ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲ ಮಕ್ಕಳಿಗೂ ಹಾಸ್ಟೆಲ್‌ ಪ್ರವೇಶ ನೀಡಿ

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳ ಧರಣಿ
Last Updated 27 ಸೆಪ್ಟೆಂಬರ್ 2018, 13:22 IST
ಅಕ್ಷರ ಗಾತ್ರ

ಕಲಬುರ್ಗಿ: ಹಾಸ್ಟೆಲ್‌ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ದುರ್ಬಲ ವರ್ಗದ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಧರಣಿ ನಡೆಸಿದರು.

‘ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಕಳೆದ ತಿಂಗಳು ಆದೇಶ ಹೊರಡಿಸಿದೆ. ಆದರೆ, ನಮ್ಮ ವಸತಿನಿಲಯಗಳ ಸಾಮರ್ಥ್ಯ ಕಡಿಮೆ ಇದ್ದು, ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಸಾಲುತ್ತವೆ. ಇನ್ನರ್ಧ ಮಕ್ಕಳು ಏನು ಮಾಡಬೇಕು? ಅವರು ಕಲಿಕೆ ಮುಂದುವರಿಸುವುದು ಹೇಗೆ?’ ಎಂದು ಧರಣಿ ನಿರತರು ಪ್ರಶ್ನಿಸಿದ್ದಾರೆ.

‘ಈಗಾಗಲೇ ಶಾಲೆ, ಕಾಲೇಜು ಪಾಠಗಳು ಆರಂಭವಾಗಿ ಸಾಕಷ್ಟು ಸಮಯವಾಗಿದೆ. ಇಂಥ ಸಂದರ್ಭದಲ್ಲಿ ಹಾಸ್ಟೆಲ್‌ ಪ್ರವೇಶ ನಿರಾಕರಿಸಿದರೆ ಬಹುಪಾಲು ಮಕ್ಕಳ ಶಿಕ್ಷಣ ಅರ್ಧಕ್ಕೇ ಮೊಟಕುಗೊಳ್ಳುತ್ತದೆ. ಸಮಾಜ ಕಲ್ಯಾಣ ಸಚಿವರು ಕೂಡಲೇ ಈ ಆದೇಶ ಹಿಂಪಡೆಯಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಭೀಮಶ್ಯಾ ಖನ್ನಾ, ಶ್ರೀಮಂತ ಸೂಲೇಕರ, ಸಂಚಾಲಕ ಮಹಾದೇವ ಕೊಳಕೂರ, ಕಾರ್ಯಕಾರಿ ಸಮಿತಿ ಸದಸ್ಯ ನಾಗಪ್ಪ ಒಳಕೇರಿ, ಮಹಿಳಾ ಘಟಕದ ಸಂಚಾಲಕಿ ಜಯಶ್ರೀ ದೊಡ್ಡಮನಿ ಇದ್ದರು.

ಇತರ ಬೇಡಿಕೆಗಳು:

ಭೂ ಒಡೆತನ ಯೋಜನೆ ಅಡಿ ಅರ್ಜಿ ಸಲ್ಲಿಸುವ ಎಲ್ಲ ಅರ್ಹರಿಗೂ ಭೂಮಿ ಮಂಜೂರು ಮಾಡಬೇಕು.

* ದಮನಿತ ಸಮುದಾಯಕ್ಕೆ ಇರುವ ವಿವಿಧ ಯೋಜನೆಗಳ ಜಾರಿಗೆ ಏಕಗವಾಕ್ಷಿ ವ್ಯವಸ್ಥೆ ಮಾಡಬೇಕು.

* ಫಲಾನುಭವಿಗಳ ಆಯ್ಕೆಗಾಗಿ ಆಯಾ ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಇರುವ ಸಮಿತಿಯನ್ನು ರದ್ದು ಮಾಡಬೇಕು.

* ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ನಿಗಮ– ಮಂಡಳಿಗಳಲ್ಲಿ ಅರ್ಹರಿಗೆ ಸಾಲ ಮಂಜೂರು ಮಾಡಬೇಕು.

* ಹಾಸ್ಟೆಲ್‌ಗಳ ಗುತ್ತಿಗೆ ಕೆಲಸಗಾರರನ್ನು ಕಾಯಂ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT