ಭಾನುವಾರ, ನವೆಂಬರ್ 29, 2020
22 °C
ವಿದ್ಯುತ್ ಮಾರ್ಗದ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ಲಾಡ್ಲಾಪುರ: ಜೋತುಬಿದ್ದ ವಿದ್ಯುತ್ ತಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಜೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರು ಕೈಯಲ್ಲಿ ಜೀವ ಹಿಡಿದು ಬೇಸಾಯದಲ್ಲಿ ತೊಡಗಬೇಕಾದ ಸ್ಥಿತಿ ಉಂಟಾಗಿದೆ.

ಸಮೀಪದ ಲಾಡ್ಲಾಪುರ ಗ್ರಾಮದ ಹಲವು ಕಡೆ ರೈತರ ಜಮೀನುಗಳಲ್ಲಿ ಹಾಗೂ ಗ್ರಾಮದ ಬಹುತೇಕ ಕಡೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಸ್ಥಳೀಯರಲ್ಲಿ ಪ್ರಾಣಭೀತಿ ಸೃಷ್ಟಿಸಿವೆ. ಕೆಲವು ರೈತರ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಿಸಿದ್ದು, ರೈತರ ಗೋಳಾಟಕ್ಕೆ ಕಾರಣವಾಗಿದೆ. ರೈತರ ಎದೆಯ ಮಟ್ಟಕ್ಕೆ ನಿಲುಕುವ ತಂತಿಗಳು ಯಾವುದೇ ಸಮಯದಲ್ಲಿ ಪ್ರಾಣಕ್ಕೆ ಕುತ್ತು ತರಬಹುದು. ಜೀವ ಕೈಯಲ್ಲಿ ಹಿಡಿದು ಜಮೀನುಗಳಿಗೆ ತೆರಳಬೇಕಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗ್ರಾಮದ ಹೊರವಲಯದ ದುರ್ಗಪ್ಪ ಗಲಗಿನ ಎಂಬ ರೈತನ ಜಮೀನಿನಲ್ಲಿ ಭೂಮಿಯಿಂದ ಕೇವಲ 4 ಅಡಿ ಅಂತರದಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದೆ. ರೈತರ ಕುಟುಂಬಕ್ಕೆ ಈಗ ಜೀವಭಯ ಕಾಡುತ್ತಿದ್ದು, ಹೊಲಕ್ಕೆ ತೆರಳು ಹಿಂದೇಟು ಹಾಕುತ್ತಿದ್ದಾರೆ.

ಹಲವು ಜಮೀನುಗಳಲ್ಲಿ ಬಾಗಿ ನಿಂತ ವಿದ್ಯುತ್ ಕಂಬಗಳೂ ಸಹ ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಸಮಸ್ಯೆ ಪರಿಹರಿಸಿ ಎಂಬ ರೈತರ ಕೂಗು ಅರಣ್ಯರೋಧನವಾಗಿದೆ. 'ಪ್ರಾಣ ಕೈಯಲ್ಲಿ ಹಿಡಿದು ಬೇಸಾಯ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಜೀವಕ್ಕೆ ಸಂಚಕಾರ ಬಂದರೆ ಯಾರು ಹೊಣೆ?' ಎಂದು ಸ್ಥಳೀಯ ರೈತ ಸಾಬಣ್ಣ ಗೊಡಗ ಜೆಸ್ಕಾಂ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಹುತೇಕ ತುಕ್ಕುಹಿಡಿದ ಸ್ಥಿತಿಯಲ್ಲಿರುವ ತಂತಿಗಳು ಈ ಹಿಂದೆ ಹಲವು ಬಾರಿ ಕಡಿದು ಬಿದ್ದಿವೆ. ಹಲವೆಡೆ ಕಂಬಗಳು ಬಾಗಿ ನಿಂತಿವೆ.

ಕೊಂಚೂರು ಡಿಗ್ಗಿ ತಾಂಡಾದ ಮೂಲಕ ವಿದ್ಯುತ್ ಪೂರೈಸುವ ಜಾಲ ಸಂಪೂರ್ಣ ಹಾಳಾಗಿ ಹೋಗಿದೆ. ಈ ಮಾರ್ಗದಲ್ಲಿ ವಿದ್ಯುತ್ ಉಪಕರಣಗಳು, ತಂತಿಗಳು ಹಾಳಾಗಿ ಹೋಗಿದ್ದು, ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ವಾರಗಟ್ಟಲೇ ರೈತರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಹಲವು ರೈತರು ಅಳಲು ತೋಡಿಕೊಂಡಿದ್ದಾರೆ.

ವಿದ್ಯುತ್ ಪೂರೈಸುವ ಜಾಲ ಹಾಗೂ ಉಪಕರಣಗಳನ್ನು ಕಾಲಕಾಲಕ್ಕೆ ನಿರ್ವಹಣೆ ಮಾಡಬೇಕಾದ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕೂಡಲೇ ಕಂಬಗಳ ದುರಸ್ತಿಗೆ ಕ್ರಮ ವಹಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೋತು ಬಿದ್ದ ತಂತಿಗಳು, ವಿದ್ಯುತ್ ಕಂಬಗಳು ಹಾಗೂ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಪಟ್ಟಿ ಮಾಡಿ ಕೂಡಲೇ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು
– ಭೀಮಾಶಂಕರ, ಕಾರ್ಯನಿರ್ವಾಹಕ ಎಂಜಿನಿಯರ್, ಜೆಸ್ಕಾಂ, ಚಿತ್ತಾಪುರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.