ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಾಹ್ಮಣರಿಗೆ ಮೀಸಲಾತಿ ಕಲ್ಪಿಸಲು ಪ್ರಯತ್ನ

ವಿಪ್ರ ಪ್ರತಿಭೋತ್ಸವದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭರವಸೆ
Last Updated 31 ಅಕ್ಟೋಬರ್ 2022, 6:26 IST
ಅಕ್ಷರ ಗಾತ್ರ

ಕಲಬುರಗಿ: ‘ಮೇಲ್ವರ್ಗದ ಸಮುದಾಯಗಳಿಗೆ ನಿಗದಿಪಡಿಸಿದ ಶೇ 10ರಷ್ಟು ಮೀಸಲಾತಿ ಪಟ್ಟಿಯಲ್ಲಿ ಬ್ರಾಹ್ಮಣ ಸಮಾಜ ಸೇರಿಸಲು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿದ್ದು, ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರ ಜಾರಿಗೆ ತರಲು ಪ್ರಯತ್ನಿಸಲಾಗುವುದು’ ಎಂದು ಕೇಂದ್ರ ಸಂಸದೀಯ ವ್ಯವಹಾರ ಹಾಗೂ ಕಲ್ಲಿದ್ದಲು ಮತ್ತುಗಣಿ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ನಗರದ ಡಾ. ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಭಾನುವಾರ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಹಮ್ಮಿ
ಕೊಂಡಿದ್ದ ವಿಪ್ರ ಪ್ರತಿಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಬಹುಜನರನ್ನು ಪ್ರೀತಿಸುವ ಸಮಾಜ. ರಾಮಾಯಣ ಬರೆದ ವಾಲ್ಮೀಕಿ ಮತ್ತು ರಾಮ ಬ್ರಾಹ್ಮಣರಲ್ಲ. ರಾವಣ ಬ್ರಾಹ್ಮಣನಾಗಿದ್ದರೂ ಶ್ರೇಷ್ಠ ಗುಣಗಳಿಂದಾಗಿ ನಾವು ವಾಲ್ಮೀಕಿ ಮತ್ತು ರಾಮನನ್ನು ಪೂಜಿಸುತ್ತೇವೆ’ ಎಂದರು.

‘ಭಾರತ ಬದಲಾಗುತ್ತಿದೆ. ಆ ವೇಗಕ್ಕೆ ತಕ್ಕಂತೆ ನಾವೂ ಬದಲಾಗಬೇಕಿದೆ. ಮುಂಬರುವ ದಿನಗಳಲ್ಲಿ ಸರ್ಕಾರಿ ಉದ್ಯೋಗಗಳು ಕಡಿಮೆ ಆಗಲಿವೆ. ಸಮಾಜದ ಜನ ನೌಕರಿ ಹಿಂದೆ ಬೆನ್ನು ಹತ್ತದೆ ಸ್ವಯಂ ಉದ್ಯೋಗಗಳನ್ನು ಮಾಡಬೇಕು. ವಿಪ್ರರು ಉದ್ಯಮಗಳನ್ನು ಸ್ಥಾಪಿಸುವಲ್ಲಿ ಅಭಿವೃದ್ಧಿ ಮಂಡಳಿಯು ಪ್ರೋತ್ಸಾಹ ನೀಡಲಿ. ಅದಕ್ಕೆ ಸರ್ಕಾರ ನೆರವು ನೀಡುತ್ತದೆ’ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌.ಸಚ್ಚಿದಾನಂದ ಮೂರ್ತಿ ಮಾತನಾಡಿ, ‘ರಾಜ್ಯದಲ್ಲಿ 21 ಕ್ಷೇತ್ರಗಳಲ್ಲಿ ಬ್ರಾಹ್ಮಣರು ನಿರ್ಣಾ
ಯಕ ಮತದಾರರಿದ್ದೇವೆ. ಸಿದ್ದರಾಮಯ್ಯ ಅವರು ಸಿಎಂ ಇದ್ದಾಗ ಮಾಡಿದ ಜನಗಣತಿಯಲ್ಲಿ ನಮ್ಮ ಸಮುದಾಯದವರು ಬ್ರಾಹ್ಮಣ ಎಂದು ಬರೆಸದೆ 44 ಉಪಜಾತಿಗಳ ಹೆಸರು ಹೇಳಿದ್ದಾರೆ. ಹೀಗಾಗಿ ಜನಸಂಖ್ಯೆ ತೀರಾ ಕಡಿಮೆ ತೋರಿಸಲಾಗಿದೆ. ವಿಪ್ರ ಜನರು ಒಂದಾಗಿ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸೌಲಭ್ಯಗಳಿಂದ ವಂಚಿತ ಆಗಬೇಕಾಗುತ್ತದೆ’ ಎಂದು ಹೇಳಿದರು.

ಜಮಖಂಡಿಯ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು.ಬೆಂಗಳೂರಿನ ಜಯತೀರ್ಥ ವಿದ್ಯಾಪೀಠ ಉತ್ತರಾಧಿಮಠದ ಪ್ರಾಂಶುಪಾಲ ಪಂ. ಡಾ. ಸತ್ಯಧ್ಯಾನಾಚಾರ ಕಟ್ಟಿ ಸಾನ್ನಿಧ್ಯ ವಹಿಸಿದ್ದರು. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಉದ್ಯಮಿ ಕೃಷ್ಣಾಜಿ ಕುಲಕರ್ಣಿ, ವಿಶ್ವ ವಿಪ್ರ ಪರಿಷತ್‌ ಅಧ್ಯಕ್ಷ ರಘುನಾಥ ಎಸ್‌., ವಿಧಾನ ಪರಿಷತ್‌ ಸದಸ್ಯ ಶಶೀಲ್‌ ಜಿ.ನಮೋಶಿ, ವಿದ್ಯಾಸಾಗರ ಕುಲಕರ್ಣಿ, ದಯಾಘನ್‌ ಧಾರವಾಡಕರ್‌, ಸೂರ್ಯಕಾಂತ ನಾಗಮಾರಪಳ್ಳಿ, ಭಾರ್ಗವ್‌ ಕಟ್ಟಿ, ಪ್ರಲ್ಹಾದ್‌ ಪೂಜಾರಿ, ಅರವಿಂದ ನವಲಿ, ದತ್ತಾತ್ರೇಯ ಪೂಜಾರಿ, ಇದ್ದರು. ಜಗದೀಶ ಹುನಗುಂದ ಸ್ವಾಗತಿಸಿದರು. ಮಧುಸೂಧನ್‌ ಮತ್ತು ಜ್ಯೋತ್ಸ್ನಾ ಆರ್‌. ಹೇರೂರ್‌ ನಿರೂಪಿಸಿದರು.

ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಲಬುರಗಿ, ಬೀದರ್‌, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶ್ವಾಮಿತ್ರ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

2021–22ನೇ ಸಾಲಿನಲ್ಲಿ ಪ್ರಥಮ ಸ್ಥಾನ ಗಳಿಸಿದ ಕಲಬುರಗಿಯ ಅಕ್ಷತಾ ಮತ್ತು ಆದಿತ್ಯ ಬಬಲಾದ, ಬೀದರ್‌ನ ವೇದಿಕಾ, ಬಾಗಲಕೋಟೆಯ ಪದ್ಮಶ್ರೀ, ವಿಜಯಪುರದ ವಿಕಾಸ ಕುಲಕರ್ಣಿ ಮತ್ತು 2022–23ನೇ ಸಾಲಿನಲ್ಲಿ ವಿಜಯಪುರದ ಸನ್ನಿಧಿ ಮತ್ತು ಅನಘ ವಿ.ಜೋಶಿ, ಬಾಗಲಕೋಟೆಯ ಸುಧನ್ವ, ಬೀದರ್‌ನ ಆಕಾಶ, ಕಲಬುರಗಿಯ ಸ್ಮೀತಾ ಮತ್ತು ಪ್ರಜ್ವಲ್‌ ಅವರಿಗೆ ತಲಾ ₹15,000 ನಗದು ಪುರಸ್ಕಾರ ನೀಡಲಾಯಿತು.ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ₹10,000 ಮತ್ತು ತೃತೀಯ ₹5,000 ವಿತರಿಸಲಾಯಿತು.

ವಿಪ್ರ ಶ್ರೀ ಪ್ರಶಸ್ತಿ ಪ್ರದಾನ: ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸದಸ್ಯ ರಾಘವೇಂದ್ರ ಔರಾದಕರ್‌, ವೈದ್ಯ ಡಾ. ಮಲ್ಲಾರರಾವ ಮಲ್ಲೆ, ಸಂಗೀತಗಾರರಾದ ಸರೋಜಾ ಅನಗರಕರ್‌, ವಿಜ್ಞಾನಿ ರಾಘವೇಂದ್ರ ಕುಲಕರ್ಣಿ, ಪ್ರಗತಿಪರ ರೈತ ಅಶೋಕ ಕುಲಕರ್ಣಿ ನಾಡಗೌಡ, ಸಾಹಿತಿ ಎಂ.ಜಿ.ದೇಶಪಾಂಡೆ, ಶಿಕ್ಷಣ ತಜ್ಞ ಡಾ. ಪ್ರಲ್ಹಾದ ಬುರ್ಲಿ, ಡಾ. ಬಿಂದುಮಾಧವ ಹೆಂಡಿಗೇರಿ, ಪತ್ರಕರ್ತ ರಾಮ ಮನಗೂಳಿ, ವೈದ್ಯಕೀಯ ಕ್ಷೇತ್ರದ ಡಾ. ವಾದಿರಾಜ ದೇಶಪಾಂಡೆ ಹಾಗೂ ಪ್ರಫುಲತಾ ಕುಲಕರ್ಣಿ (ಮರಣೋತ್ತರ) ಅವರಿಗೆ ವಿಪ್ರ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT