ಭಾನುವಾರ, ಜನವರಿ 23, 2022
27 °C
ಶಾಸಕರಿಗೂ ಅರಿವಿಲ್ಲ, ಅಧಿಕಾರಿಗಳ ಮೇಲೂ ನಿಯಂತ್ರಣವಿಲ್ಲ: ಡಾ.ಶರಣಪ್ರಕಾಶ ಪಾಟೀಲ ಕಿಡಿ

ಕಲಬುರಗಿ: ‘ಕೊರೊನಾ ನಿಯಂತ್ರಣಕ್ಕೆ ಸಿದ್ಧಗೊಳ್ಳದ ಜಿಲ್ಲಾಡಳಿತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ‘ಕೋವಿಡ್‌ ಎರಡನೇ ಅಲೆಗಿಂತ ಮೂರನೇ ಅಲೆ ಹೆಚ್ಚು ಪ‍್ರಭಾವಿಯಾಗಿರುತ್ತದೆ. ಓಮೈಕ್ರಾನ್‌ ನಿಯಂತ್ರಣಕ್ಕೆ ಈ ಹಿಂದಿಗಿಂತ ಐದು ಪಟ್ಟು ಜಾಗ್ರತೆ ವಹಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಇದೂವರೆಗೆ ಜಿಲ್ಲಾಡಳಿತ ಆಮೆಗತಿಯಲ್ಲಿ ಸಾಗಿದೆ. ಅಧಿಕಾರಿಗಳಿಗೆ ಹೇಳುವವರು, ಕೇಳುವವರೇ ಇಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಡಾ.ಶರಣಪ್ರಕಾಶ ಪಾಟೀಲ ಕಿಡಿ ಕಾರಿದರು.

‘ಡೆಲ್ಟಾ ವೈರಾಣುಗಿಂತ ಓಮೈಕ್ರಾನ್‌ ಐದು ಪಟ್ಟು ಹೆಚ್ಚು ವೇಗವಾಗಿ ಹರಡುತ್ತದೆ. ಅಕ್ಕಪಕ್ಕದ ರಾಜ್ಯಗಳಲ್ಲಿ ಸಾಕಷ್ಟು ಹಾಹಾಕಾರ ಆರಂಭವಾಗಿದ್ದರೂ ನಮ್ಮ ಸರ್ಕಾರ ಗಾಢ ನಿದ್ರೆಯಲ್ಲಿದೆ. ಅದರಲ್ಲೂ ಕಲಬುರಗಿಗೆ ಜಿಲ್ಲಾ ಉಸ್ತುವಾರಿ ಸಚಿವರೇ ಇಲ್ಲದ್ದರಿಂದ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲ. ಈವರೆಗೂ ಬೆರಳೆಣಿಕೆಯಷ್ಟು ಬೆಡ್‌, ವೈದ್ಯರು, ಆಕ್ಸಿಜನ್‌ ಪ್ಲ್ಯಾಂಟ್‌ಗಳ ಲೆಕ್ಕ ಹೇಳುತ್ತಿದ್ದಾರೆ’ ಎಂದು ಅವರು ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

12 ವರ್ಷ ವಯೋಮಾನದವರಿಗೂ ಲಸಿಕೆ: ‘12ರಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕೋವಿಡ್‌ ಲಸಿಕೆ ಹಾಕಬಹುದು ಎಂದು ತಜ್ಞರು ಅನುಮತಿ ನೀಡಿದ್ದಾರೆ. ಆದರೆ, ಸರ್ಕಾರದ ಬಳಿ ಲಸಿಕೆಯೇ ಇಲ್ಲ. ಇದರಿಂದಾಗಿ 15ರಿಂದ 18 ವರ್ಷದವರಿಗೆ ಮಾತ್ರ ಕೊಡುತ್ತಿದ್ದಾರೆ. ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. ಸರ್ಕಾರ ಅವರ ಜೀವದ ಜತೆಗೆ ಆಟವಾಡದೇ, ಮಾರ್ಗಸೂಚಿಯಲ್ಲಿ ಬರುವ ಎಲ್ಲ ವಯೋಮಾನದವರಿಗೂ ಚುಚ್ಚುಮದ್ದು ನೀಡಬೇಕು’ ಎಂದೂ ಆಗ್ರಹಿಸಿದರು.

‘45 ವಯೋಮಾನ ಮೇಲ್ಪಟ್ಟ ಎಲ್ಲರಿಗೂ ಶೀಘ್ರ ಬೂಸ್ಟರ್‌ ಡೋಸ್‌ ನೀಡಬೇಕು. ಜಿಮ್ಸ್‌ ಹಾಗೂ ಇಎಸ್‌ಐ ಆಸ್ಪತ್ರೆಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಲ್ಲೂ ಅಧಿಕಾರಿಗಳು ವಿಫಲವಾಗಿದ್ದಾರೆ. ತಕ್ಷಣಕ್ಕೆ ಹೆಚ್ಚಿನ ಬೆಡ್‌, ಆಕ್ಸಿಜನ್‌ ಸಿಲಿಂಡರ್‌, ಐಸಿಯು ಬೆಡ್‌ಗಳನ್ನು ಸಿದ್ಧಮಾಡಿಕೊಳ್ಳಬೇಕು. ಅಗತ್ಯ ವೈದ್ಯರು, ಸಿಬ್ಬಂದಿಯನ್ನೂ ನೇಮಕ ಮಾಡಿಕೊಳ್ಳಬೇಕು’ ಎಂದರು.

‘ಈ ಹಿಂದಿನ ಎರಡು ಅಲೆಗಳ ಅನುಭವ ಪಡೆದ ಮೇಲೂ ಜಿಲ್ಲಾಡಳಿತ ಪಾಠ ಕಲಿತಿಲ್ಲ. ನಾವು ಹೇಳುವ ಸಲಹೆಗಳನ್ನೂ ತೆಗೆದುಕೊಳ್ಳುವುದಿಲ್ಲ. ಬಿಜೆಪಿ ಶಾಸಕರಂತೂ ಜಿಲ್ಲೆಯ ಜನರಿಗೂ– ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಓಡಾಡುತ್ತಿದ್ದಾರೆ. ಮೂರನೇ ಅಲೆಯಲ್ಲಿ ಒಂದು ಜೀವ ಹೋದರೂ ಅದಕ್ಕೆ ಸರ್ಕಾರವೇ ಹೊಣೆ’ ಎಂದು ಹೇಳಿದರು.

‘ಜಿಮ್ಸ್‌ನಲ್ಲಿ ಅಳವಡಿಸಿದ ‘ಜಿನೋಮ್‌ ಸಿಕ್ವೆನ್ಸಿಂಗ್‌’ ಲ್ಯಾಬ್‌ ತಕ್ಷಣ ಕಾರ್ಯಾರಂಭ ಮಾಡಬೇಕು. ವಿವಿಧ ಲ್ಯಾಬ್‌ಗಳಲ್ಲಿ ದಿನಕ್ಕೆ 5000 ಮಾದರಿಗಳನ್ನು ತಪಾಸಣೆ ಮಾಡುವ ಸಾಮರ್ಥ್ಯವಿದ್ದರೂ ಕೇವಲ 2000ಕ್ಕೆ ಸೀಮಿತಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚೆತ್ತುಕೊಳ್ಳಬೇಕು. ತಾಲ್ಲೂಕು ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳನ್ನೂ ಸಿದ್ಧಗೊಳಿಸಬೇಕು. ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವವರಿಗೆ ದಿನಕ್ಕೆ ₹ 20 ಸಾವಿರ ಬಿಲ್‌ ಮಾಡುವ ಮೂಲಕ ಸುಲಿಗೆ ಮಾಡುತ್ತಾರೆ. ಸರ್ಕಾರ ಇದರ ಮೇಲೆ ನಿಯಂತ್ರಣ ಹೇರಬೇಕು’ ಎಂದೂ ಆಗ್ರಹಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ, ಯುವ ಘಟಕದ ಅಧ್ಯಕ್ಷ ಶಿವಾನಂದ ಹೊಣಗುಂಟಿ, ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಇದ್ದರು.

‘ಶಾಸಕರೇ ಭ್ರಷ್ಟಾಚಾರದ ಬ್ರ್ಯಾಂಡ್‌ ಅಂಬಾಸಿಡರ್‌’
‘ಗುತ್ತಿಗೆದಾರರ ಹೋರಾಟವು ಕಾಂಗ್ರೆಸ್‌ ಪ್ರಯೋಜಿತ ಎಂದು ಹೇಳುವ ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಅವರೇ ಈ ಭ್ರಷ್ಟಾಚಾರದ ಬ್ರ್ಯಾಂಡ್‌ ಅಂಬಾಸಿಡರ್‌. ಭ್ರಷ್ಟಾಚಾರದ ಆರೋಪ ಬಂದಾಗ; ನಡೆದಿದೆ ಅಥವಾ ನಡೆದಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಬೇಕು. ವಿರೋಧ ಪಕ್ಷದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ₹ 2000 ಕೋಟಿ ಬಿಲ್‌ ಏಕೆ ಪೆಂಡಿಂಗ್ ಇದೆ ಎನ್ನುವುದನ್ನು ಶಾಸಕರು ಸ್ಪಷ್ಟಪಡಿಸಬಲ್ಲರೇ’ ಎಂದು ಡಾ.ಶರಣಪ್ರಕಾಶ ಸವಾಲು ಹಾಕಿದರು.

‘ಡಿಸಿಸಿ ಬ್ಯಾಂಕ್‌ ಕಾಮಗಾರಿಗೆ ಇನ್ನೂ ಟೆಂಡರ್‌ ಕರೆದಿಲ್ಲ. ಮುಂಚಿತವಾಗಿಯೇ ₹ 25 ಕೋಟಿಯ ಕಟ್ಟಡ ಎಂದು ಇವರೇ ನಿರ್ಧರಿಸಿ, ಶಿಲಾನ್ಯಾಸ ಕೂಡ ಮಾಡಿಸಿದ್ದಾರೆ. ಇದನ್ನು ಹೇಗೆ ಲೆಕ್ಕ ಹಾಕಿದರು? ನಿಯಮಗಳ ಉಲ್ಲಂಘನೆ ಅಲ್ಲವೇ’ ಎಂದೂ ಪ್ರಶ್ನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.