ಗುರುವಾರ , ಸೆಪ್ಟೆಂಬರ್ 23, 2021
22 °C
ಕಳೆಗುಂದಿದ ಹಬ್ಬದ ಸಂಭ್ರಮ, ಜಿಲ್ಲೆಯ ಎಲ್ಲ ಈದ್ಗಾಗಳಲ್ಲೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ

ಕಲಬುರ್ಗಿ | ಮನೆ ಒಳಗೇ ‘ಈದ್’‌ ಸಂಭ್ರಮ

ಸಂತೋಷ ಈ. ಚಿನಗುಡಿ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಸೂಫಿ ಸಂತರ ನಾಡು, ಬಹಮನಿ ಸುಲ್ತಾನರ ಬೀಡು ಕಲಬುರ್ಗಿಯಲ್ಲೀಗ ರಂಜಾನ್ ವಿಶೇಷ. ಆದರೆ, ಈ ಬಾರಿ ಕೊರೊನಾ ವೈರಾಣು ಹಬ್ಬದ ಸಂಭ್ರಮವನ್ನು ಕಿತ್ತುಕೊಂಡಿದೆ. ಉಪವಾಸ ಇದ್ದು ಆರೋಗ್ಯ ವೃದ್ಧಿಸಿಕೊಳ್ಳುವುದು ರಂಜಾನ್‌ ಮಾಸದ ಪ್ರಧಾನ ಉದ್ದೇಶ. ಹೀಗಾಗಿ, ಆರೋಗ್ಯಕ್ಕೆ ಪ್ರಾಮುಖ್ಯತೆ ಕೊಟ್ಟ ಜಿಲ್ಲೆಯ ಈದ್ಗಾ ಸಮಿತಿಗಳು ಈ ಬಾರಿ ಸಾಮೂಹಿಕ ಪ್ರಾರ್ಥನೆ ಕೈಬಿಟ್ಟು, ಮನೆಯಲ್ಲೇ ಭಕ್ತಿ ಸಮರ್ಪಿಸಲು ನಿರ್ಧರಿಸಿವೆ.

‌ಪ್ರತಿ ವರ್ಷ ಈ ವೇಳೆಗಾಗಲೇ ಹಬ್ಬಕ್ಕೆ ಭರ್ಜರಿ ತಯಾರಿ ನಡೆಯುತ್ತಿತ್ತು. ಎಲ್ಲ ಮಸೀದಿಗಳು, ದರ್ಗಾ, ಈದ್ಗಾ ಮೈದಾನಗಳು ಸಂಭ್ರಮಕ್ಕೆ ಸಾಕ್ಷಿಯಾಗಿ ನಿಲ್ಲುತ್ತಿದ್ದವು. ಮಾರುಕಟ್ಟೆಗಳಲ್ಲಂತೂ ಬಟ್ಟೆ, ಹಣ್ಣು, ಖರ್ಜೂರ, ಸಿಹಿ ಪದಾರ್ಥಗಳ ಖರೀದಿ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು.

ಪ್ರಸಕ್ತ ವರ್ಷ ಲಾಕ್‌ಡೌನ್‌ ಹಾಗೂ ನಿಷೇಧಾಜ್ಞೆಯ ಕಾರಣ, ಯಾವುದೇ ತರಹದ ವಹಿವಾಟಿಗೆ ಅವಕಾಶ ಇಲ್ಲ. ಕೆಲ ವ್ಯಾಪಾರಿಗಳು ಬಟ್ಟೆ ಗಂಟು ಕಟ್ಟಿಕೊಂಡು ಮನೆಮನೆಗೆ ಹೋಗಿ ಮಾರಿದ್ದು ಬಿಟ್ಟರೆ ಹೆಚ್ಚಿನ ಜನ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಿಲ್ಲ.

‘ಬಟ್ಟೆ ಖರೀದಿ ಹಾಗೂ ಇಫ್ತಾರ್‌ಗೆ ಸುರಿಯುತ್ತಿದ್ದ ಹಣವನ್ನು ಈ ಬಾರಿ ಕೊರೊನಾ ಪರಿಹಾರ ನಿಧಿಗೆ ಕೊಡಲು ಬಹುಪಾಲು ಮಸೀದಿಗಳ ಮುಖಂಡರು ನಿರ್ಧರಿಸಿದ್ದಾರೆ. ಈಗಾಗಲೇ ಅಖಿಲ ಭಾರತ ಮಿಲ್ಲಿ ಕೌನ್ಸಿಲ್‌, ಜಮಾತ್‌ ಹಾಗೂ ಮದರಸಾಗಳೂ ದಾನಕ್ಕೆ ಆದ್ಯತೆ ನೀಡಲು ಒಪ್ಪಿಕೊಂಡಿವೆ‌’ ಎನ್ನುತ್ತಾರೆ ಧಾರ್ಮಿಕ ಮುಖಂಡರು.

ಮನೆಯಲ್ಲೇ ಬಗೆಬಗೆಯ ಖಾದ್ಯ: ಹಬ್ಬದಲ್ಲಿ ಜನಜಂಗುಳಿಗೆ ಸಾಕ್ಷಿ ಆಗುತ್ತಿದ್ದ ಮುಸ್ಲಿಂ ಚೌಕ್‌, ದರ್ಗಾ ರಸ್ತೆ, ಎಂಎಸ್‌ಕೆ ಮಿಲ್‌, ಸೂಪರ್‌ ಮಾರ್ಕೆಟ್‌, ಮೋಮಿನ್‌ಪುರದ ಖೂನಿ ಹವಾಲಾ, ಸಂತ್ರಾಸವಾಡಿ ಸೇರಿದಂತೆ ಎಲ್ಲೆಡೆ ಹಬ್ಬದ ಕಳೆ ಇಲ್ಲ. ಇಷ್ಟು ವರ್ಷ ಈ ಮಾರುಕಟ್ಟೆಗಳಲ್ಲಿ ಸಿಗುತ್ತಿದ್ದ ಬಗೆಬಗೆಯ ತಿನಿಸುಗಳಿಗೆ ಆಸ್ಪದವೇ ಇಲ್ಲ. ಆದರೆ, ಹಬ್ಬದ ಸಂಭ್ರಮಕ್ಕೆ ಕುಂದು ಬಾರದಂತೆ ಈಗ ಮನೆಯಲ್ಲೇ ತಿಂಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಗೃಹಿಣಿಯರು.

‘ಸಿಹಿ ತಿಂಡಿಗಳಾದ ಹೈದರಾಬಾದ್‌ ಹಲೀಮ್‌, ಶೀರಕುರ್ಮಾ, ಖದ್ದು ಕೀರ್‌, ಜಿಲೇಬಿ, ಹಾರೀಸ್‌, ಖಾರದ ತಿನಿಸುಗಳಾದ ಪಾಲಕ್‌ ಪಕೋಡ, ಈರುಳ್ಳಿ ಪಕೋಡ, ಭಜ್ಜಿ, ಶಂಕರಪಾಳಿ, ನಮಕ್‌ ಪಾಳಿ, ವೆಜ್‌ ಸಮೋಸಾಗಳನ್ನು ಮನೆಯಲ್ಲೇ ತಯಾರಿ ಮಾಡುತ್ತಿದ್ದೇವೆ’ ಎನ್ನುತ್ತಾರೆ ಶಬಾನಾ ಮತ್ತು ಅಪ್ಸರಾ ಬೇಗಂ.

ಮಾಂಸಾಹಾರಕ್ಕೂ ಕೊರತೆ: ಚಿಕನ್‌ ಮತ್ತು ಮಟನ್‌ ಬಿರಿಯಾನಿ, ಚಿಕನ್ ‌ಕೀಮಾ, ಚಿಕನ್‌ ಸಮೋಸಾ, ಲೆಗ್‌ಪೀಸ್‌, ಚಿಕನ್‌ಫ್ರೈ, ತಂದೂರಿ ಮತ್ತು ರುಮಾಲಿ ರೋಟಿ ಈ ಹಬ್ಬದ ವಿಶೇಷ ಭೋಜನಗಳು. ಆದರೆ, ಈ ಬಾರಿ ಮಾಂಸ ವ್ಯಾಪಾರಕ್ಕೆ ಅವಕಾಶವಿಲ್ಲದ ಕಾರಣ ಬಹುಪಾಲು ಜನ ಸಸ್ಯಾಹಾರಿಗಳಾಗೇ ಹಬ್ಬ ಆಚರಿಸಬೇಕಿದೆ.

ಅಲ್ಲಲ್ಲಿ ಕೆಲವರು ಕುರಿ– ಕೋಳಿ ಮಾಂಸ (ಚೋಟಾ)ವನ್ನು ಮನೆಮನೆಗೆ ಹೋಗಿ ಮಾರುತ್ತಿದ್ದಾರೆ. ದನದ (ಬಡಾ) ಮಾಂಸ ಮಾತ್ರ ಎಲ್ಲೂ ಸಿಗುತ್ತಿಲ್ಲ. ಸಿಗುವ ಮಾಂಸಕ್ಕೂ ದು‍ಪ್ಪಟ್ಟು ದರ ಬಂದಿದೆ. ಹೀಗಾಗಿ, ಈ ಬಾರಿಯ ಹಬ್ಬ ಬಡವರ ಪಾಲಿಗೆ ಅಷ್ಟಕ್ಕಷ್ಟೇ ಎನ್ನುವಂತಾಗಿದೆ.

ಹಬ್ಬದ ಪ್ರಯುಕ್ತ ಕೆಲವು ಮಸೀದಿ, ದರ್ಗಾಗಳಿಗೆ ಮುಖಂಡರು ವಿದ್ಯುತ್‌ ಅಲಂಕಾರ ಮಾಡಿಸಿದ್ದಾರೆ.

ಆರೋಗ್ಯ, ಜವಾಬ್ದಾರಿ ನೀಡುವ ಮಾಸ
ರಂಜಾನ್‌ ಉಪವಾಸಕ್ಕೆ ಮಾತ್ರ ಸೀಮಿತವಲ್ಲ; ಅದೊಂದು ಆರಾಧನಾ ತರಬೇತಿ ಕೂಡ. ಕೃತಜ್ಞತೆ ಸಲ್ಲಿಸಲು ಇರುವ ಹಬ್ಬ, ಕೆಟ್ಟ ಚಟಗಳನ್ನು ತ್ಯಜಿಸುವ ಸಂದರ್ಭ, ಬಡವರ ಹಸಿವನ್ನು ಅರಿಯಲು ಬಂದ ಆತ್ಮಶುದ್ಧಿಯ ದಿನ, ವೈಷಮ್ಯ– ಹಗೆತನ ತೊಡೆದುಹಾಕುವ ಸಂಕಲ್ಪಕಾಲ, ಸ್ನೇಹಿತರನ್ನು– ಬಂಧುಗಳನ್ನು ಸತ್ಕರಿಸಲು ಸಿಗುವ ಸಂಕ್ರಮಣ ಸಮಯ, ತಪ್ಪುಗಳಿಗೆ ಕ್ಷಮೆ ಬೇಡಿ– ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದಾದ ಸದವಕಾಶದ ಘಳಿಗೆ... ಹೀಗೆ ಈ ಮಾಸಕ್ಕೆ ಹಲವು ಮುಖಗಳಿವೆ.

ಇಸ್ಲಾಮಿನಲ್ಲಿ ಉಪವಾಸ ವ್ರತ ಎಂದರೆ, ಅಲ್ಲಾಹನ ಪ್ರೀತಿಯನ್ನು ಗಳಿಸುವ ಇಚ್ಛೆಯೊಂದಿಗೆ ಆಹಾರ, ಪಾನೀಯ ಸೇವನೆ ತ್ಯಜಿಸುವುದು ಎಂದರ್ಥ. ಉಪವಾಸ ಆಚರಿಸುವವರು ನಸುಕಿನ 4.30 ರಿಂದ ಸಂಜೆ 6.45ರ ವರೆಗೆ ನೀರು– ಆಹಾರ ಸೇವಿಸುವಂತಿಲ್ಲ. ನಸುಕಿನ 4.30ಕ್ಕಿಂತ ಮುನ್ನ ಸೇವಿಸುವ ಆಹಾರಕ್ಕೆ ‘ಸೆಹರಿ’ ಎನ್ನುತ್ತಾರೆ. ಉಪವಾಸ ಕೊನೆಗೊಳಿಸುವ ಸಮಯಕ್ಕೆ ‘ಇಫ್ತಾರ್‌’ ಎಂದು ಕರೆಯುತ್ತಾರೆ.

ರಂಜಾನ್‌ ತಿಂಗಳ ರಾತ್ರಿಗಳಲ್ಲಿ ವಿಶೇಷ ನಮಾಜ್‌ ನಿರ್ವಹಿಸಲಾಗುತ್ತದೆ. ಅದಕ್ಕೆ ‘ತರಾವೀಹ್‌’ ಎನ್ನಲಾಗುತ್ತದೆ.

‘ಈದ್‌ಉಲ್‌ ಫಿತ್ರ್‌’ಗೆ ಕ್ಷಣಗಣನೆ
ತಿಂಗಳ ಉಪವಾಸ ವ್ರತ ಆರಂಭಿಸಿರುವ ಮುಸ್ಲಿಂ ಸಮುದಾಯದವರೆಲ್ಲ ಇನ್ನೇನು ‘ಈದ್‌ಉಲ್‌ ಫಿತ್ರ್‌’ಗಾಗಿ ಕಾಯುತ್ತಿದ್ದಾರೆ. ‘ರಂಜಾನ್‌ ಮಾಸದಲ್ಲಿ ಸ್ವರ್ಗದ ಬಾಗಿಲು ತೆರೆದು– ನರಕದ ಬಾಗಿಲು ಮುಚ್ಚುತ್ತದೆ. ಹಾಗಾಗಿ, ಈ ತಿಂಗಳ ಪ್ರಾರ್ಥನೆಗೆ ಸಾವಿರಪಟ್ಟು ಮಹತ್ವ ಇದೆ’ ಎಂಬುದು ನಂಬಿಕೆ.

‘ರಂಜಾನ್‌ ಪ್ರಾರ್ಥನೆ ಹಾಗೂ ಉಪವಾಸದಿಂದ ಜೀವನದ ಪಾಪಗಳೆಲ್ಲ ಕಳೆದುಹೋಗುತ್ತವೆ. ಒಂದು ತಿಂಗಳ ವ್ರತ ಮಾಡುವುದರಿಂದ 70 ಪಟ್ಟು ಪುಣ್ಯ ಪ್ರಾಪ್ತಿಯಾಗುತ್ತದೆ. ಅದರಲ್ಲೂ ಈ ತಿಂಗಳಲ್ಲಿ ಒಂದು ವಿಶೇಷ ರಾತ್ರಿ ಬರುತ್ತದೆ. ಆ ಒಂದು ರಾತ್ರಿಯ ಪ್ರಾರ್ಥನೆ ಬರೋಬ್ಬರಿ 1,000 ತಿಂಗಳುಗಳ ಪ್ರಾರ್ಥನೆಗೆ ಸಮ’ ಎನ್ನುತ್ತಾರೆ ಮೌಲ್ವಿಗಳು.

ರಂಜಾನ್‌ ತಿಂಗಳ ಸಮಾಪ್ತಿಯೊಂದಿಗೆ ಬರುವ ಹಬ್ಬವೇ ‘ಈದ್‌ ಉಲ್‌ ಫಿತ್ರ್‌’. ರಂಜಾನ್‌ ಮಾಸದ ಚಂದ್ರದರ್ಶನದೊಂದಿಗೆ ಆರಂಭವಾಗುವ ಉಪವಾಸವು ಶವ್ವಾಲ್‌ ತಿಂಗಳ ಚಂದ್ರ ದರ್ಶನದೊಂದಿಗೆ ಕೊನೆಗೊಳ್ಳುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು