ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಂಕೂರಿಗೆ ಕೀರ್ತಿ ತಂದ ಡಾ. ಸಾಬಣ್ಣ ತಳವಾರ: ವಿಧಾನ ಪರಿಷತ್‌ಗೆ ನಾಮನಿರ್ದೇಶನ

ವಿಧಾನಪರಿಷತ್‌ಗೆ ಬಿಜೆಪಿಯಿಂದ ನಾಮನಿರ್ದೇಶನ
Last Updated 24 ಜುಲೈ 2020, 5:10 IST
ಅಕ್ಷರ ಗಾತ್ರ

ಕಲಬುರ್ಗಿ: ನೂತನವಾಗಿ ವಿಧಾನಪರಿಷತ್‌ಗೆ ನಾಮನಿರ್ದೇಶನಗೊಂಡ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಸಾಬಣ್ಣ ತಳವಾರ ಶಹಾಬಾದ್ ತಾಲ್ಲೂಕಿನ ಭಂಕೂರಿನವರು.

ಎಸಿಸಿ ಸಿಮೆಂಟ್ ಕಾರ್ಖಾನೆಯ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸೈದಪ್ಪ ಜಾಪೂರ, ಶರಣವ್ವ ದಂಪತಿ ಪುತ್ರ ಸಾಬಣ್ಣ ತೀರ ಬಡತನದಲ್ಲೂ ಭಂಕೂರ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಶಹಾಬಾದ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಗಿಸಿದ್ದು, ಎಸ್.ಎಸ್. ಮರಗೋಳ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪಡೆದರು.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದು ಅಲ್ಲಿಯೇ ಡಾಕ್ಟರೇಟ್‌ ಪಡೆದ ಸಾಬಣ್ಣ ಅವರು ಆ ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಡಾಕ್ಟರೇಟ್‌ ಪಡೆದ ಬಳಿಕ ಚಿತ್ತಾಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸರಳ ಸಜ್ಜನಿಕೆಗೆ ಹೆಸರಾದ ಸಾಬಣ್ಣ ಅವರು ಈ ಮುಂಚೆ ಯಾವುದೇ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸಿದವರಲ್ಲ. ಹಾಗಾಗಿ, ಅವರ ನಾಮನಿರ್ದೇಶನದ ಬಗ್ಗೆ ಜಿಲ್ಲಾ ಬಿಜೆಪಿಯಲ್ಲಿಯೂ ಅಚ್ಚರಿ ಮೂಡಿದೆ.

ಕೋಲಿ ಸಮಾಜಕ್ಕೆ ಪ್ರಾತಿನಿಧ್ಯ: ಕೋಲಿ ಸಮಾಜಕ್ಕೆ ಸೇರಿದ ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರ ಅವರ ಅವಧಿ ಕಳೆದ ತಿಂಗಳು ಮುಕ್ತಾಯವಾಗಿತ್ತು. ಹೆಚ್ಚು ಜನರನ್ನು ನಾಮನಿರ್ದೇಶನ ಮಾಡುವ ಅವಕಾಶ ಹೊಂದಿರುವ ಬಿಜೆಪಿಯೂ ಕೋಲಿ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂಬ ಒತ್ತಾಯವೂ ಬಲವಾಗಿ ಕೇಳಿ ಬಂದಿತ್ತು. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಸಮಾಜಕ್ಕೆ ಪ್ರಾತಿನಿಧ್ಯ ನೀಡುವ ಮೂಲಕ ಬಿಜೆಪಿ ತನ್ನ ಮತಬ್ಯಾಂಕ್ ಇನ್ನಷ್ಟು ಗಟ್ಟಿ ಮಾಡಿಕೊಂಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಈಗಾಗಲೇ ಇದೇ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಬಾಬುರಾವ ಚಿಂಚನಸೂರ ಅವರನ್ನು ನಿಜಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT