ಗುರುವಾರ , ಆಗಸ್ಟ್ 18, 2022
24 °C
ದುರ್ನಾತದಿಂದ ಕಂಗೆಟ್ಟ ಶಕ್ತಿನಗರ ಬಡಾವಣೆ ನಿವಾಸಿಗಳು; ಸಮಸ್ಯೆಗೆ ಸಿಗದ ಸ್ಪಂದನೆ

ಕಲಬುರ್ಗಿ: ಕೊಳಚೆ ಗುಂಡಿಯಾದ ರೈಲ್ವೆ ಕೆಳಸೇತುವೆ

ಹನಮಂತ ಕೊಪ್ಪದ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪ್ರತಿಸಲ ಧಾರಾಕಾರ ಮಳೆ ಸುರಿದಾಗಲೆಲ್ಲ ಇಲ್ಲಿನ ರೈಲ್ವೆ ಕೆಳಸೇತುವೆಗೆ ಹೊಂದಿಕೊಂಡಿರುವ ಶಕ್ತಿನಗರದ ನಿವಾಸಿಗಳಿಗೆ ಶಕ್ತಿ ಕುಂದಿದ ಅನುಭವ. ಸುತ್ತಮುತ್ತಲಿನ ಹಲವು ಬಡಾವಣೆಗಳಿಂದ ಹರಿದು ಬರುವ ಕೊಳಚೆ ನೀರು ಕೆಳಸೇತುವೆಯಲ್ಲಿ ಸಂಗ್ರಹವಾಗುವುದರಿಂದ ದುರ್ನಾತದಿಂದ ಇಲ್ಲಿನ ನಿವಾಸಿಗಳು ನಿತ್ಯ ಹಿಂಸೆ ಅನುಭವಿಸುವಂತಾಗಿದೆ.

ಸಮರ್ಪಕ ಚರಂಡಿ ಇಲ್ಲದ ಕಾರಣ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗದೆ ರೈಲ್ವೆ ಕೆಳಸೇತುವೆಯಲ್ಲಿ ಬಂದು ನಿಲ್ಲುತ್ತಿದೆ. ಮ್ಯಾನ್‌ಹೋಲ್‌ಗಳ ಕೊಳಚೆಯೂ ಇಲ್ಲಿ ಬಂದು ಸೇರುತ್ತಿದೆ. ಸುಮಾರು 15– 20 ದಿನಗಳ ಕಾಲ ನೀರು ನಿಲ್ಲುವುದರಿಂದ ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಸಂಜೆಯಾಗುತ್ತಿದ್ದಂತೆಯೆ ಮನೆಯಿಂದ ಹೊರಗೆ ಬಾರದ ಪರಿಸ್ಥಿತಿ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ವಿದ್ಯಾವತಿ.

ಇಲ್ಲಿನ ಜೇವರ್ಗಿ ಕಾಲೊನಿ, ಶಕ್ತಿನಗರ, ಘಾಟಗೆ ಲೇಔಟ್, ದತ್ತನಗರ, ಗೋದುತಾಯಿನಗರ, ಬೇಂದ್ರೆನಗರ ಬಡಾವಣೆಗಳ ಸಾವಿರಾರು ಜನರು ನಿತ್ಯ ಈ ರೈಲ್ವೆ ಕೆಳಸೇತುವೆ ಮೂಲಕ ಓಡಾಡುತ್ತಾರೆ. ಮಳೆ ಬಂದಾಗಲೆಲ್ಲ ಇಲ್ಲಿ ಕೊಳಚೆ ನೀರು ನಿಲ್ಲುವುದರಿಂದ ಸಂಪರ್ಕ ಕಡಿತಗೊಂಡು ವಾಹನ ಸವಾರರು, ವಿದ್ಯಾರ್ಥಿಗಳು ಹಾಗೂ ಕಚೇರಿಗೆ ಹೋಗುವ ನೌಕರರು ತೊಂದರೆ ಅನುಭವಿಸುವಂತಾಗಿದೆ. 

ದತ್ತನಗರದಿಂದ ಕೆಳಸೇತುವೆ ಮೂಲಕ ಶಕ್ತಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದಾಗಿ ಹದಗೆಟ್ಟಿದೆ. ಇದನ್ನು ದುರಸ್ತಿ ಮಾಡುವಂತೆ ಶಾಸಕ, ಸಂಸದ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೂ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈಗಲಾದರೂ ಸಂಬಂಧಪಟ್ಟವರು ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಚರಂಡಿ ನಿರ್ಮಿಸಬೇಕು. ಕೆಳಸೇತುವೆಯಲ್ಲಿ ನೀರು ನಿಲ್ಲದ ಹಾಗೆ ವ್ಯವಸ್ಥೆ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.

ಅಲ್ಲದೆ ರೈಲ್ವೆ ಬ್ರಿಡ್ಜ್‌ಗೆ ಹೊಂದಿಕೊಂಡಿರುವ ರಸ್ತೆಯಲ್ಲಿ ಅಳವಡಿಸಿರುವ ಬೀದಿ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ರಾತ್ರಿ ವೇಳೆ ಕಗ್ಗತ್ತಲು ತುಂಬಿರುತ್ತದೆ. ಇದರಿಂದಾಗಿ ಜನರು ಭಯದಿಂದಲೇ ರಸ್ತೆಯಲ್ಲಿ ಓಡಾಡುವಂತಾಗಿದೆ. ಅಪರಾಧ ಚಟುವಟಿಕೆಗಳ ನಿಯಂತ್ರಣಕ್ಕಾಗಿ ಈ ಭಾಗದಲ್ಲಿ ಸಿಸಿ ಟಿವಿ ಅಳವಡಿಸಬೇಕು. ರಸ್ತೆಯ ಎರಡು ಬದಿ ಫುಟ್‌ಪಾತ್ ನಿರ್ಮಿಸಬೇಕು. ಬೀದಿ ದೀಪಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯ.

ಶಕ್ತಿನಗರದ ಕೆಲವು ಮನೆಗಳಿಗೆ 8 ದಿನಕ್ಕೊಮ್ಮೆ ನೀರು ಬರುತ್ತಿದೆ. ಕೆಲವು ಕಡೆ ಕೊಳಚೆ ಮಿಶ್ರಿತ ನೀರು ಬರುತ್ತಿದ್ದು, ಇದರಿಂದ ಜನರು ರೋಗ ರುಜಿನಗಳಿಂದ ಬಳಲುವಂತಾಗಿದೆ. ಶುದ್ಧ ನೀರು ಕುಡಿಯುವ ನೀರು ಪೂರೈಸುವ ಜತೆಗೆ ಕೊಳಚೆ ನೀರಿನ ದುರ್ನಾತದಿಂದ ಮುಕ್ತಿ ಕೊಡಿಸಬೇಕು ಎಂದು ಶಕ್ತಿನಗರ ನಿವಾಸಿಗಳು ಮನವಿ ಮಾಡಿದರು.

***

ದತ್ತನಗರದಿಂದ ರೈಲ್ವೆ ಕೆಳಸೇತುವೆ ಮೂಲಕ ಶಕ್ತಿನಗರ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದೆ. ಈ ಕುರಿತು ಪಾಲಿಕೆ ಹಾಗೂ ಕೆಕೆಆರ್‌ಡಿಬಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ

- ಅನಂತ ಜಿ.ಗುಡಿ, ಅಧ್ಯಕ್ಷ, ಕರ್ನಾಟಕ ಯುವಜನ ಒಕ್ಕೂಟ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು