ವಾಟ್ಸ್‌ಆ್ಯಪ್ ಮೂಲಕ ಉದ್ಯೋಗ ಖಾತ್ರಿ!

7
ಅರ್ಹ ಫಲಾನುಭವಿಗಳಿಗೆ ಕೆಲಸ ಕೊಡಲು ವಿನೂತನ ಪ್ರಯತ್ನ

ವಾಟ್ಸ್‌ಆ್ಯಪ್ ಮೂಲಕ ಉದ್ಯೋಗ ಖಾತ್ರಿ!

Published:
Updated:
Prajavani

ಕಲಬುರ್ಗಿ: ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಖಾತ್ರಿ ಪಡಿಸಲು ಜಿಲ್ಲಾ ಪಂಚಾಯಿತಿಯು ಇದೇ ಮೊದಲ ಬಾರಿಗೆ ವಾಟ್ಸ್‌ಆ್ಯಪ್ ಮೊರೆ ಹೋಗಿದೆ.

ಗ್ರಾಮ ಪಂಚಾಯಿತಿಯಲ್ಲಿ ಎನ್‌ಎಂಆರ್ ತೆಗೆಯಲು ಮತ್ತು ಕೆಲಸ ಕೊಡಲು ಸಬೂಬು ಹೇಳಿದರೆ ಫಲಾನುಭವಿಗಳು ತಮ್ಮ ಸಮಸ್ಯೆಯನ್ನು ವಾಟ್ಸ್‌ಆ್ಯಪ್ (94808 06010) ಮೂಲಕ ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತರಬಹುದು. ಇದಲ್ಲದೆ, ಉದ್ಯೋಗ ಖಾತ್ರಿ ಯೋಜನೆಯಡಿ ಸರಿಯಾಗಿ ಕೆಲಸ ಮಾಡದಿದ್ದರೆ ಅಥವಾ ಅರ್ಧಂಬರ್ಧ ಕೆಲಸ ಮಾಡಿದ್ದರೆ ಸಾರ್ವಜನಿಕರು ಫೋಟೊ, ವಿಡಿಯೊಗಳನ್ನು ಈ ವಾಟ್ಸ್‌ಆ್ಯಪ್ ಸಂಖ್ಯೆಗೆ ಕಳುಹಿಸಬಹುದು. ಅಲ್ಲದೆ ಕರೆ ಮಾಡಿ ಕೂಡ ದೂರು ಸಲ್ಲಿಸಬಹುದಾಗಿದೆ.

‘ಕೆಲವು ಗ್ರಾಮಗಳಲ್ಲಿ ತಾಂತ್ರಿಕ ನೆಪವೊಡ್ಡಿ ಕೆಲಸ ನೀಡುತ್ತಿಲ್ಲ, ಹಲವೆಡೆ ಅಂಗವಿಕಲರಿಗೆ ಉದ್ಯೋಗ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬಂದಿದ್ದವು. ಹೀಗಾಗಿ ವಾಟ್ಸ್‌ಆ್ಯಪ್‌ ಮೂಲಕ ಕುಂದು–ಕೊರತೆ ನಿವಾರಿಸಬೇಕು ಎಂದು ಸಾರ್ವಜನಿಕರಿಗೆ ಈ ಸೇವೆಯನ್ನು ನೀಡಲಾಗಿದೆ. ವಾರಕ್ಕೆ ಕನಿಷ್ಠ 10–15 ಜನರು ಕರೆ ಮಾಡಿ ದೂರು ನೀಡುತ್ತಾರೆ. ವಾಟ್ಸ್‌ಆ್ಯಪ್ ದೂರುಗಳನ್ನು ದಾಖಲಿಸಿಕೊಳ್ಳಲು ಮತ್ತು ಸಂಬಂಧಿಸಿದ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತರಲು ಒಬ್ಬ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ 60 ವರ್ಷ ಮೇಲಿನವರು, ಅಂಗವಿಕಲರು, ಕಣ್ಣು ಕಾಣದೇ ಇರುವವರಿಗೂ ಉದ್ಯೋಗ ನೀಡಲು ಅವಕಾಶವಿದೆ. ಪ್ರತಿ ನಿತ್ಯ ₹259 ಕೂಲಿ ಹಣ ನೀಡಲಾಗುತ್ತದೆ. ಖಾತ್ರಿ ಯೋಜನೆಯಡಿ ಕೊಳವೆಬಾವಿಗಳ ಜಲಮರುಪೂರಣ, ಕೃಷಿ ಹೊಂಡ, ತೋಟಗಾರಿಕೆ ಬೆಳೆ, ರೇಷ್ಮೆ ಬೆಳೆಯಬಹುದು. ಅಂಗನವಾಡಿ ಕಟ್ಟಡ, ಅಂಗನವಾಡಿ ಹಾಗೂ ಶಾಲೆಗಳಿಗೆ ಕಾಂಪೌಂಡ್, ಶೌಚಾಲಯ ನಿರ್ಮಿಸಲೂ ಅವಕಾಶವಿದೆ’ ಎಂದು ಮಾಹಿತಿ ನೀಡಿದರು.

‘ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೆ 19.85 ಲಕ್ಷ ಮಾನವ ದಿನಗಳನ್ನು ಸೃಷ್ಟಿಸಲಾಗಿದೆ. ಈ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತಿದೆ. ಅಲ್ಲದೆ, ಪ್ರತಿ ಬುಧವಾರ ಸಂಜೆ 7 ಗಂಟೆಯಿಂದ 7.30 ಗಂಟೆಯವರೆಗೆ ಆಕಾಶವಾಣಿ ಮೂಲಕ ಕುಂದು–ಕೊರತೆ ಆಲಿಸಲಾಗುತ್ತಿದೆ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !