ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೆ ಮಿಂಚಿದ ಚಿಣ್ಣರ ದಂಡು

Last Updated 13 ಮೇ 2022, 2:49 IST
ಅಕ್ಷರ ಗಾತ್ರ

ಕಲಬುರಗಿ: ಇಲ್ಲಿನ ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಗುರುವಾರ ಸಂಜೆ ಚಿಣ್ಣರ ಲೋಕವೇ ಅನಾವರಣಗೊಂಡಿತು. ಕಲಬುರಗಿ ರಂಗಾಯಣದಿಂದ ಆಯೋಜಿಸಿದ ‘ಚಿಣ್ಣರ ಮೇಳ’ದ ಅಂಗವಾಗಿ ಏರ್ಪಡಿಸಿದ್ದ ಮೂಕಾಭಿನಯ ಹಾಗೂ ನಾಟಕಗಳು ಪ್ರೇಕ್ಷಕರ ಮನ ಗೆದ್ದವು. ಒಬ್ಬರಿಗಿಂತ ಒಬ್ಬರು ಸುಂದರ ಅಭಿನಯ ತೋರಿದ ಮಕ್ಕಳಿಗೆ, ತುಂಬಿದ ಸಭಾಂಗಣದಲ್ಲಿ ಚಪ್ಪಾಳೆಗಳ ಸುರಿಮಳೆ...

ಮೇಳದ ‘ಕಮಲ’ ತಂಡದ ಮಕ್ಕಳು ಮೂಕಾಭಿನಯದ ಮೂಲಕ ಆರಂಭದಲ್ಲೇ ಪ್ರೇಕ್ಷಕರನ್ನು ಬರಸೆಳೆದರು. ಬಾಲ್ಯಾವಸ್ಥೆಯಲ್ಲಿ ಆಡುವ ತುಂಟಾಟಗಳು, ರೈಲು, ಬಸ್‌ ಪ್ರಯಾಣದ ಕಚಗುಳಿ ಕ್ಷಣಗಳನ್ನು ಅಭಿನಯಿಸುತ್ತ ಮಕ್ಕಳು ನೋಡುಗರನ್ನು ಕಟ್ಟಿಹಿಡಿದರು. ಕೊನೆಯಲ್ಲಿ ಕೃಷಿಯಿಂದ ವಿಮುಖರಾದರೆ ಜೀವನ ಹೇಗೆ ನರಕವಾಗುತ್ತದೆ? ರೈತರ ಆತ್ಮಹತ್ಯೆಗೆ ಕಾರಣಗಳೇನು ಎಂಬುದನ್ನೂ ಪುಟಾಣಿಗಳು ಕಣ್ಣಿಗೆ ಕಟ್ಟುವಂತೆ ಬಿಂಬಿಸಿದರು. ಮುರುಘೇಂದ್ರ ನಾಚವಾರ್‌ ಅವರ ರಚನೆ, ಪರಿಕಲ್ಪನೆ, ಸಂಗೀತ ಹಾಗೂ ನಿರ್ದೇಶನ ಸೊಗಸಾಗಿ ಮೂಡಿಬಂತು.

ನಂತರ ವೇದಿಕೆ ಆಕ್ರಮಿಸಿಕೊಂಡ ‘ಗುಲಾಬಿ’ ಚಿಣ್ಣರ ದಂಡು ‘ಬಕಪಕ್ಷಿ ಹಾಗೂ ಹಾವಿನ ಕಥೆ’ ಎಂಬ ಪುಟ್ಟ ನಾಟಕದ ಮೂಲಕ ಗಮನ ಸೆಳೆಯಿತು. ಮೂಲದಲ್ಲಿ ದುರ್ಗಸಿಂಹನ ಪಂಚತಂತ್ರ ಕಥೆಯನ್ನು ಜಗದೀಶ ಪಾಟೀಲ ಅವರು ರಂಗರೂಪಕ್ಕೆ ತಂದಿದ್ದಾರೆ. ಜಗದೀಶ ಹಾಗೂ ರಾಜು ಉಪ್ಪಾರ ಅವರ ಸಂಗೀತ ನಿರ್ದೇಶನ, ರಾಜಕುಮಾರ, ಸಿದ್ಧಾರ್ಥ ಕಟ್ಟಿಮನಿ, ಅಂಬಿಕಾ ಜಾನಿ ಅವರ ವಸ್ತ್ರವಿನ್ಯಾಸ ಕಣ್ಮನ ಸೆಳೆಯಿತು. ರಾಜಕುಮಾರ್, ವಿಕ್ರಮ ಹಾಗೂ ಅಭಿಷೇಕ ಅವರ ರಂಗಸಜ್ಜಿಕೆಯಲ್ಲಿ ಪುಟಾಣಿಗಳು ತಮ್ಮ ಪ್ರತಿಭೆ ಒರೆಗೆ ಹಚ್ಚಿದರು.

ಪುಟ್ಟಪುಟ್ಟ ಬಕಪಕ್ಷಿಗಳಾಗಿ ರೆಕ್ಕೆ ಕಟ್ಟಿಕೊಂಡು ಹಾರುವ ರೀತಿ, ಹಾವುಗಳ ವೇಷದಲ್ಲಿ ಸುಳಿದಾಡಿದ ರೀತಿ, ಹಾವನ್ನು ಹಿಡಿಯಲು ಬರುವ ಮುಂಗುಸಿ ವೇಷದಲ್ಲಿ ಕುಣಿದ ರೀತಿಗಳಿಗೆ ಪ್ರೇಕ್ಷಕರು ಮನಸೋತರು. ಹಕ್ಕಿಗಳ ಮೊಟ್ಟೆ ತಿನ್ನಲು ಬರುವ ಹಾವು, ಹಾವನ್ನು ತಿನ್ನಲು ಬರುವ ಮುಂಗುಸಿ ಹೀಗೆ ಒಬ್ಬರಲ್ಲಿ ಒಬ್ಬರಿಗೆ ಹುಟ್ಟುವ ದ್ವೇಷದಿಂದ ಕೆಟ್ಟದ್ದೇ ಆಗುತ್ತದೆ. ಆದ್ದರಿಂದ ನಮ್ಮಲ್ಲಿನ ದ್ವೇಷ ಭಾವ ಬಿಟ್ಟು ಸ್ನೇಹದಿಂದ ಬದುಕಿದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂಬ ಸಂದೇಶವನ್ನು ಮಕ್ಕಳು ನೀಡಿದರು.

ಪ್ರಭಾಕರ ಜೋಶಿ ಅವರು ರಚಿಸಿದ ‘ಸ್ವರ್ಗದ ಬದುಕು’ ನಾಟಕವನ್ನು ‘ಸಂಪಿಗೆ’ ತಂಡದವರು ಅಭಿನಯಿಸಿದರು. ಮಹಾಂತೇಶ ರಾಯಚೂರು, ಭಾಗ್ಯಶ್ರೀ ಪಾಳಾ ಅವರು ನಿರ್ದೇಶಿಸಿದ ಈ ನಾಟಕಕ್ಕೆ ಪ್ರಕಾಶ ಪೂಜಾರಿ ಹಾಗೂ ರಾಜು ಉಪ್ಪಾರ ಸಂಗೀತ ಸಾಂಗತ್ಯ ನೀಡಿದರು. ಪೇಠ ತೊಟ್ಟು, ಧೋತರ ಉಟ್ಟು, ತಂಬೂರಿ ಹಿಡಿದು ಹೆಜ್ಜೆ ಹಾಕಿದ ಮಕ್ಕಳು, ವಿವಿಧ ಬಂದವರ ಅಭಿನಯ, ದೇಸಿ ಸೊಗಡಿನ ಹಾವಭಾವ, ನೆರಳು– ಬೆಳಕಿನ ವ್ಯವಸ್ಥೆ ಸೊಗಸಾಗಿ ಮೂಡಿಬಂತು. ಪಟಪಟನೇ ಅರಳು ಹುರಿದಂತೆ ಡೈಲಾಗು ಹೇಳಿದ ಮಕ್ಕಳು ಪ್ರೇಕ್ಷಕರ ಮನಗೆದ್ದರು.

ಉದ್ಘಾಟನಾ ಸಮಾರಂಭ: ಇದಕ್ಕೂ ಮುನ್ನ ಎರಡು ದಿನಗಳ ನಾಟಕೋತ್ಸವವನ್ನು ರಂಗನಟಿ, ಬೆಂಗಳೂರಿನ ರಂಗ ಸಮಾದಜದ ಸದಸ್ಯೆ ಹೆಲೆನ್‌ ಮೈಸೂರ ಅವರು ಉದ್ಘಾಟಿಸಿದರು. ಜಯಶ್ರೀ ಬಸವರಾಜ ಮತ್ತಿಮೂಡಮುಖ್ಯ ಅತಿಥಿಯಾಗಿ ಮಾತನಾಡಿದರು. ಕಲಬುರಗಿ ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ ಸಂದೀಪ ಬಿ. ವೇದಿಕೆ ಮೇಲಿದ್ದರು. ಸಾಕ್ಷಿ ಶಿವರಂಜನ್‌ ಸತ್ಯಂಪೇಟೆ, ಸ್ಫೂರ್ತಿ, ಆಜಾದ್‌ ಅನಿಸಿಕೆ ವ್ಯಕ್ತಪಡಿಸಿದರು. ಅಕ್ಷತಾ ಕುಲಕರ್ಣಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT