ಮತದಾನ ಮಾಡಿ; ಅಂಬೇಡ್ಕರ್ ಕನಸು ನನಸಾಗಿಸಿ: ಆರ್. ವೆಂಕಟೇಶಕುಮಾರ್

ಮಂಗಳವಾರ, ಏಪ್ರಿಲ್ 23, 2019
29 °C

ಮತದಾನ ಮಾಡಿ; ಅಂಬೇಡ್ಕರ್ ಕನಸು ನನಸಾಗಿಸಿ: ಆರ್. ವೆಂಕಟೇಶಕುಮಾರ್

Published:
Updated:
Prajavani

ಕಲಬುರ್ಗಿ: ‘ಡಾ. ಬಿ.ಆರ್.ಅಂಬೇಡ್ಕರ್ ಅವರು ಚುನಾವಣೆ ಮೂಲಕ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಳ್ಳಬೇಕು ಎಂದು ಕನಸು ಕಂಡಿದ್ದರು. ಏ. 23ರಂದು ನಡೆಯುವ ಚುನಾವಣೆಯಲ್ಲಿ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಅವರ ಕನಸನ್ನು ನನಸಾಗಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ್ ಹೇಳಿದರು.

ನಗರದ ಜಗತ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪಾಲಿಕೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳಿದ್ದರೂ ಎಲ್ಲರೂ ಒಗ್ಗಟ್ಟಾಗಿ ಬಾಳುತ್ತಿರುವುದಕ್ಕೆ ಸಂವಿಧಾನವೇ ಮೂಲ ಕಾರಣವಾಗಿದೆ. ದೇಶದಲ್ಲಿ ಸಂವಿಧಾನ ಇರದಿದ್ದರೆ ಯಾರೂ ಸ್ವತಂತ್ರರಾಗಿ ಹಾಗೂ ಸಮಾನರಾಗಿ ಬದುಕುತ್ತಿರಲಿಲ್ಲ. ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ, ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ’ ಎಂದು ಹೇಳಿದರು.

‘ಅಂಬೇಡ್ಕರರು ಕೇವಲ ಸಂವಿಧಾನದ ಶಿಲ್ಪಿಗಳಲ್ಲದೇ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ದೇಶದಲ್ಲಿ ಸಾಮಾಜಿಕ ಸಮಾನತೆಗಾಗಿ ಬಹಳ ಹೋರಾಡಿದ್ದಾರೆ. ಮೂಢನಂಬಿಕೆ, ವರ್ಣಾಶ್ರಮವನ್ನು ಹೋಗಲಾಡಿಸಲು ಶ್ರಮಿಸಿದ್ದಾರೆ. ದೇಶದ ಪ್ರತಿಯೊಬ್ಬರಿಗೂ ಆರ್ಥಿಕ ಸಮಾನತೆ ನೀಡುವಲ್ಲಿ ಅವರ ಪಾತ್ರ ಹಿರಿದಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ. ಮಾತನಾಡಿ, ‘ಅಂಬೇಡ್ಕರರು ಎಲ್ಲಾ ಕ್ಷೇತ್ರಗಳಿಗೂ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅಸ್ಪೃಶ್ಯತೆ ಹೋಗಲಾಡಿಸಲು ಹಾಗೂ ಮಹಿಳೆಯರಿಗೆ ಸರ್ವ ಹಕ್ಕುಗಳನ್ನು ದೊರಕಿಸಿಕೊಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ’ ಎಂದು ಹೇಳಿದರು.

ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ ಅವರು ವಿಶೇಷ ಉಪನ್ಯಾಸ ನೀಡಿದರು.

ಸಿದ್ಧಾರ್ಥ ವಿಹಾರ ಟ್ರಸ್ಟ್‌ನ ಸಂಘಾನಂದ ಭಂತೇಜಿ, ಈಶಾನ್ಯ ವಲಯ ಐಜಿಪಿ ಮನೀಷ್ ಖರ್ಬೀಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್, ಕಲಬುರ್ಗಿ ಉಪ ವಿಭಾಗಾಧಿಕಾರಿ ರಾಹುಲ್ ತುಕಾರಾಂ ಪಾಂಡ್ವೆ, ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್.ಸತೀಶ, ಮುಖಂಡರಾದ ಅವಿನಾಶ ಗಾಯಕವಾಡ, ಸೋಮಶೇಖರ ಮದನಕರ, ಬಾಬು ಮೋರೆ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !