ಭಾನುವಾರ, ಫೆಬ್ರವರಿ 28, 2021
21 °C
ಡಾ.ಚಂದ್ರಶೇಖರ ದೊಡ್ಡಮನಿ ಜನ್ಮದಿನ ಸುವರ್ಣ ಮಹೋತ್ಸವದಲ್ಲಿ ಪ್ರಿಯಾಂಕ್‌ ಕೋರಿಕೆ

ಪ್ರಬುದ್ಧ ಭಾರತಕ್ಕಾಗಿ ಚಿಂತಕರ ಜವಾಬ್ದಾರಿ ಹೆಚ್ಚಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬುದ್ಧ– ಬಸವ ಹಾಗೂ ಅಂಬೇಡ್ಕರ್ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಉತ್ಕೃಷ್ಟ ಹಾಗೂ ಪ್ರಬುದ್ಧ ಭಾರತ ನಿರ್ಮಾಣಗೊಳ್ಳಲು ನಾಡಿನ ಸಾಹಿತಿಗಳು, ಚಿಂತಕರು ಹಾಗೂ ಪ್ರಗತಿಪರರು ತಮ್ಮ ಜವಾಬ್ದಾರಿಯನ್ನು ಇನ್ನಷ್ಟು ನಿಭಾಯಿಸಬೇಕಿದೆ’ ಎಂದು ಶಾಸಕ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಡಾ.ಚಂದ್ರಶೇಖರ ದೊಡ್ಡಮನಿ ಅವರ ಜನ್ಮದಿನದ ಸುವರ್ಣ ಮಹೋತ್ಸವ, ಮಹಾಬೋಧಿ ಪ್ರಕಾಶನದ 12ನೇ ವಾರ್ಷಿಕೋತ್ಸವ, ‘ಧ್ಯಾನಶೀಲ’ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ದೇಶದಲ್ಲಿ ಇಂದು ವಾತಾವರಣ ಕಲುಷಿತಗೊಂಡಿದೆ. ವ್ಯವಸ್ಥೆಯ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲಾಗುತ್ತಿದೆ. ಅಂಥವರ ಧ್ವನಿ ಅಡಗಿಸುವ ಕೆಲಸವೂ ನಡೆಯುತ್ತಿದೆ. ನಾವು ರಾಜಕಾರಣಿಗಳು; ನಮ್ಮ ಮಾತುಗಳಿಗಿಂತ ಜನರು ನಿಮ್ಮ ಮಾತುಗಳನ್ನು ಕೇಳುತ್ತಾರೆ.‌ ಇದಕ್ಕೆ ತಾಜಾ ಉದಾಹರಣೆ ಎಂದರೆ ಪ್ರಸ್ತುತ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ. ಅಲ್ಲಿ ವಿಚಾರವಾದಿಗಳಿಗೆ, ಪ್ರಗತಿಪರರಿಗೆ ಸ್ವಾಗತವಿದೆ ಹೊರತು; ನಮ್ಮಂತ ರಾಜಕಾರಣಿಗಳಿಗೆ ಅಲ್ಲ’ ಎಂದರು.

‘ಗೌತಮ ಬುದ್ಧನ ಮಾತುಗಳು ಸಾರ್ವಕಾಲಿಕವಾಗಿವೆ. ಅವರ ಬಗ್ಗೆ ಎರಡು ದಶಕಗಳವರೆಗೆ ಅಧ್ಯಯನ ಮಾಡಿದ ನಂತರವೆ ಡಾ.ಬಿ.ಆರ್‌. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದರು. ಇಸ್ಲಾಂ, ಕ್ರಿಶ್ಚಿಯನ್, ಸಿಖ್ ಧರ್ಮದ ಗುರುಗಳು ಬಾಬಾಸಾಹೇಬರನ್ನು ತಮ್ಮ ಧರ್ಮ ಸ್ವೀಕಾರ ಮಾಡುವಂತೆ ಕರೆ ನೀಡಿದ್ದರು. ಆದರೂ ಆ ಕರೆಗಳನ್ನ ನಿರಾಕರಸಿ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದರು’ ಎಂದರು.

‘ಯಾವ ಧರ್ಮದಲ್ಲಿ ನಾವು ಹುಟ್ಟಿದ್ದೇವೆಯೋ ಅಲ್ಲಿ ನಮಗೆ ಸಮಾನತೆ, ಭ್ರಾತೃತ್ವ ಇಲ್ಲ ಎಂದಮೇಲೆ ಅನ್ಯ ಧರ್ಮ ಸ್ವೀಕಾರ ಅನಿವಾರ್ಯ ಎನಿಸಿತು’ ಎಂದು ಬಾಬಾಸಾಹೇಬರು ತಾವು ಬೌದ್ಧ ಧರ್ಮ ಸ್ವೀಕಾರ ಮಾಡಬೇಕಾಗಿ ಒದಗಿ ಬಂದ ಸನ್ನಿವೇಶವನ್ನು ಉಲ್ಲೇಖಿಸಿದ್ದಾರೆ’ ಎಂದೂ ಪ್ರಿಯಾಂಕ್‌ ಹೇಳಿದರು.

‘ಫ್ರೆಂಚ್ ಮಹಾಕಾಂತ್ರಿಯನ್ನು ಬೌದ್ಧಧರ್ಮಕ್ಕೆ ಹೋಲಿಸಿದ ಬಾಬಾಸಾಹೇಬರು, ಸಮಾನತೆ, ಸ್ವಾತಂತ್ರ್ಯ, ಸ್ವಾಭಿಮಾನ ಹಾಗೂ ಭ್ರಾತೃತ್ವ ಇರುವ ಬೌದ್ಧ ಧರ್ಮದಿಂದ ಮಾತ್ರ ನಾವು ಉದ್ಧಾರವಾಗಲು ಸಾಧ್ಯ ಎಂದು ಉಲ್ಲೇಖಿಸಿದ್ದಾರೆ. ಹಾಗಾಗಿ, ಈ ದೇಶದಲ್ಲಿ ಬೌದ್ಧ ಧರ್ಮ ಇನ್ನೂ ಅಸ್ತಿತ್ವದಲ್ಲಿ ಇರಲು ಅವರೇ ಕಾರಣ’ ಎಂದರು.

ಮುಖಂಡರಾದ ಸತೀಶಕುಮಾರ ಎಂ ಹೊಸಮನಿ, ಸುರೇಶ ಶರ್ಮಾ, ಶಿವಶರಣಪ್ಪ ಮುಳೆಗಾಂವ್, ವಿಜಯ ಕಾಂಬಳೆ, ಸೂರ್ಯ ಕಾಂತ ಸುಜ್ಯಾತ್, ಪ್ರೊ.ಬಸವರಾಜ ಡೋಣೂರು, ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಅನೇಕ ಗಣ್ಯರು ವೇದಿಕೆ ಮೇಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.