ಭಾನುವಾರ, ಜನವರಿ 26, 2020
22 °C
ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಕಟ್ಟಡ ಸಮುಚ್ಛಯ

ಉದ್ಘಾಟನೆಗೆ ಮೊದಲೇ ಕಟ್ಟಡಕ್ಕೆ ಕಾಯಕಲ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಕೊಟಗಾ ಬಳಿ ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ವಸತಿ ಶಾಲೆ ಕಟ್ಟಡ ಸಮುಚ್ಛಯಕ್ಕೆ ಉದ್ಘಾಟನೆಗೆ ಮೊದಲೇ ಕಾಯಕಲ್ಪ ನೀಡುವ ಕೆಲಸ ಈಗ ಜೋರಾಗಿ ಸಾಗಿದೆ.

‘ಪ್ರಜಾವಾಣಿ’ ಆ.12ರ ಸಂಚಿಕೆಯಲ್ಲಿ ಶಾಲೆ ಕಟ್ಟಡದ ಕಳಪೆ ಕಾಮಗಾರಿ ನಿಲ್ಲಿಸಲು ಶಾಸಕ, ಸಂಸದ ಸೂಚನೆ ಶೀರ್ಷಿಕೆಯಲ್ಲಿ  ವರದಿ ಪ್ರಕಟವಾಗಿತ್ತು.

ಕಟ್ಟಡ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿರುವ ಕುರಿತು ದೂರುಗಳ ಹಿನ್ನೆಲೆಯಲ್ಲಿ ‘ಬ್ಯೂರೊ ವೆರಿಟಾಸ್‌’ ಮೂರನೇ ತಂಡವು ಪರಿಶೀಲಿಸಿ ನೀಡಿದ ವರದಿ ಹಾಗೂ ಲೋಕೋಪಯೋಗಿ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀಕ್ಷಕ ಎಂಜಿನಿಯರ್ ಬಂದು ಪರಿಶೀಲಿಸಿ ನೀಡಿದ್ದ ಸಲಹೆಯಂತೆ ದುರಸ್ತಿ ನಡೆಸಲಾಗುತ್ತಿದೆ.

ಅದರಂತೆ ಕಟ್ಟಡದ ಕಾಲಂ ಹಾಗೂ ಗೋಡೆಗಳ ಲೈನ್‌ ಮತ್ತು ಲೆಂಥ್ ಸರಿಪಡಿಸಲಾಗಿದೆ. ಡಾರಮೆಟ್ರಿ –1ರಲ್ಲಿ 5 ಕಾಲಂಗಳನ್ನು ಒಡೆದು ಹಾಕಿ ಮರು ನಿರ್ಮಿಸಲಾಗಿದೆ. ಬಹುತೇಕ ಎಲ್ಲಾ ಕಾಲಂಗಳಿಗೂ ‘ಫಾಸರಾಕ್‌ ಕಾನಬೆಕ್ಸಟ್ರಾ’ ಮಿಶ್ರಣ ಸೇರಿಸಿ ‘ಗ್ರೌಟಿಂಗ್‌’ ನಡೆಸಲಾಗಿದೆ. ಡಾರಮೆಟ್ರಿ –2ರಲ್ಲಿ ಮೂರು ಕಾಲಂಗಳಲ್ಲಿ ಮೈಕ್ರೊ ಕಾಂಕ್ರೀಟ್‌ ಮೂಲಕ ಜಾಕೆಟ್‌ ಅಳವಡಿಸಲಾಗಿದೆ.

ಕಳಪೆ ಗುಣಮಟ್ಟದ ಇಟ್ಟಿಗೆ ಬದಲಿಸಿ ಪರಳಿಯಿಂದ ತಂದ ಇಟ್ಟಿಗೆ ಬಳಸುತ್ತಿದ್ದಾರೆ. ಕಳಪೆಯಾಗಿದ್ದ ಆವರಣ ಗೋಡೆಯನ್ನು ಉರುಳಿಸಲಾಗಿದೆ ಎಂದು ಸೈಟ್‌ ಎಂಜಿನಿಯರ್‌ ಉಮಾ ಮಹೇಶ ತಿಳಿಸಿದರು.

ಶಾಸಕ ಡಾ. ಅವಿನಾಶ ಜಾಧವ ಈಚೆಗೆ ಕಲಬುರ್ಗಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನಡೆಸಿದ ಕೆಡಿಪಿ ಸಭೆಯಲ್ಲಿ ಈ ಕಳಪೆ ಕಾಮಗಾರಿ ಕುರಿತು ಗಮನ ಸೆಳೆದಾಗ ಉರುಳಿಸಿ ಮರು ನಿರ್ಮಿಸುವಂತೆ ಸಚಿವರು ಸೂಚಿಸಿದ್ದರು.

ಲೋಕೋಯೋಗಿ ಇಲಾಖೆಯ ಅಧಿಕ್ಷಕ ಎಂಜಿನಿಯರ್‌ ಶ್ರೀಹರಿ ಅ.23ರಂದು ಭೇಟಿ ನೀಡಿ ಕಟ್ಟಡ ತಪಾಸಣೆ ನಡೆಸಿ ಹಲವು ಸಲಹೆ ನೀಡಿದ್ದರು. ಕ್ರೈಸ್‌ನ ಅಧಿಕ್ಷಕ ಎಂಜಿನಿಯರ್‌ ನಾಗರಾಜ ಮತ್ತು ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಅಲ್ಲಿಪುರ ಸೆ.29 ಹಾಗೂ ನ.25ರಂದು ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದ್ದರು.

‘ಮೇಲಧಿಕಾರಿಗಳು ನೀಡಿದ್ದ ಸೂಚನೆ ಪಾಲಿಸುವುದರ ಜತೆಗೆ ಕಟ್ಟಡದ ಕಾಮಗಾರಿ ಗುಣಮಟ್ಟದಲ್ಲಿ ನಡೆಯುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಪ್ರೀಮಿಯರ್‌ ಟೆಕ್ನಿಕಲ್‌ ಕನ್ಸಲ್ಟೆನ್ಸಿಯ ಹಿರಿಯ ಎಂಜಿನಿಯರ್‌ ಶೈಲೇಶ್‌ ಹುಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)