ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿರಬೇಕು ಎಂದರೆ ಮತ ಹಾಕಿ: ಎಚ್‌ಡಿಕೆ ಭಾವುಕ ಮನವಿ

Last Updated 10 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಇನ್ನೂ ಹೆಚ್ಚು ದಿನಗಳು ಬದುಕಿರಬೇಕು ಎಂದರೆ ನನಗೆ ಮತ ಹಾಕಿ. ಇಲ್ಲದಿದ್ದರೆ ಹೆಚ್ಚು ದಿನ ಬದುಕುವುದಿಲ್ಲ’ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದ್ದಾರೆ.

ರಾಮನಗರದಲ್ಲಿ ಗುರುವಾರ ನಡೆಸಬೇಕಿದ್ದ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿ ನಗರದಲ್ಲಿ ಒಂದೆರಡು ಸಭೆಗಳಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ನನ್ನ ಜೀವನ ನಿಮ್ಮ ಕೈಯಲ್ಲಿದೆ’ ಎಂದೂ ಹೇಳಿದರು.

ಲಗ್ಗೆರೆ ವೃತ್ತದಲ್ಲಿ ರೋಡ್‌ ಷೋ ನಡೆಸಿ, ‘ನಾನಿನ್ನು ಹೊರಡುತ್ತೇನೆ. ಅಭ್ಯರ್ಥಿಗಳಿಗೆ ಚಂದಾ ಎತ್ತಿ ಕೊಡುವ ಸ್ಥಿತಿ ಇದೆ. ಕೆಲವು ಅಭ್ಯರ್ಥಿಗಳು ಹಣ ಬೇಕು ಎಂದು ದುಂಬಾಲು ಬಿದ್ದಿದ್ದಾರೆ. ನಾನೆಲ್ಲಿ ಹೋಗಿ ಸಾಯಲಿ’ ಎಂದು ಅವರು ಬೇಸರದಿಂದ ಹೇಳಿದರು.

ರಾಮನಗರದ ಪ್ರಚಾರ ಕೈಬಿಟ್ಟ ಕಾರಣ ಮತದಾರರಿಗೆ ಟ್ವೀಟ್‌ ಮೂಲಕ ಸಂದೇಶ ನೀಡಿದ್ದು, ‘ಕಳೆದೆರಡು ಚುನಾವಣೆಗಳಂತೆ ಈ ಸಲವೂ ರಾಮನಗರದ ಜನರ ಬಳಿಗೆ ಹೋಗದೇ ಈ ಸುದೀರ್ಘ ಪ್ರಚಾರ ಕಾರ್ಯವನ್ನು ಅಂತ್ಯಗೊಳಿಸಿದ್ದೇನೆ. ಕ್ಷೇತ್ರಕ್ಕೆ ಬಾರದಿದ್ದರೂ ನನ್ನನ್ನು ಗೆಲ್ಲಿಸುತ್ತಿರುವ ನನ್ನ ಜನರ ಹೃದಯ ವೈಶಾಲ್ಯ ಮತ್ತು ಸ್ವತಃ ತಾವೇ ಕುಮಾರಣ್ಣ ಎಂದು ಭಾವಿಸಿ ನನ್ನ ಗೆಲುವಿಗೆ ಶ್ರಮಿಸುತ್ತಿರುವ ಕಾರ್ಯಕರ್ತರನ್ನು ಕಂಡು ಹೃದಯ ತುಂಬಿ ಬಂದಿದೆ’ ಎಂದರು.

ಕಾಂಗ್ರೆಸ್‌ಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಕುಮಾರಸ್ವಾಮಿ

ರಾಮನಗರ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗಿಂತ ಕನಿಷ್ಠ ಮೂರ್ನಾಲ್ಕು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಡದಿ ಪಟ್ಟಣದಲ್ಲಿ ಗುರುವಾರ ಮಾಗಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಮಂಜುನಾಥ್‌ ಪರ ಮತ ಯಾಚನೆ ಮಾಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ವಿರುದ್ಧವಾಗಿ ಶಕ್ತಿಮೀರಿ ಪ್ರಚಾರ ನಡೆಸಿದ್ದೇನೆ. ಅನಾರೋಗ್ಯವನ್ನೂ ಲೆಕ್ಕಿಸದೆ ಪಕ್ಷ ಸಂಘಟನೆ ಮಾಡಿದ್ದೇನೆ. ಈ ಬಾರಿ ಜನ ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಲಿದ್ದಾರೆ’ ಎಂದು ಹೇಳಿದರು.

‘ಜೆಡಿಎಸ್ ಕೇವಲ 25–30 ಸ್ಥಾನ ಗೆಲ್ಲುತ್ತದೆ. ಅವರನ್ನೂ ಕೊಂಡುಕೊಂಡು ಕಾಂಗ್ರೆಸ್ಸಿಗೆ ಕರೆ ತರುತ್ತೇವೆ ಎಂದು ಕೆಲವರು ಉಡಾಫೆಯ ಮಾತುಗಳನ್ನು ಆಡಿದ್ದಾರೆ. ಆದರೆ ಜೆಡಿಎಸ್ ಬಾದಾಮಿ ಸಹಿತ ಉತ್ತರ ಕರ್ನಾಟಕ ಭಾಗದಲ್ಲಿಯೇ ಕನಿಷ್ಠ 35 ಸ್ಥಾನಗಳನ್ನು ಗೆಲ್ಲಲಿದೆ. ನಾನು ರಾಜ್ಯದ ಮುಖ್ಯಮಂತ್ರಿ ಆಗುವುದೂ ಅಷ್ಟೇ ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT