, ಕುಡಿಯುವ ನೀರಿನ ಉದ್ದೇಶ ಈಡೇರಿಸುತ್ತಿಲ್ಲ.

ಕಳೆದ ವರ್ಷ  ನಾಗಾಈದಲಾಯಿ, ದೋಟಿಕೊಳ ಹಾಗೂ ಹೂಡದಳ್ಳಿ ಕೆರೆಗಳು ಒಡೆದಿದ್ದವು. ಇವುಗಳಲ್ಲಿ ನಾಗಾಈದಲಾಯಿ ಕೆರೆ ಪುನರ್ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ₹ 4 ಕೋಟಿ ಅನುದಾನ ಮಂಜೂರಾಗಿದೆ.

ಸಾಲೇಬೀರನಹಳ್ಳಿ, ಚಿಕ್ಕಲಿಂಗದಳ್ಳಿ, ತುಮಕುಂಟಾ ಸೇರಿದಂತೆ ಕೆಲವು ಕೆರೆಗಳು ರೈತರಿಗೆ ಉಪಯೋಗವಾಗುತ್ತಿವೆ. ನಿರ್ವಹಣೆಗೆ ಅನುದಾನದ ಕೊರತೆಯಿಂದ ಕೆರೆಗಳು ಸರ್ಕಾರದ ಉದಾಸೀನಕ್ಕೆ ಒಳಗಾಗಿವೆ.

ಕಾಡಿಂಚಿನ ಚಂದಾಪುರದ ಕೆರೆಯಂತೂ ಶೇ 60ರಷ್ಟು ಒತ್ತುವರಿಯಾಗಿದೆ. ವನ್ಯಮೃಗಗಳಿಗೆ ನೀರೆನೆಲೆಯಾಗಿದ್ದ ಈ ಕೆರೆ ಇನ್ನಷ್ಟು ವರ್ಷಕ್ಕೆ ಕಾಗದದ ದಾಖಲೆಯಾಗಿ ಮಾತ್ರ ಉಳಿಯುವಂತಿದೆ.

ದುರಸ್ತಿಗೆ ಕಾದಿವೆ

ಆಳಂದ: ತಾಲ್ಲೂಕಿನಲ್ಲಿ ಸಣ್ಣ, ಅತಿಸಣ್ಣ ಕೆರೆಗಳು ಸೇರಿದಂತೆ ಒಟ್ಟು 35 ಕೆರೆಗಳಿವೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದ ಕಾರಣ ನೀರು ಸಂಗ್ರಹ ಸಾಮರ್ಥ್ಯ ಕಳೆದುಕೊಂಡಿವೆ. ಕಳೆದ ಬಾರಿ ಅತಿವೃಷ್ಟಿಯ ಕಾರಣ ಕೆರೆಗಳು ವರ್ಷವಿಡೀ ತುಂಬಿದ್ದು ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿ ಕಂಡುಬಂದಿಲ್ಲ.

ನಿಂಬಾಳ, ಹಡಲಗಿ, ಮದಗುಣಕಿ, ಮಾದನ ಹಿಪ್ಪರಗಾ, ನಿಂಬರ್ಗಾ, ಧಂಗಾಪುರ, ತಡಕಲ್, ಶುಕ್ರವಾಡಿ, ಸರಸಂಬಾ, ತಡೋಳಾ, ನರೋಣಾ, ಮುನ್ನೋಳ್ಳಿ ಕೆರೆಗಳು ಸಂಪೂರ್ಣ ಖಾಲಿಯಾಗಿವೆ. ಉಳಿದಂತೆ ಕೆರೂರು, ಝಳಕಿ, ಹಳ್ಳಿ ಸಲಗರ, ಸಾಲೇಗಾಂವ, ವೈಜಾಪುರ, ಎಲೆ ನಾವದಗಿ, ತಲೆಕುಣಿ, ದಣ್ಣೂರು, ಹೊನ್ನಳ್ಳಿ ಕೆರೆಗಳು ದುರಸ್ತಿಗೆ ಕಾದಿವೆ. ಕೊತ್ತನ ಹಿಪ್ಪರಗಾ, ವಳವಂಡವಾಡಿ, ತಡಕಲ, ಪಡಸಾವಳಿ, ಕಡಗಂಚಿ ಗ್ರಾಮಗಳಲ್ಲಿ ಕೆರೆ ನಿರ್ಮಾಣದ ಪ್ರಸ್ತಾವ ಇದೆ. ಆದರೆ ಕೆಲಸ ಆರಂಭವಾಗಿಲ್ಲ.

ಕೆರೆಗಳ ವಿಂಗಡಣೆ

40 ಹೆಕ್ಟೇರ್‌ಗಿಂತ ಕಡಿಮೆ ಅಂಗಳ ಹೊಂದಿದ ಕೆರೆಗಳನ್ನು ಸಣ್ಣ ಕೆರೆಗಳು ಎಂದು ಪರಿಗಣಿಸಲಾಗಿದ್ದು, ಇವುಗಳನ್ನು ಸ್ಥಳೀಯ ಸಂಸ್ಥೆಯ ಸುಪರ್ದಿಗೆ ನೀಡಲಾಗುತ್ತದೆ. 40 ಹೆಕ್ಟೇರ್‌ನಿಂದ 2000 ಹೆಕ್ಟೇರ್‌ ವ್ಯಾಪ್ತಿ ಇರುವ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆ ನಿರ್ವಹಣೆ ಮಾಡುತ್ತದೆ. 2000 ಹೆಕ್ಟೇರ್‌ಗಿಂತ ದೊಡ್ಡದಾದ ಕೆರೆಗಳನ್ನು ಏತ ನೀರಾವರಿ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ನೀರಾವರಿ ನಿಗಮ ನಿರ್ವಹಣೆ ಮಾಡುತ್ತದೆ.

ಯಡ್ರಾಮಿ ತಾಲ್ಲೂಕಿನಲ್ಲಿ ಕೆರೆಗಳ ಸಂಖ್ಯೆಯೇ ಕಡಿಮೆ. ಇದ್ದ ಕೆಲವು ಕೆರೆಗಳು ಹೂಳೆತ್ತುವ ಕಾಮಗಾರಿ ನಡೆಸಿದ್ದೇವೆ. ಬದು ನಿರ್ಮಾಣ, ಕೃಷಿ ಹೊಂಡ, ಕಾಲುವೆ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿವೆ.

–ಮಹಾಂತೇಶ ಪುರಾಣಿಕ, ತಾ.ಪಂ ಸಹಾಯಕ ನಿರ್ದೇಶಕ, ಯಡ್ರಾಮಿ

ಕಲಬುರ್ಗಿ ನಗರಕ್ಕೆ ನೀರು ಪೂರೈಸುವ ಭೋಸಗಾ ಕೆರೆಗೆ ಹೂಳಿನ ಸಮಸ್ಯೆ ಅಷ್ಟಾಗಿ ಇಲ್ಲ. ಈವರೆಗೆ 16.13 ಮಿಲಿಯನ್ ಕ್ಯೂಬಿಕ್‌ ಫೀಟ್‌ನಷ್ಟು ನೀರು ಸಂಗ್ರಹವಾಗಿದೆ. ಇದರ ಒಟ್ಟು ಸಂಗ್ರಹ ಸಾಮರ್ಥ್ಯ 18.6 ಮಿಲಿಯನ್‌ ಕ್ಯೂಬಿಕ್‌ ಫೀಟ್‌ ಇದೆ. ಈಗ ಸಂಗ್ರಹಗೊಂಡ ನೀರು ಮೂರು ತಿಂಗಳಿಗೆ ಸಾಲುತ್ತದೆ.
–ಎಚ್‌.ಎನ್‌.ಸ್ವಾಮಿ, ಎಇಇ, ನೀರು ಸರಬರಾಜು ಉಪವಿಭಾಗ, ಕಲಬುರ್ಗಿ

ಖಾಜಾ ಕೋಟನೂರ ಕೆರೆಯಲ್ಲಿ ಅಪಾರ ಹೂಳು ತುಂಬಿದೆ. ಇದರಿಂದ ಹೆಚ್ಚು ನೀರು ನಿಲ್ಲುವುದಿಲ್ಲ. ಬದಲಾಗಿ ಹಿಂದಿನ ಹೊಲಗಳಿಗೆ ನುಗ್ಗಿ ಅಪಾರ ಬೆಳೆ ಹಾಳಾಗುತ್ತಿದೆ. ನೀರಾವರಿ ಇಲಾಖೆಯುವರು ಇದರ ಹೂಳು ತೆಗೆಸಿದರೆ ರೈತರಿಗೆ, ಗ್ರಾಮಸ್ಥರಿಗೆ ವರದಾನವಾಗಲಿದೆ.
–ರವಿಕುಮಾರ, ರೈತ

ದೋಟಿಕೊಳ ಕೆರೆ ಒಡ್ಡು ಒಡೆದು ಅಪಾರ ಹಾನಿ ಸಂಭವಿಸಿದ್ದರೂ ಜನಪ್ರತಿನಿಧಿಗಳು, ಸರ್ಕಾರ ಕಡೆಗಣಿಸಿದೆ. ಕೆರೆ ನಿರ್ಮಾಣದ ಭರವಸೆಯೂ ಈಡೇರಿಲ್ಲ. ಶೀಘ್ರವೇ ಕೆರೆ ಮರುನಿರ್ಮಾಣವಾಗಲಿ.
–ವಿಠಲರಾವ್ ಕುಲಕರ್ಣಿ, ದೋಟಿಕೊಳ ರೈತ

ಜನ– ಜಾನುವಾರುಗಳಿಗೆ ವರದಾನ

ಚಿತ್ತಾಪುರ: ಜೀರ್ಣೋದ್ಧಾರದಿಂದ ಏನೆಲ್ಲ ಉದ್ಧಾರ ಸಾಧ್ಯ ಎಂಬುದಕ್ಕೆ ತಾಲ್ಲೂಕಿನ ಅಲ್ಲೂರ್ (ಬಿ) ಗ್ರಾಮದ ಕೆರೆಯೇ ಸಾಕ್ಷಿ. ಜೀರ್ಣೋದ್ಧಾರವಾದ ನಂತರ ಈ ಕೆರೆಯಲ್ಲಿ ಅಪಾರ ನೀರು ಸಂಗ್ರಹವಾಗಿದೆ. ಅಲ್ಲೂರ್(ಬಿ) ಮತ್ತು ಅಲ್ಲೂರ್(ಕೆ) ಗ್ರಾಮಗಳ ನಡುವೆ ಆಯಕಟ್ಟಿನ ಪ್ರದೇಶದಲ್ಲಿ ನಿರ್ಮಿಸಿರುವ ಕೆರೆ ಎರಡು ಗ್ರಾಮಗಳ ಜನಜೀವನಕ್ಕೆ, ರೈತರ ಕೃಷಿ ಚಟುವಟಿಕೆಗೆ ತುಂಬಾ ಉಪಯುಕ್ತವಾಗಿದೆ. ಬೇಸಿಗೆಯಲ್ಲಿ ಬಾವಿ, ಕೊಳವೆ ಬಾವಿಗೆ ನೀರಿನ ಸಂಪನ್ಮೂಲ ಹಾಗೂ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಅಂತರ್ಜಲಮಟ್ಟ ವೃದ್ಧಿಸಲು ನೆರವಾಗಿದೆ. ಕೆರೆಯ ಹಿನ್ನೀರಿನ ಪ್ರದೇಶದಲ್ಲಿ ನೀರಾವರಿ, ತೋಟಗಾರಿಕೆಗೆ ಅನುಕೂಲವಾಗಿದೆ.

ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ, ಮಲ್ಲಿಕಾರ್ಜುನ ಮಾಡಬೂಳಕರ, ಶಿವಾನಂದ ಹಸರಗುಂಡಗಿ, ಮಂಜುನಾಥ ದೊಡಮನಿ, ಸಂಜಯ ಪಾಟೀಲ, ಅವಿನಾಶ ಬೋರಂಚಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.