ಬುಧವಾರ, ಜನವರಿ 19, 2022
24 °C

ಕಲಬುರಗಿ: ದಾಹ ನೀಗಿಸದ ಓವರ್ ಹೆಡ್ ಟ್ಯಾಂಕ್; ಶುಲ್ಕ ಕಟ್ಟಿದರೂ ಸಿಗದ ನೀರು

ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ನೀರು ಸಂಗ್ರಹ ತೊಟ್ಟಿ (ಓವರ್ ಹೆಡ್ ಟ್ಯಾಂಕ್) ನಿರ್ಮಾಣವಾಗಿ ದಶಕ ಕಳೆದರೂ ಜಾಗೃತಿ ಕಾಲೊನಿ, ಓಂನಗರದ ನಿವಾಸಿಗರು ನಿತ್ಯ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ.

ನಗರದ ಜಾಗೃತಿ ಕಾಲೊನಿಯ ರೇವಣಸಿದ್ದೇಶ್ವರ ಉದ್ಯಾನದಲ್ಲಿ 2009ರಲ್ಲಿ ನೀರು ಸಂಗ್ರಹ ತೊಟ್ಟಿ ನಿರ್ಮಿಸಲಾಗಿದೆ. ಆರಂಭದಲ್ಲಿ ಏಳು ತಿಂಗಳು ಪ್ರತಿದಿನ ಸರಿಯಾಗಿಯೇ ನೀರು ಪೂರೈಕೆ ಆಗುತ್ತಿತ್ತು. ಆ ಬಳಿಕ ಕೆಲವರು ನಲ್ಲಿ ವಾಲ್‌ ಅನ್ನು ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿ, ತಮ್ಮ ಕಡೆ ಹರಿಯುವಂತೆ ಮಾಡಿಕೊಂಡರು. ಇದರಿಂದ ಜಾಗೃತಿ ಕಾಲೊನಿ, ರಘೋಜಿ ಲೆಔಟ್, ಓಂನಗರ, ಸ್ವಸ್ತಿಕ ನಗರದ ನಿವಾಸಿಗಳಿಗೆ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ತಿಂಗಳಲ್ಲಿ ಐದು ಬಾರಿ ಮಾತ್ರವೇ ನಲ್ಲಿಯಲ್ಲಿ ಒಂದರಿಂದ ಅರ್ಧ ಗಂಟೆ ಮಾತ್ರ ನೀರು ಬರುತ್ತಿದೆ ಎಂದು ನಿವಾಸಿಗಳು ದೂರಿದರು.

‘ಕೆಲವು ಜನರು ಗುಂಪು ಕಟ್ಟಿಕೊಂಡು ಅಧಿಕಾರಿಗಳಿಗೆ ಬೆದರಿಕೆಹಾಕಿ ಟ್ಯಾಂಕ್‌ ವಾಲ್ ಸಡಿಲಿಕೆ ಮಾಡಿಕೊಂಡು, ತಮ್ಮ ಇಚ್ಛೆಯಂತೆ ನೀರು ಪಡೆಯುತ್ತಿದ್ದಾರೆ. ಜಾಗೃತಿ ಕಾಲೊನಿ, ರಘೋಜಿ ಲೆಔಟ್, ಓಂನಗರ ಭಾಗದ ಮನೆಗಳಿಗೆ ಸಾಕಷ್ಟು ನೀರು ಪೂರೈಕೆ ಆಗುತ್ತಿಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿತ್ತು. ಇದನ್ನು ಸರಿಪಡಿಸಲು ಬಂದ ಅಧಿಕಾರಿಗಳನ್ನು ಕೆಲವರು ಹೆದರಿಸಿ ವಾಲ್ ಸರಿಪಡಿಸಲು ಬಿಡಲಿಲ್ಲ. ದಿನದಿಂದ ದಿನಕ್ಕೆ ನಮಗೆ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸುತ್ತಿದೆ. ನಿವಾಸಿಗಳು, ಆಸ್ಪತ್ರೆ ಸಿಬ್ಬಂದಿ ಮತ್ತು ರೋಗಿಗಳು, ಜಾನುವಾರು ನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಇಡೀ ಕಾಲೊನಿಗೆ ದೂರದ ಎರಡು ಕೊಳವೆಬಾವಿಗಳ ನೀರೇ ಆಸರೆ ಆಗಿವೆ’ ಎನ್ನುತ್ತಾರೆ ನಿವಾಸಿ ಆನಂದ ಸಿದ್ರಾಮಗೋಳ.

‌‘ತಿಂಗಳಲ್ಲಿ ಕೆಲವು ಬಾರು ಮಾತ್ರ ಅಲ್ಪ ನೀರು ಬರುತ್ತದೆ. ಅದನ್ನೇ ಹಿಡಿದಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಮತ್ತೆ ನೀರು ಬರುವವರೆಗೂ ಕಾಯಬೇಕು. ಈ ನೀರು ಎರಡು ಮೂರು ದಿನದಲ್ಲಿ ಖಾಲಿ ಆಗುತ್ತದೆ. ಹಣ ಕೊಟ್ಟು ಖಾಸಗಿ ಇಲ್ಲವೇ ದೂರದ ಕೊಳವೆಬಾವಿಗಳಿಂದ ತರಬೇಕು. ನಾಲ್ಕು ವರ್ಷದಿಂದ ಜಲಮಂಡಳಿಗೆ ಸಾವಿರಾರು ರೂಪಾಯಿ ನೀರಿನ ಶುಲ್ಕ ಕಟ್ಟುತ್ತಿದ್ದೇವೆ. ಆದರೂ ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ’ ಎಂದು ನಿವಾಸಿ ಕಮಲಬಾಯಿ ಕಲಶೆಟ್ಟಿ ಸಮಸ್ಯೆ ತೋಡಿಕೊಂಡರು.

ಓವರ್ ಹೆಡ್‌ಟ್ಯಾಂಕ್‌ಗೆ ಒಂದು ಔಟ್‌ಲೆಟ್ ಪೈಪ್‌ಲೈನ್ ಇದೆ. ನಾಲ್ಕು ಬ್ರಾಂಚ್ ಪೈಪ್‌ಲೈನ್‌ಗಳಿವೆ. ಒಂದೇ ಕಡೆ ಸುಮಾರು 50 ಮನೆಗಳಿಗೆ ನಿತ್ಯ ನೀರು ಸರಬರಾಜು ಆಗುತ್ತಿದೆ ಎಂದು ನಿವಾಸಿಗರು ಹೇಳುತ್ತಿದ್ದಾರೆ. ತಮಗೂ ಅದೇ ಮಾದರಿಯಲ್ಲಿ ನೀರು ಪೂರೈಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಅಧಿಕಾರಿ ಹಾಗೂ ತಜ್ಞರ ಜತೆಗೆ ಕಾಲೊನಿಗೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ ಎಂದು ಎಇಇ ಶಿವಕುಮಾರ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

*

ಲಿಖಿತ ದೂರು ಕೊಟ್ಟು ಎರಡು ತಿಂಗಳು ಕಳೆದರೂ ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಇದರಿಂದ ತುಂಬಾ ತೊಂದರೆ ಆಗುತ್ತಿದೆ. ಹಣ ಕೊಟ್ಟು ನೀರು ಖರೀದಿಸಬೇಕಾಗಿದೆ

–ಆನಂದ ಸಿದ್ರಾಮಗೋಳ, ಜಾಗೃತಿ ಕಾಲೊನಿ ನಿವಾಸಿ

*

ನಿತ್ಯ ನಲ್ಲಿ ನೀರು ಬಿಡುವಂತೆ ಕೇಳಿದರೆ ‘ಸ್ವಲ್ಪ ದಿನ ತಡೆಯಿರಿ 24 ಗಂಟೆ ನೀರು ಬರುತ್ತೆ’ ಎಂದು ಜಲಮಂಡಳಿ ಸಿಬ್ಬಂದಿ ಹೇಳುತ್ತಾರೆ. 4 ವರ್ಷದಿಂದ ಶುಲ್ಕ ಕಟ್ಟಿದರೂ ಒಂದು ಗಂಟೆ ಸಹ ನೀರು ಬರುತ್ತಿಲ್ಲ

–ಕಮಲಬಾಯಿ ಕಲಶೆಟ್ಟಿ, ಜಾಗೃತಿ ಕಾಲೊನಿ ನಿವಾಸಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು