ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿಯಂತ್ರಿಸುವಲ್ಲಿ ಕೇಂದ್ರ ಸಂಪೂರ್ಣ ವಿಫಲ: ಶರಣಪ್ರಕಾಶ ಪಾಟೀಲ ಆರೋಪ

₹ 20 ಲಕ್ಷ ಕೋಟಿ ಪ್ಯಾಕೇಜ್‌ ‘ಸಾಲಮೇಳ’ದ ಇನ್ನೊಂದು ರೂಪ
Last Updated 16 ಮೇ 2020, 15:44 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೋವಿಡ್‌–19 ಸೋಂಕು ನಿಯಂತ್ರಣ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಈ ವೈರಾಣು ದೇಶದಲ್ಲಿ ಪತ್ತೆಯಾಗಿ ಇಂದಿಗೆ 70 ದಿನವಾಗಿದೆ. ಆದರೂ ತಪಾಸಣೆಗೆ ಬೇಕಾದ ಕನಿಷ್ಠ ಸೌಕರ್ಯಗಳನ್ನೂ ಸರ್ಕಾರ ಮಾಡಿಕೊಂಡಿಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಆರೋಪಿಸಿದರು.

‘ವೈರಾಣು ದಾಳಿ ತಡೆಯಬೇಕೆಂದರೆ ಸಾಮೂಹಿಕವಾಗಿ ಎಲ್ಲರನ್ನೂ ತಪಾಸಣೆಗೆ ಒಳಪಡಿಸಬೇಕು ಎಂದು ನಾವು ಸಲಹೆ ನೀಡಿದ್ದೇವೆ. ಅದನ್ನು ಕೇಂದ್ರ ಪರಿಗಣಿಸಿಲ್ಲ. ವಲಸೆ ಬಂದವರು, ಕ್ವಾರಂಟೈನ್‌ ಆದವರನ್ನೂ ತಪಾಸಣೆಗೆ ಒಳಪಡಿಸುವಷ್ಟು ವೈದ್ಯಕೀಯ ಸಲಕರಣೆಗಳು ಇಲ್ಲ. ಹೀಗಾಗಿ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ರೋಗ ಬರುವವರೆಗೂ ಕಾದು ಕುಳಿತುಕೊಳ್ಳುವ ಕೇಂದ್ರದ ಧೋರಣೆ ಬೇಸರ ಮೂಡಿಸಿದೆ’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘₹ 20 ಲಕ್ಷ ಕೋಟಿಯ‍ಪ್ಯಾಕೇಜ್‌ನಿಂದ ದುಡಿಯುವ ವರ್ಗಕ್ಕೆ ಅಷ್ಟೇನೂ ಪ್ರಯೋಜನವಾಗಿಲ್ಲ. ಇದು ಕೇವಲ ‘ಸಾಲಮೇಳ’ದಂತೆ ಇದೆ. ಕೂಲಿ ಕಾರ್ಮಿಕರು ಹಾಗೂ ರೈತರ ಮೂಗಿಗೆ ತುಪ್ಪ ಸವರಿದ್ದಾರೆ. ಒಂದು ವೇಳೆ ರೈತರಿಗೆ ನೆರವಾಗಬೇಕು ಎಂಬ ಉದ್ದೇಶವಿದ್ದರೆ ಅವರ ಸಾಲ ಮನ್ನಾ ಮಾಡಬಹುದಿತ್ತು. ಇಷ್ಟು ದೊಡ್ಡ ಮೊತ್ತದ ಘೋಷಣೆ ಮಾಡಿ, ಪುಡಿಗಾಸಿನ ಅನುಕೂಲ ಮಾಡಿಕೊಟ್ಟರೆ ಏನು ಪ್ರಯೋಜನ?’‌ ಎಂದೂ ಅವರು ಪ್ರಶ್ನಿಸಿದರು.

‘ಮೊದಲ ಹಂತದಲ್ಲಿ ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಅನುಕೂಲ ಮಾಡಲು ₹ 6 ಲಕ್ಷ ಕೋಟಿ ಮೀಸಲಿಟ್ಟಿದ್ದಾಗಿ ಹೇಳಿದ್ದಾರೆ. ಆದರೆ, ಸಣ್ಣ ಕೈಗಾರಿಕೆಗಳ ಸಾಲದ ಬಡ್ಡಿ ಮನ್ನಾ ಅಥವಾ ಕಾಲಾವಕಾಶ ನೀಡಿಲ್ಲ. ಮರಳಿ ಸಾಲ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದರಿಂದ ಏನೂ ಪ್ರಯೋಜನವಿಲ್ಲ. ಮುಖ್ಯವಾಗಿ ಮಾರುಕಟ್ಟೆ ಕಲ್ಪಿಸುವ ನಿರ್ಧಾರ ಇಲ್ಲ’ ಎಂದೂ ದೂರಿದರು.

‘ಈ ಹಿಂದೆ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನ ಅಂಶಗಳನ್ನೇ ಮತ್ತೆ ₹ 20 ಲಕ್ಷ ಕೋಟಿಯ ಪ್ಯಾಕೇಜ್‌ನಲ್ಲೂ ಘೋಷಿಸಿದ್ದಾರೆ. ಈ ರೀತಿ ಸುಳ್ಳು ಘೋಷಣೆಗಳ ಮೂಲಕ ಜನರ ಮನಸ್ಸನ್ನು ಬೇರೆಡೆ ಸೆಳೆಯುವ ಕಲೆ ಪ್ರಧಾನಿಗೆ ಚೆನ್ನಾಗಿ ಗೊತ್ತಿದೆ’ ಎಂದು ಮೂದಲಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶ್ರಮಿಕ ವರ್ಗಗಳಿಗೆ ಆರ್ಥಿಕ ನೆರವು ನೀಡಿದ್ದು ಸ್ವಾಗತಾರ್ಹ. ಆಟೊ ಚಾಲಕರು, ಹೂವಾಡಿಗರು, ಕ್ಷೌರಿಕರಿಗೆ ನೀಡಿದಂಥ ಸಹಾಯವನ್ನು ಇತರ ಅಸಂಘಟಿತ ಕೂಲಿ ಕಾರ್ಮಿಕರಿಗೂ ನೀಡಬೇಕು. ಕೇಂದ್ರದಿಂದ ಬರುವ ಅತಾರ್ಕಿಕ ಸೂಚನೆಗಳನ್ನೇ ರಾಜ್ಯ ಸರ್ಕಾರವೂ ಪಾಲನೆ ಮಾಡುತ್ತಿದೆ. ಲಾಕ್‌ಡೌನ್‌ ಸಂದರ್ಭದಲ್ಲಿಯೂ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟಿದ್ದು ಸರಿಯಲ್ಲ. ಇದರಿಂದ ಅಪರಾಧ ಕೃತ್ಯಗಳ ಸಂಖ್ಯೆ ಹೆಚ್ಚಾಗುತ್ತಿದೆ’ ಎಂದರು.

ಎಪಿಎಂಸಿ ಉಳಿಸಿ: ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದು, ಬಹುರಾಷ್ಟ್ರೀಯ ಕಂಪನಿಗಳು ನೇರವಾಗಿ ರೈತರಿಂದ ಉತ್ಪನ್ನ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಇದರಿಂದ ರೈತರು ಹಾಗೂ ಎಪಿಎಂಸಿಗೆ ದೊಡ್ಡ ಪೆಟ್ಟು ಬೀಳುತ್ತದೆ. ಲೋಕಸಭೆಯಲ್ಲಿ ಚರ್ಚಿಸದೇ, ರೈತರ ಸಲಹೆ ಪಡೆಯದೇ ಇಂಥ ನಿರ್ಧಾರ ಪ್ರಕಟಿಸಿದ್ದು ಖಂಡನೀಯ’ ಎಂದರು.

‘ರಾಜಕೀಯ ದುರುದ್ದೇಶದಿಂದ ಎಫ್‌ಐಆರ್‌’
‘ಜಿಲ್ಲೆಯಲ್ಲಿ ಬಿಜೆಪಿ ಮಾಡುತ್ತಿರುವ ಕೀಳು ರಾಜಕಾರಣ ದಿನೇದಿನೇ ಹೊರಬೀಳುತ್ತಿದೆ. ಜನರ ಸಂಕಷ್ಟ ಕೇಳಲು ನಾನು ಸುಲೇಪೇಟೆಗೆ ಹೋಗಿದ್ದೆ. ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಲು ಜನ ಸೇರಿದರು. ಅದನ್ನೇ ನೆಪ ಮಾಡಿಕೊಂಡು, ತಹಶೀಲ್ದಾರ್‌ ಮೇಲೆ ಒತ್ತಡ ಹೇರಿ ನನ್ನ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ‌’ ಎಂದು ಡಾ.ಶರಣಪ್ರಕಾಶ ಪಾಟೀಲ ಸಮಜಾಯಿಷಿ ನೀಡಿದರು.

‘ಸಂಸದ ಡಾ.ಉಮೇಶ ಜಾಧವ ಹಾಗೂ ಕೆಲ ಬಿಜೆಪಿ ಮುಖಂಡರು ಈಚೆಗೆ ವಾಡಿ ಪಟ್ಟಣಕ್ಕೆ ಹೋಗಿ ಸೀಲ್‌ಡೌನ್‌ ತೆರವುಗೊಳಿಸಲು ಮುಂದಾದರು. ಆಗ ಜನರೇ ಬೈದು ಕಳಿಸಿದ್ದಾರೆ. ಸ್ವತಃ ಸಂಸದ, ಶಾಸಕರೇ ರೈಲು ನಿಲ್ದಾಣಕ್ಕೆ ಹೋಗಿ ವಲಸೆ ಜನರನ್ನು ಸ್ವಾಗತಿಸುತ್ತಾರೆ. ಇಂಥ ಅನುಮತಿಯನ್ನು ಯಾರು ಕೊಟ್ಟಿದ್ದಾರೆ?’‌ ಎಂದು ಪ್ರಶ್ನಿಸಿದ ಅವರು, ‘ಕೇವಲ ಅಧಿಕಾರಿಗಳಿಂದ ಕೆಲಸ ಪರಿಣಾಕಾರಿ ಆಗುವುದಿಲ್ಲ. ಜನಪ್ರತಿನಿಧಿಗಳು, ಮುಖಂಡರು ಕೂಡ ಸ್ಥಳಕ್ಕೆ ಹೋಗಬೇಕಾಗುತ್ತದೆ. ಅದು ನಮ್ಮ ಕರ್ತವ್ಯ’ ಎಂದರು.

‘ಬಿಜೆಪಿ ಮುಖಂಡರ ವಿರುದ್ಧ ನಾನು ಯಾವುದೇ ಕೇಸ್‌ ದಾಖಲಿಸುವುದಿಲ್ಲ. ಅಂಥ ಕೀಳು ರಾಜಕೀಯ ನನಗೆ ಬರುವುದಿಲ್ಲ. ಅವರು ಮಾಡಿದ್ದನ್ನು ಎದುರಿಸುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT