ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಶುದ್ಧ ನೀರು ಪೂರೈಸಿದರೂ ಕುಡಿಯಲೊಲ್ಲದ ಜನ!

ಜನರ ದಾಹ ನೀಗಿಸುತ್ತಿರುವ ನಿಜಾಮನ ಕಾಲದ ಯೋಜನೆ
Last Updated 20 ಜನವರಿ 2020, 19:30 IST
ಅಕ್ಷರ ಗಾತ್ರ

ಚಿಂಚೋಳಿ: ಸುಮಾರು 25 ಸಾವಿರ ಜನಸಂಖ್ಯೆ ಹೊಂದಿರುವ ಪುರಸಭೆ ವ್ಯಾಪ್ತಿಯಲ್ಲಿ ಚಿಂಚೋಳಿ ಮತ್ತು ಚಂದಾಪುರ ಎಂಬ ಎರಡು ಪಟ್ಟಣಗಳಿವೆ. ಈ ಅವಳಿ ಪಟ್ಟಣದ ಜನರಿಗೆ ಕುಡಿಯುವ ನೀರಿಗೆ ಬರವಿಲ್ಲ. ಆದರೆ ವ್ಯವಸ್ಥೆ ಲೋಪದಿಂದ ಕೆಲ ಕಡೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ. ಇದರಿಂದ ಜನರು ಪರದಾಡುವಂತಾಗಿದೆ.

ಚಂದಾಪುರದಲ್ಲಿ ಜನರಿಗೆ ಫಿಲ್ಟರ್‌ ಬೆಡ್‌ನಲ್ಲಿ ಶುದ್ಧೀಕರಿಸಿದ ನೀರು ಪೂರೈಸಲಾಗುತ್ತಿದೆ. ಆದರೆ, ಜನ ಮಾತ್ರ ಈ ನೀರು ಕುಡಿಯುವುದೇ ಇಲ್ಲ. ಶೇ 5 ರಿಂದ10 ಜನ ಮಾತ್ರ ಈ ನೀರು ಕುಡಿಯಲು ಬಳಸಿದರೆ, ಉಳಿದವರು ಕೊಳವೆ ಬಾವಿ ನೀರು ಹಾಗೂ ಖರೀದಿಸಿ ತಂದ ಶುದ್ಧೀಕರಿಸಿದ ನೀರು ಕುಡಿಯುತ್ತಾರೆ. ಕೆಲವರು ತಮ್ಮ ಮನೆಯಲ್ಲಿ ನೀರಿನ ಶುದ್ಧೀಕರಣ ಯಂತ್ರ ಅಳವಡಿಸಿಕೊಂಡಿದ್ದಾರೆ.

ಫಿಲ್ಟರ್‌ ಬೆಡ್‌ನಲ್ಲಿ ನೀರು ಶುದ್ಧೀಕರಿಸಿ ಪೂರೈಸಿದರೂ ಜನರಿಗೆ ಅದರ ಮೇಲೆ ವಿಶ್ವಾಸ ಇಲ್ಲ. ಇದಕ್ಕೆ ಮುಖ್ಯ ಕಾರಣ ಮಳೆಗಾಲದಲ್ಲಿ ನದಿಯಲ್ಲಿ ಹರಿಯುವ ನೀರಿನಲ್ಲಿ ಮಣ್ಣು ಮಿಶ್ರಣಗೊಂಡು ನೀರಿನ ಬಣ್ಣ ಬದಲಾಗಿರುತ್ತದೆ. ಶುದ್ಧೀಕರಿಸಿದ ಮೇಲೂ ಅದರ ಬಣ್ಣ ಬದಲಾಗುವುದಿಲ್ಲ. ಕೊಳವೆ ಸೋರಿಕೆ ಮತ್ತೊಂದು ಕಾರಣವಾಗಿದೆ. ಚರಂಡಿ ನೀರು ಕೊಳವೆಯಲ್ಲಿ ಸೇರುತ್ತಿದೆ ಎಂಬ ಅನುಮಾನದಿಂದಲೂ ಜನ ಈ ನೀರು ಕುಡಿಯಲು ಹಿಂದೇಟು ಹಾಕುತ್ತಿದ್ದಾರೆ. ಬಟ್ಟೆ ಬರೆ ತೊಳೆಯಲಷ್ಟೇ ಬಳಸುತ್ತಾರೆ.

ಚಂದಾಪುರದಲ್ಲಿ ಹೆಚ್ಚಿನ ಮಂದಿ ಟಿಎಪಿಸಿಎಂಎಸ್‌ ಸ್ಥಾಪಿಸಿದ ಶುದ್ಧ ಕುಡಿಯುವ ನೀರಿನ ಘಟಕದಿಂದ ಹಣ ಕೊಟ್ಟು ನೀರು ಒಯ್ಯುತ್ತಾರೆ. ಮನೆ ಮನೆಗೂ ಡ್ರಮ್‌ ಮೂಲಕ ನೀರಿನ ಮಾರಾಟ ನಡೆಯುತ್ತಿದೆ.

ಇನ್ನೆರಡು ಖಾಸಗಿ ಶುದ್ಧೀಕರಣ ಘಟಕಗಳಿಂದಲೂ ಜನರು ನೀರು ಒಯ್ಯುತ್ತಿದ್ದಾರೆ. ಚಂದಾಪುರದ ಗಂಗೂನಾಯಕ ತಾಂಡಾದಲ್ಲಿ ಪುರಸಭೆ ಸ್ಥಾಪಿಸಿದ ಶುದ್ಧೀಕರಣ ಘಟಕ ಹಾಗೂ ಎಪಿಎಂಸಿ ಆವರಣದಲ್ಲಿನ ಶುದ್ಧೀಕರಣ ಘಟಕಗಳು ವ್ಯರ್ಥವಾಗಿವೆ.

ಚಿಂಚೋಳಿ ಪಟ್ಟಣಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದ ಕುಡಿವ ನೀರಿನ ವ್ಯವಸ್ಥೆಯೇ ಈಗಲೂ ವರವಾಗಿ ಪರಿಣಮಿಸಿದೆ. ನಿಜಾಮರ ಕಾಲದಲ್ಲಿ ರೂಪಿಸಿದ ಕುಡಿವ ನೀರಿನ ವ್ಯವಸ್ಥೆಯಿಂದಲೇ ಈಗಲೂ ಜನರು ನೀರು ಪಡೆಯುತ್ತಿದ್ದಾರೆ!

ಮುಲ್ಲಾಮಾರಿ ನದಿಯಲ್ಲಿ ಬಡಿ ದರ್ಗಾದ ಹಿಂದುಗಡೆ ಇಂಟೆಕ್‌ವೆಲ್‌ ನಿರ್ಮಿಸಿ ಅಲ್ಲಿಂದ ಕುಡಿವ ನೀರು ಇನ್‌ ಫಿಲ್ಟರೇಷನ್‌ ಬಾವಿ ಮೂಲಕ ನೀರು ಶುದ್ಧೀಕರಿಸಲಾಗುತ್ತಿದೆ. ಇಲ್ಲಿಂದ ಜಾಕವೆಲ್‌ಗೆ, ಅಲ್ಲಿಂದ ಅಶೋಕ ಪಾಟೀಲರ ಹೊಲದಲ್ಲಿರುವ 12 ಸಾವಿರ ಗ್ಯಾಲನ್ ಸಾಮರ್ಥ್ಯದ ಟ್ಯಾಂಕ್‌ಗೆ ನೀರು ಪೂರೈಸಲಾಗುತ್ತದೆ. ಅಲ್ಲಿಂದ ಅಬ್ದುಲ್‌ ಬಾಷೀತ್‌ ಮನೆಯ ಎದುರುಗಡೆಯ 18 ಸಾವಿರ ಗ್ಯಾಲನ್‌ ಸಾಮರ್ಥ್ಯದ ಟ್ಯಾಂಕ್‌ಗೆ ನೀರು ಪೂರೈಸಿ ಸಾರ್ವಜನಿಕ ನಲ್ಲಿಗಳಿಗೆ ಮತ್ತು ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಕೆಲ ಕಡೆ ಕೊಳವೆ ಬಾವಿಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ನದಿ ನೀರು ಪೂರೈಕೆ ಇಲ್ಲದ ಕಡೆ ಜನರು ಕೊಳವೆ ಬಾವಿ ನೀರು ನೆಚ್ಚಿಕೊಂಡಿದ್ದಾರೆ.

ಅಂಚೆ ಕಚೇರಿ ಮತ್ತು ಪೊಲೀಸ್‌ ಠಾಣೆ ಬಳಿಯ ಕೊಳವೆ ಬಾವಿಯಿಂದಲೇ ಕಲ್ಯಾಣ ಗಡ್ಡಿ ಮತ್ತು ಹರಿಜನ ವಾಡಾ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ ಈ ನೀರು ಗಡಸಾಗಿದೆ. ಬಸ್‌ ನಿಲ್ದಾಣದಲ್ಲಿ ಅತಿಯಾದ ಗಡಸು ನೀರೇ ಗತಿಯಾಗಿದೆ ಎನ್ನುತ್ತಾರೆ ಪುರಸಭೆ ಸದಸ್ಯೆ ಸುಲೋಚನಾ ಜಗನ್ನಾಥ ಕಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT