780 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಿಇಒ

ಗುರುವಾರ , ಮಾರ್ಚ್ 21, 2019
27 °C

780 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ: ಸಿಇಒ

Published:
Updated:
Prajavani

ಕಲಬುರ್ಗಿ: ‘ಜಿಲ್ಲೆಯ 780 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನೀರು ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜಾ ಪಿ. ತಿಳಿಸಿದರು.

‘ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಮೊದಲ ಹಂತದಲ್ಲಿ ₹6.75 ಕೋಟಿ ಅನುದಾನ ಮಂಜೂರಾಗಿದೆ. 480 ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, 300 ಪೂರ್ಣಗೊಂಡಿವೆ. 180 ಕಾಮಗಾರಿಗಳು ಪ್ರಗತಿಯಲ್ಲಿವೆ. 14ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾದ ಅನುದಾನದ ಶೇ 60ರಷ್ಟನ್ನು ಕುಡಿಯುವ ನೀರಿನ ಕಾಮಗಾರಿಗಳಿಗೆ ಬಳಕೆ ಮಾಡಿಕೊಳ್ಳುವಂತೆ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ’ ಎಂದರು.

‘ಜಿಲ್ಲೆಯಲ್ಲಿ 20 ಗ್ರಾಮಗಳಿಗೆ ಸದ್ಯ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಬಾಡಿಗೆ ಪಡೆದು ಪೂರೈಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಮಾತನಾಡಿ, ‘ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕುಡಿಯುವ ನೀರು ಹಾಗೂ ಬರ ಪರಿಹಾರ ಕಾಮಗಾರಿಗಳಿಗೆ ವಿನಾಯಿತಿ ಇದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಸ್ಥಳೀಯವಾಗಿ ಕೆಲಸ ನೀಡಲಾಗುತ್ತಿದೆ. ಮೇವು ಖರೀದಿಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ’ ಎಂದು ತಿಳಿಸಿದರು.

‘ನಾರಾಯಣಪುರ ಜಲಾಶಯದಿಂದ ಭೀಮಾ ನದಿಗೆ 0.56 ಟಿಎಂಸಿ ಅಡಿ ನೀರನ್ನು ಹರಿ ಬಿಟ್ಟಿದ್ದಾರೆ. ಈ ನೀರನ್ನು ಕಲ್ಲೂರ, ಸರಡಗಿ ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಲಾಗುವುದು’ ಎಂದರು.

ಪಾಲಿಕೆ ಆಯುಕ್ತೆ ಬಿ.ಫೌಜಿಯಾ ತರನ್ನುಂ ಮಾತನಾಡಿ, ‘ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿರುವ ಬಡಾವಣೆಗಳ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಲಾಗಿದೆ. 4–5 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿರುವ ಬಡಾವಣೆಗಳಿಗೆ ದಿನ ಬಿಟ್ಟು ದಿನ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !