ಮಂಗಳವಾರ, ಆಗಸ್ಟ್ 3, 2021
24 °C

ಉದ್ಯೋಗ ಖಾತ್ರಿ ಕೆಲಸದ ಅವಧಿ 150 ದಿನಗಳಿಗೆ ಹೆಚ್ಚಳಕ್ಕೆ ಚಿಂತನೆ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಕೇಂದ್ರ ಸರ್ಕಾರವು ಮತ್ತೆ ₹ 40 ಸಾವಿರ ಕೋಟಿ ಹಂಚಿಕೆ ಮಾಡಿದೆ. ಹೀಗಾಗಿ ಒಬ್ಬರಿಗೆ ಕೂಲಿ ದಿನವನ್ನು ಈಗ ಇರುವ 100 ದಿನಗಳಿಂದ ಗರಿಷ್ಠ 150 ದಿನಗಳಿಗೆ ಹೆಚ್ಚಳ ಮಾಡುವ ಚಿಂತನೆ ಇದೆ’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ತಾಲ್ಲೂಕಿನ ಹೊನ್ನ ಕಿರಣಗಿ ಗ್ರಾಮದಲ್ಲಿ ಶುಕ್ರವಾರ ಉದ್ಯೋಗ ಖಾತ್ರಿ ಕಾಮಗಾರಿ ವೀಕ್ಷಿಸಿದ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಿರುವ ₹ 275 ಕೂಲಿ ದರವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದರು.

‘ಕೇಂದ್ರ ಸರ್ಕಾರದವರು ಈ ಯೋಜನೆಗೆ ಬಜೆಟ್‌ನಲ್ಲಿ ₹ 60 ಸಾವಿರ ಕೋಟಿ ಹಂಚಿಕೆ ಮಾಡಿದ್ದರು. ಲಾಕ್‌ಡೌನ್‌ ಭಾಗವಾಗಿ ಘೋಷಿಸಲಾದ ₹20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ₹40 ಸಾವಿರ ಕೋಟಿ ಹಂಚಿಕೆ ಮಾಡಿದ್ದಾರೆ. ಇದರಿಂದ ಒಟ್ಟಾರೆ ₹1 ಲಕ್ಷ ಕೋಟಿ ಹಂಚಿಕೆ ಮಾಡಿದಂತಾಗುತ್ತದೆ. ಹೀಗಾಗಿ, ಸಹಜವಾಗಿಯೇ ಒಬ್ಬರಿಗೆ 150 ದಿನಗಳವರೆಗೆ ಉದ್ಯೋಗ ಕೊಡಬಹುದು’ ಎಂದರು.

‘ಶುಕ್ರವಾರ ರಾಜ್ಯದಲ್ಲಿ 9.36 ಲಕ್ಷ ಜನ ನರೇಗಾ ಕೆಲಸ ಮಾಡಿದರು’ ಎಂದು ಹೇಳಿದರು.

ಮೂರು ವರ್ಷದಲ್ಲಿ ಎಲ್ಲ ಮನೆಗಳಿಗೂ ನೀರು

‘ಅಂತರ್ಜಲ ಚೇತನ’ ಯೋಜನೆಗೆ ಚಾಲನೆ ನೀಡಿದ ಈಶ್ವರಪ್ಪ, ‘ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅರಣ್ಯೀಕರಣ, ಬಾವಿಗಳ ಮರುಪೂರಣ, ಕೆರೆ–ಹೊಂಡ ತೋಡುವುದೂ ಸೇರಿದಂತೆ ಹಲವು ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಆರ್ಟ್‌ ಆಫ್‌ ಲಿವಿಂಗ್‌ ಹಾಗೂ ಮೈರಾಡಾ ಸಂಸ್ಥೆಗಳು ಜಿಲ್ಲೆಯ ಪ್ರತಿ ಗ್ರಾಮದ ಪ್ರತಿ ಮನೆಗೂ ಹೋಗಿ ಮಳೆ ನೀರು ಇಂಗಿಸುವ ಅರಿವು ಮೂಡಿಸಲಿವೆ. ಮುಂದಿನ ಮೂರು ವರ್ಷದಲ್ಲಿ ಅಂತರ್ಜಲ ಇಂಗುವಿಕೆ ಪ್ರಮಾಣವನ್ನು ಶೇಕಡ 30ಕ್ಕೆ ತರಲು ಪ್ರಯತ್ನ ನಡೆಸಲಾಗುತ್ತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.