ಗುರುವಾರ , ಜೂನ್ 30, 2022
25 °C

ನಿರುದ್ಯೋಗ ಭತ್ಯೆ ನೀಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಕೆಲಸ ಸಿಗದವರಿಗೆ ನಿರುದ್ಯೋಗ ಭತ್ಯೆ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ‌ಈಡೇರಿಕೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಲಾಕ್‌ಡೌನ್‌ ಕಾರಣ ರೈತರು, ಅಲೆಮಾರಿ, ಆದಿವಾಸಿ, ಬುಡಕಟ್ಟು, ಸಮುದಾಯಗಳು, ಕೂಲಿ ಕಾರ್ಮಿಕರು, ಕಟ್ಟಡ ಕೆಲಸಗಾರರು, ಬೀದಿ ಬದಿಯ ವ್ಯಾಪಾರಿಗಳು ಮುಂತಾದವರ ಬದುಕು ಬೀದಿಪಾಲಾಗಿದೆ. ಊಟ, ಉಪಾಹಾರಕ್ಕೂ ಹಲವರು ಪರದಾಡುವಂತಾಗಿದೆ. ಸರ್ಕಾರ ತಕ್ಷಣಕ್ಕೆ ನರವಿಗೆ ಬರಬೇಕು ಎಂದೂ ಆಗ್ರಹಿಸಿದರು.‌

ಒಂದೆಡೆ ಕೊರೊನಾದಿಂದ ದಿನವೂ ಸಾವು ಸಂಭವಿಸುತ್ತಿವೆ. ಅಗತ್ಯ ವೈದ್ಯಕೀಯ ಸೌಕರ್ಯಗಳಿಗೆ ಜನರು ಇನ್ನೂ ಪರದಾಡುತ್ತಿದ್ದಾರೆ. ಅದರಲ್ಲೂ ಪರಿಶಿಷ್ಟ ಸಮುದಾಯದ ಜನ ಹಸಿವಿನಿಂದ ಬಳಲುತ್ತಿದ್ದಾರೆ. ಎಲ್ಲರಿಗೂ ಆರ್ಥಿಕ ನೆರವು, ಆಹಾರ ಕಿಟ್‌ ನೀಡಬೇಕು ಎಂದೂ ಆಗ್ರಹಿಸಿದರು.

ಎಸ್‍ಸಿಪಿ ಟಿಎಸ್‍ಪಿ ಹಣದ ದುರ್ಬಳಕೆ ಬಗ್ಗೆ ತನಿಖೆ ನಡೆಸಬೇಕು. ಕೊರೊನಾ ಮತ್ತು ಬ್ಲ್ಯಾಕ್‌ ಫಂಗಸ್‍ಗೆ ಒಳಗಾಗಿರುವ ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ, ಔಷಧೋಪಚಾರ, ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಕೋವಿಡ್‌ ವಾರಿಯರ್ಸ್‍ಗಳಾಗಿ ಹಗಲಿರುಳು ದುಡಿಯುತ್ತಿರುವ ವೈದ್ಯರು, ನರ್ಸ್‍ಗಳು, ಆಶಾಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಡಿ ದರ್ಜೆ ನೌಕರರ ಸಂಬಳವನ್ನು ಹೆಚ್ಚಿಸಬೇಕು ಎಂದೂ ಮನವಿಯಲ್ಲಿ ತಿಳಿಸಿದ್ದಾರೆ.

‍ಪರಿಶಿಷ್ಟ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಬಡತನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ ನೀಡಬೇಕು. ಬಾಕಿ ಇರುವ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ತಕ್ಷಣ ಮಂಜೂರು ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಪಡಿತರ ಚೀಟಿಯ ಮೂಲಕ ಗ್ರಾಮಿಣ ಪ್ರದೇಶದ ಬಡವರಿಗೆ ಕೊಡುವ ಆಹಾರ ಪದಾರ್ಥ ಹಾಗೂ ದವಸ– ಧಾನ್ಯಗಳನ್ನು ಪ್ರಮಾಣವನ್ನು ಹೆಚ್ಚಿಸಬೇಕು ಎಂದೂ ಆಗ್ರಹಿಸಿದ್ದಾರೆ.

ಕೊರೊನಾ ಮೂರನೇ ಅಲೆಯನ್ನು ಎದುರಿಸಲುವ ಸಲುವಾಗಿ ಮುಂಚಿತವಾಗಿಯೇ ನಗರ, ಪಟ್ಟಣಗಳಲ್ಲಿರುವ ಲಾಡ್ಜ್‌ಗಳು, ಭವನಗಳು ಮತ್ತು ಕಲ್ಯಾಣ ಮಂಟಪ ಕಟ್ಟಡಗಳನ್ನು ವಶಪಡಿಸಿಕೊಂಡು ಅವುಗಳನ್ನು ಸುಸಜ್ಜಿತವಾದ ಕಚಿತ್ಸಾ ಸೆಂಟರ್‌ಗಳನ್ನಾಗಿ ಪರಿವರ್ತಿಬೇಕು ಎಂದು ಆಗ್ರಹಿಸಿದರು.‌

ಮುಖ್ಯಮಂತ್ರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಲ್ಲಿಸಲಾಯಿತು. ಮುಖಂಡರಾದ ಅರ್ಜುನ್ ಭದ್ರೆ, ಅರ್ಜುನ್ ಗೊಬ್ಬೂರ, ಮರಿಯಪ್ಪ ಹಳ್ಳಿ, ಭೀಮಶ್ಯಾ ಖನ್ನಾ, ಮರೆಪ್ಪ ಮೇತ್ರೆ, ಡಾ.ಜಯಕುಮಾಋ ನೂಲಕರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು