ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾರ್ಜುನ ಖರ್ಗೆ ಕಮಿಷನ್‌ಗಾಗಿ ಇಎಸ್‌ಐ ಆಸ್ಪತ್ರೆ ನಿರ್ಮಾಣ: ತನಿಖೆಗೆ ಆಗ್ರಹ

Last Updated 20 ಏಪ್ರಿಲ್ 2019, 12:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ಕಮಿಷನ್‌ಗಾಗಿ ಇಎಸ್‌ಐ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆಯೇ ಹೊರತು ಜನರ ಒಳಿತಿಗಾಗಿ ಅಲ್ಲ. ಆದ್ದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಭಾಗದಲ್ಲಿ ಕೈಗಾರಿಕೆಗಳೇ ಇಲ್ಲ. ಆದಾಗ್ಯೂ ₹1,00 ಕೋಟಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಕಟ್ಟಡವು ‘ಖರ್ಗೆ’ ಹೆಸರಿನ ವಿನ್ಯಾಸ ಹೊಂದಿದೆ. ಮೇಲ್ಭಾಗದಿಂದ ನೋಡಿದರೆ ತಮ್ಮ ಹೆಸರು ಕಾಣಿಸುವಂತೆ ಯೋಜನೆ ರೂಪಿಸಿದ್ದಾರೆ’ ಎಂದು ಆರೋಪಿಸಿದರು.

‘ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬುದ್ಧ ವಿಹಾರ ನಿರ್ಮಾಣಕ್ಕೆ ₹6 ಕೋಟಿ ಅನುದಾನ ಕೊಟ್ಟಿದ್ದರು. ವಿದೇಶಗಳಿಂದ ಸಾಕಷ್ಟು ಪ್ರಮಾಣದಲ್ಲಿ ದೇಣಿಗೆ ಹರಿದು ಬಂದಿದೆ. ಆದ್ದರಿಂದ ಖರ್ಗೆ ಅವರು ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು’ ಎಂದು ಆಗ್ರಹಿಸಿದರು.

ಬಿಸಿ ಮುಟ್ಟಿಸಿದ ಚುನಾವಣೆ: ‘ಖರ್ಗೆ ಅವರು ಇಷ್ಟು ವರ್ಷ ತಣ್ಣಗೆ ಚುನಾವಣೆ ನಡೆಸುತ್ತಿದ್ದರು. ದೇವಸ್ಥಾನ, ಹಳ್ಳಿಗಳಿಗೆ ಹೋದವರಲ್ಲ. ನಾಲ್ಕು ಸಭೆ ಹೆಚ್ಚಾಗಿ ಮಾಡಿದವರಲ್ಲ. ಇವತ್ತು ಎದ್ದೇನೋ, ಬಿದ್ದೇನೋ ಎಂದು ಓಡುತ್ತಿದ್ದಾರೆ. ಕಲಬುರ್ಗಿಯನ್ನು ಇದುವರೆಗೆ ನೋಡದೆ ಇರುವವರು ಕೂಡ ಖರ್ಗೆ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಖರ್ಗೆ ಅವರಿಗೆ ಈ ಚುನಾವಣೆ ಬಿಸಿ ಮುಟ್ಟಿಸಿದೆ’ ಎಂದರು.

‘ವೀರಶೈವ ಲಿಂಗಾಯತ ಧರ್ಮ ಒಡೆಯುವಾಗ ಖರ್ಗೆ ಅವರು ಒಂದೇ ಒಂದು ಹೇಳಿಕೆ ಕೊಡಲಿಲ್ಲ. ಈಗ ಮಠ–ಮಂದಿರಗಳಿಗೆ ಭೇಟಿ ನೀಡುತ್ತಿದ್ದಾರೆ. ವೀರಶೈವ–ಲಿಂಗಾಯತರ ಸಭೆ ನಡೆಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಕುದಿಯುತ್ತಿರುವ ವೀರಶೈವ ಲಿಂಗಾಯತರು ಈ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

‘ಕುರುಬ, ಗೊಂಡ ಕುರುಬ ಹಾಗೂ ಕೋಲಿ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಖರ್ಗೆ ಆಸಕ್ತಿ ತೋರಿಸಲಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ. ಬಾಬುರಾವ ಚಿಂಚನಸೂರ, ಮಾಲೀಕಯ್ಯ ಗುತ್ತೇದಾರ ಅವರಿಗೆ ಸಚಿವ ಸ್ಥಾನ ನೀಡಲಿಲ್ಲ. ಪುತ್ರ ವ್ಯಾಮೋಹದಿಂದ ತಮ್ಮ ಮಗನಿಗೆ ಸಚಿವ ಸ್ಥಾನ ಕೊಡಿಸಿದರು. ಹೀಗಾಗಿ ಈ ಬಾರಿ ಖರ್ಗೆ ಅವರನ್ನು ಮನೆಗೆ ಕಳುಹಿಸಲು ಜಿಲ್ಲೆಯ ಜನರು ನಿರ್ಧರಿಸಿದ್ದು, ನಮ್ಮ ಅಭ್ಯರ್ಥಿ ಡಾ.ಉಮೇಶ ಜಾಧವ ಒಂದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಖಂಡರಾದ ಶಶೀಲ್ ಜಿ.ನಮೋಶಿ, ಪ್ರವೀಣ ಕುಲಕರ್ಣಿ, ಅನಿಲ್, ವಿದ್ಯಾಸಾಗರ ಕುಲಕರ್ಣಿ, ಮಾಧ್ಯಮ ಪ್ರಮುಖ್ ಸಂಗಣ್ಣ ಇಜೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT