ಕನ್ನಡ ಕಡೆಗಣನೆ ಆರೋಪ: ಇಂಗ್ಲಿಷ್‌ ಕಡ್ಡಾಯದ ಸಮರ್ಥನೆ ನೀಡಿದ ವಿ.ವಿ ಪ್ರಾಧ್ಯಾಪಕರು

7
ಗುಲಬರ್ಗಾ ವಿ.ವಿ, ಪರಿಶೀಲನೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ

ಕನ್ನಡ ಕಡೆಗಣನೆ ಆರೋಪ: ಇಂಗ್ಲಿಷ್‌ ಕಡ್ಡಾಯದ ಸಮರ್ಥನೆ ನೀಡಿದ ವಿ.ವಿ ಪ್ರಾಧ್ಯಾಪಕರು

Published:
Updated:

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ದಲಿತ ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿದ್ದಾರೆ. ಈ ಸಮುದಾಯದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಾದರೂ ಇಂಗ್ಲಿಷ್‌ ಕಲಿಯಬೇಕು ಎಂಬ ಆಶಯದೊಂದಿಗೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್‌ ಬೇಸಿಕ್‌ ಕಡ್ಡಾಯ ಮಾಡಲಾಗಿದೆ’ ಎಂದು ವಿ.ವಿಯ ಬಹುಪಾಲು ಪ್ರಾಧ್ಯಾಪಕರು ಸಮರ್ಥಿಸಿಕೊಂಡರು.

‘ವಿಶ್ವವಿದ್ಯಾಲಯದಲ್ಲಿ ಕನ್ನಡವನ್ನು ಕಡೆಗಣಿಸಲಾಗುತ್ತಿದೆ’ ಎಂಬ ದೂರಿನ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ಗುರುವಾರ ಸಭೆ ನಡೆಸಿದರು. ಈ ವೇಳೆ ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ತಮ್ಮ ನಿಲುವಿನ ಮೇಲೆ ಗಟ್ಟಿಯಾಗಿ ನಿಂತರು.

‘ರಾಜ್ಯದ ಇತರ ಭಾಗಗಳ ವಿದ್ಯಾರ್ಥಿಗಳೊಂದಿಗೆ ನಮ್ಮ ಮಕ್ಕಳು ಸ್ಪರ್ಧೆ ಮಾಡಲು ಹಿಂದೆ ಬೀಳುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಂದು ಕನ್ನಡವನ್ನು ನಿರ್ಲಕ್ಷ್ಯ ಮಾಡಿಲ್ಲ’ ಎಂದೂ ಒಕ್ಕೊರಲ ದನಿಯಲ್ಲಿ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರೊ.ಸಿದ್ದರಾಮಯ್ಯ, ‘ಇಂಗ್ಲಿಷ್‌ ಕಲಿತವರು ಮಾತ್ರ ಬುದ್ಧವಂತರು, ಜ್ಞಾನಿಗಳು ಆಗುತ್ತಾರೆ ಎಂಬುದು ಭ್ರಮೆ. ಜಾಗತಿಕ ಮಟ್ಟದಲ್ಲಿ ಮಿಂಚಿದ ವಿಜ್ಞಾನಿಗಳು, ಎಂಜಿನಿಯರ್‌, ವೈದ್ಯ, ಮಾಹಿತಿ ತಂತ್ರಜ್ಞಾನ, ಆಡಳಿತಾಧಿಕಾರಿಗಳೂ ಸೇರಿದಂತೆ ಬಹುಪಾಲು ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ’ ಎಂದರು.

‘ತ್ರಿಭಾಷಾ ಸೂತ್ರದ ಅಡಿ ಎರಡನ್ನು ಆಯ್ಕೆ ಮಾಡಿಕೊಳ್ಳುವಂತೆ ಕೇಂದ್ರದ ನಿರ್ದೇಶನವಿದೆ. ಇಂಗ್ಲಿಷ್‌ ಕಡ್ಡಾಯ ಮಾಡಿದರೆ ಇನ್ನೊಂದು ಭಾಷೆಯಾಗಿ ಹಿಂದಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದರಿಂದ ಕನ್ನಡಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ. ಕನ್ನಡದ ಅಸ್ಮಿತೆ ಬೆಳೆದಿದ್ದೇ ಹೈ.ಕ ಭಾಗದಿಂದ. ಅದಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಿ’ ಎಂದು ನಿರ್ದೇಶನ ನೀಡಿದರು.

‘ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್‌ ಕಡ್ಡಾಯ ಮಾಡಬೇಕು ಎಂದು ವಿ.ವಿ ಧನ ಸಹಾಯ ಆಯೋಗ (ಯುಜಿಸಿ) ನಿಯಮ ಮಾಡಿದೆ. ಅದರ ಪ್ರಕಾರವೇ ಪ್ರಸಕ್ತ ಸಾಲಿನಿಂದ ಜಾರಿ ಮಾಡಲಾಗಿದೆ. ಇದು ವಿ.ವಿ ಪ್ರಾಧ್ಯಾಪಕರ ನಿರ್ಧಾರವಲ್ಲ’ ಎಂದು ಪ್ರಾಧ್ಯಾಪಕರೊಬ್ಬರು ಗಮನಕ್ಕೆ ತಂದರು.

ಇದಕ್ಕೆ ಮಾರುತ್ತರ ನೀಡಿದ ಸಿದ್ದರಾಮಯ್ಯ, ‘ಯುಜಿಸಿ ಕೇವಲ ಸಲಹೆ ನೀಡಬಹುದಷ್ಟೇ. ಅದೇನು ಸರ್ಕಾರ ಹೊರಡಿಸಿದ ಕಾನೂನು ಅಲ್ಲ. ಮಾತ್ರವಲ್ಲ; ಆಯಾ ಪ್ರಾದೇಶಿಕ ಭಿನ್ನತೆ ಆಧರಿಸಿ ಶೇ 30ರಷ್ಟು ಸಡಿಲಿಕೆಗೂ ಯುಜಿಸಿ ಅವಕಾಶ ನೀಡಿದೆ. ಅದೊಂದ ನೆಪ ಇಟ್ಟುಕೊಂಡು ಕನ್ನಡ ಹಿಂದಕ್ಕೆ ತಳ್ಳುವುದು ಸಮಂಜಸವಲ್ಲ’ ಎಂದರು.

ಪ್ರಾಧಿಕಾರದ ಸದಸ್ಯ ಮಹಾಂತೇಶ ಹಟ್ಟಿ, ಕುಲಸಚಿವ ಡಿ.ಎಂ.ಮದ್ದರಿ, ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಎಚ್‌.ಟಿ. ಪೋತೆ, ವಿತ್ತಾಧಿಕಾರಿ ಲಕ್ಷ್ಮಣ ರಾಜನಾಳಕರ, ಕರ್ನಾಟಕ ಕೇಂದ್ರೀಯ ವಿ.ವಿ. ಉಪನ್ಯಾಸಕಿ ಪ್ರೊ.ಶಿವಗಂಗಾ ರುಮ್ಮಾ, ಡಾ.ಚಂದ್ರಕಲಾ ಬದರಿ, ಡಾ.ಮೀನಾಕ್ಷಿ ಬ್ಯಾಳಿ ಹಲವರು ಚರ್ಚೆಯಲ್ಲಿ ಪಾಲ್ಗೊಂಡರು.

ತಿಂಗಳಲ್ಲಿ ಮರುಪರಿಶೀಲನೆ

‘ವಿಶ್ವವಿದ್ಯಾಲಯದಲ್ಲಿ ಕನ್ನಡ ಅನುಷ್ಠಾನ ಸಂಬಂಧ ಸಮಸ್ಯೆಗಳು ಇದ್ದಲ್ಲಿ ತಿಂಗಳೊಳಗೆ ಪರಿಹರಿಸಿಕೊಳ್ಳುತ್ತೇವೆ. ಸೆನೆಟ್‌ ಸದಸ್ಯರು, ಸಿಂಡಿಕೇಟ್ ಸದಸ್ಯರು, ಎಲ್ಲ ವಿಭಾಗಗಳ ಮುಖ್ಯಸ್ಥರ ಸಭೆ ಕರೆದು ಇನ್ನೊಮ್ಮೆ ಕೂಲಂಕಶವಾಗಿ ಚರ್ಚಿಸುತ್ತೇವೆ’ ಎಂದು ಗುಲಬರ್ಗಾ ವಿ.ವಿ ಕುಲಪತಿ ಪ್ರೊ.ಎಸ್‌.ಆರ್‌.ನಿರಂಜನ ತಿಳಿಸಿದರು.

‘ತಿಂಗಳೊಳಗಾಗಿ ವಿ.ವಿ ವೆಬ್‌ಸೈಟ್‌ಅನ್ನು ಕನ್ನಡೀಕರಣ ಮಾಡಲಾಗುವುದು. ಸಿಬಿಎಸ್‌ಸಿ, ಎಸ್‌ಐಎಸ್‌ಸಿ ಬೋಧನಾ ಮಾದರಿಯಲ್ಲಿ ಕನ್ನಡ ಜಾರಿ ಮಾಡಲು ಇರುವ ಅಡ್ಡಿಗಳನ್ನು ನಿವಾರಿಸಲಾಗುವುದು. ಎಲ್ಲ ವಿಭಾಗಗಳಲ್ಲೂ ಕಾಗದ ಪತ್ರಗಳ ವ್ಯವಹಾರ ಕನ್ನಡದಲ್ಲೇ ಇರುವಂತೆ ನೋಡಿಕೊಳ್ಳಲಾಗುವುದು’ ಎಂದೂ ಅವರು ಭರವಸೆ ನೀಡಿದರು.

* ಕನ್ನಡದಲ್ಲಿಯೂ ಪಿಎಚ್‌.ಡಿ ಸಂಶೋಧನೆ ಮಂಡಿಸಲು ಅವಕಾಶ ನೀಡಿದ ರಾಜ್ಯದ ಏಕಮಾತ್ರ ವಿಶ್ವವಿದ್ಯಾಲಯ ನಮ್ಮದು. 560 ಕಾಲೇಜುಗಳು ವ್ಯಾಪ್ತಿಯಲ್ಲಿದ್ದು, ಎಲ್ಲಿಯೂ ಕನ್ನಡ ನಿರ್ಲಕ್ಷ್ಯ ಮಾಡಿಲ್ಲ
–ಪ್ರೊ.ಎಸ್.ಆರ್‌.ನಿರಂಜನ
ಕುಲಪತಿ, ಗುಲಬರ್ಗಾ ವಿ.ವಿ

* ಬಸವಕಲ್ಯಾಣದಲ್ಲಿರುವ ಶರಣ ಸಾಹಿತ್ಯ ಸಂಶೋಧನಾ ವಿಸ್ತರಣಾ ಕೇಂದ್ರವನ್ನು ಕನ್ನಡ ಸ್ನಾತಕೋತ್ತರ ಕೇಂದ್ರ ಮಾಡಲಾಗುವುದು. ಆದರೂ ಅಲ್ಲಿ ಶರಣ ಸಾಹಿತ್ಯವೇ ಪ್ರಧಾನವಾಗಿ ಇರಲಿದೆ

–ಪ್ರೊ.ಎಚ್‌.ಟಿ.ಪೋತೆ
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ

* ಬಸವಕಲ್ಯಾಣದಲ್ಲಿರುವ ಶರಣ ಸಾಹಿತ್ಯ ಸಂಶೋಧನಾ ವಿಸ್ತರಣಾ ಕೇಂದ್ರವನ್ನು ಕನ್ನಡ ಸ್ನಾತಕೋತ್ತರ ಕೇಂದ್ರ ಮಾಡಲಾಗುವುದು. ಆದರೂ ಅಲ್ಲಿ ಶರಣ ಸಾಹಿತ್ಯವೇ ಪ್ರಧಾನವಾಗಿ ಇರಲಿದೆ
–ಪ್ರೊ.ಎಚ್‌.ಟಿ.ಪೋತೆ
ನಿರ್ದೇಶಕ, ಕನ್ನಡ ಅಧ್ಯಯನ ಸಂಸ್ಥೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !