ಸೋಮವಾರ, ಜನವರಿ 17, 2022
18 °C
ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ, ಮಧ್ಯಾಹ್ನ ಉಪಹಾರ ಯೋಜನೆ

ಶಾಲಾ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಮತ್ತು ರಾಜ್ಯ ಸರ್ಕಾರದ ಮಧ್ಯಾಹ್ನ ಉಪಹಾರ ಯೋಜನೆಯಡಿ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಮೊಟ್ಟೆ ಅಥವಾ ಬಾಳೆ ಹಣ್ಣು ವಿತರಿಸುವ ಯೋಜನೆಗೆ ಬುಧವಾರ ನಗರದ ಎಂ.ಬಿ. ನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಜಿಲ್ಲಾ ಪಂಚಾಯಿತಿ (ಅಕ್ಷರ ದಾಸೋಹ ಯೋಜನೆ) ಮತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಡಿಡಿಪಿಐ ಅಶೋಕ ಭಜಂತ್ರಿ, ‘ಉತ್ತರ ಕರ್ನಾಟಕ ಭಾಗದ ಬಹುತೇಕ ಮಕ್ಕಳಲ್ಲಿ ಅಪೌಷ್ಠಿಕತೆ ಇರುವುದು ಅಧ್ಯಯನದಿಂದ ದೃಢಪಟ್ಟಿರುವ ಕಾರಣ ರಾಜ್ಯ ಸರ್ಕಾರವು ಪ್ರಾಯೋಗಿಕವಾಗಿ ಕಲ್ಯಾಣ ಕರ್ನಾಟಕ ಭಾಗದ 6 ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರ ಜಿಲ್ಲೆ ಸೇರಿದಂತೆ 7 ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿವರೆಗಿನ ಮಕ್ಕಳಲ್ಲಿ ಅಪೌಷ್ಠಿಕತೆ ನಿವಾರಣೆಗೋಸ್ಕರ ಮಧ್ಯಾಹ್ನದ ಬಿಸಿಯೂಟದೊಂದಿಗೆ ಒಂದು ಮೊಟ್ಟೆ ಅಥವಾ ಒಂದು ಬಾಳೆ ಹಣ್ಣು ವಿತರಿಸುವ ಮಹತ್ವಕಾಂಕ್ಷೆಯ ಯೋಜನೆ ಜಾರಿಗೊಳಿಸಿದೆ. ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಇದು ತುಂಬಾ ನೆರವಾಗಲಿದೆ ಎಂದರು.

ವಾರದಲ್ಲಿ ಮೂರು ಮಧ್ಯಾಹ್ನದ ಊಟದೊಂದಿಗೆ ಒಂದು ಮೊಟ್ಟೆಯನ್ನು ನೀಡಲಾಗುತ್ತಿದೆ. ಮೊಟ್ಟೆ ಸೇವಿಸದವರಿಗೆ ಒಂದು ಬಾಳೆ ಹಣ್ಣು ನೀಡಲಾಗುವುದು. ಜಿಲ್ಲೆಯ 2.85 ಲಕ್ಷ ಮಕ್ಕಳು ಇದರ ಫಲಾನುಭವಿಗಳಾಗಿದ್ದಾರೆ. ಈ ಯೋಜನೆ 2022ರ ಮಾರ್ಚ್‌ವರೆಗೆ ಜಾರಿಯಲ್ಲಿರಲಿದ್ದು, ತದನಂತರ ಇದರ ಸಾಧಕ–ಬಾಧಕ ನೋಡಿ ಸರ್ಕಾರ ಮುಂದಿನ ಯೋಜನೆ ರೂಪಿಸಲಿದೆ ಎಂದರು.

ಮೊಟ್ಟೆ ಸವಿದ ಮಕ್ಕಳು: ಮಧ್ಯಾಹ್ನದ ಬಿಸಿಯೂಟದ ಜೊತೆ ನೀಡಲಾದ ಮೊಟ್ಟೆ ಮತ್ತು ಬಾಳೆ ಹಣ್ಣನ್ನು ಮಕ್ಕಳು ಖುಷಿಯಿಂದ ಸೇವಿಸಿದರು. ಮೊಟ್ಟೆ ಸೇವನೆಯಿಂದ ದೇಹದಲ್ಲಿ ಪೌಷ್ಟಿಕಾಂಶ ಹೆಚ್ಚಲಿದೆ ಎಂದು ಶಾಲಾ ಮಕ್ಕಳು ಸಂತಸ ವ್ಯಕ್ತಪಡಿಸಿದರು.

ಕಲಬುರಗಿ ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಜಿಲ್ಲಾ ಪಂಚಾಯತಿಯ ಶಿಕ್ಷಣಾಧಿಕಾರಿ (ಮಧ್ಯಾಹ್ನ ಬಿಸಿಯೂಟ ಯೋಜನೆ) ರಾಮಲಿಂಗಪ್ಪ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ, ಶಿಕ್ಷಕರ ಸಂಘದ ಅಧ್ಯಕ್ಷ ಶೇಖ್ ಮುಜೀಬ್, ಶಿಕ್ಷಣ ಸಂಯೋಜಕ ಸಾಯಬಣ್ಣಾ, ಶಾಲಾ ಮುಖ್ಯಗುರು ಮಡಿವಾಳಮ್ಮ ಸೇರಿದಂತೆ ಅನೇಕ ಶಿಕ್ಷಕರು, ಸಿಆರ್‌ಪಿ, ಬಿಆರ್‌ಪಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದರು.

ಕರುಣೇಶ್ವರ ನಗರ: ಇಲ್ಲಿನ ಕರುಣೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಜ್ಯೋತಿ, ಶಾಲೆಯ ಮುಖ್ಯ ಶಿಕ್ಷಕಿ ಮಾಲಾ ಎಸ್. ಕಠಾರೆ ಹಾಗೂ ಶಿಕ್ಷಕಿ ಪರಿಮಳ, ಇಂದುಮತಿ ಸಮ್ಮುಖದಲ್ಲಿ ಬಿಸಿಊಟದ ಜೊತೆ ಮೊಟ್ಟೆ ನೀಡಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು