ಗುರುವಾರ , ಫೆಬ್ರವರಿ 27, 2020
19 °C
ಚೌಕಿ ತಾಂಡಾ: ಅರಣ್ಯಾಧಿಕಾರಿಗಳೊಂದಿಗೆ ನಿವಾಸಿಗಳ ವಾಗ್ವಾದ

ಅರಣ್ಯ ಭೂಮಿ ಒತ್ತುವರಿ ತೆರವು: ಅರಣ್ಯಾಧಿಕಾರಿಗಳೊಂದಿಗೆ ತಾಂಡಾ ನಿವಾಸಿಗಳ ವಾಗ್ವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂಚೋಳಿ: ತಾಲ್ಲೂಕಿನ ಚಿಮ್ಮನಚೋಡ ಬಳಿಯ ಚೌಕಿ ತಾಂಡಾದಲ್ಲಿ ಕಾಯ್ದಿಟ್ಟ ಅರಣ್ಯ ಜಮೀನು ಒತ್ತುವರಿ ತೆರವು ಮಾಡುವಾಗ ತಾಂಡಾ ನಿವಾಸಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಮಧ್ಯೆ ವಾಗ್ವಾದ ನಡೆದಿದೆ.

ತಾಂಡಾದ ಭೀಮಸಿಂಗ್‌ ಚಂದ್ರಶೆಟ್ಟಿ, ಗೇಮು ಶಂಕರ, ಕಾಶಿರಾಮ ಧರ್ಮು ಮತ್ತು ತೇಜು ಕಿಶನ್ ಅವರು ಸ.ನಂ 58ರಲ್ಲಿ ಸುಮಾರು 10 ಎಕರೆ ಜಮೀನು ಮಂಜೂರಾತಿಯಾಗಿದ್ದು ಪಹಣಿ ಪತ್ರಿಕೆಯೂ ಹೊಂದಿದ್ದಾರೆ. ಆದರೆ ಸ.ನಂ.58ರಲ್ಲಿ ಬರುವ 1743 ಎಕರೆ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಈ ಪೈಕಿ 50 ಹೆಕ್ಟೇರ್‌ ಪ್ರದೇಶದಲ್ಲಿ ಕಾಮಗಾರಿ ನಡೆಯುವಾಗ ಜಮೀನಿಗೆ ಸಂಬಂಧಿಸಿದಂತೆ ಜಮೀನಿನ ಮಾಲೀಕರು ಮತ್ತು ಅರಣ್ಯ ಸಿಬ್ಬಂದಿ ಮಧ್ಯೆ ತಕರಾರು ನಡೆದಿದೆ. ಆಗ ಜನರನ್ನು ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಸುದ್ದಿ ಹಬ್ಬಿ ತಾಂಡಾ ವಾಸಿಗಳು ಸ್ಥಳದಲ್ಲಿ ಜಮಾಯಿಸಿದ್ದಾರೆ. 40ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ.

ಈ ಜಮೀನು ಮಂಜೂರು ಮಾಡಲು ಬರುವುದೇ ಇಲ್ಲ. ಮಂಜೂರು ಮಾಡಿ ಪಹಣಿಯಲ್ಲಿ ಹೆಸರು ಸೇರಿಸಿದರೂ ಅದು ಕ್ರಮಬದ್ಧವಲ್ಲ. ಇದು ಕಾಯ್ದಿಟ್ಟ ಅರಣ್ಯ. ಹೀಗಾಗಿ ಇದರಲ್ಲಿ ಬರಬೇಡಿ ಎಂದು ಅರಣ್ಯಾಧಿಕಾರಿಗಳು ತಾಕೀತು ಮಾಡಿದ್ದಾರೆ. ಆಗ ಮಾತಿಗೆ ಮಾತು ಬೆಳೆದಿದೆ. ಇದರಿಂದ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಶಾಸಕ ಡಾ. ಅವಿನಾಶ ಜಾಧವ, ಕಾಂಗ್ರೆಸ್‌ ಮುಖಂಡ ಸುಭಾಷ ರಾಠೋಡ್‌ ಚೌಕಿ ತಾಂಡಾಕ್ಕೆ ಭೇಟಿ ನೀಡಿದ್ದಾರೆ.

ತಹಶೀಲ್ದಾರ್‌ ಅರುಣಕುಮಾರ ಕುಲ್ಕರ್ಣಿ ಅವರು ಬಂದು, ‘10 ದಿನಗಳವರೆಗೆ ವಿವಾದಿತ ಸ್ಥಳದಲ್ಲಿ ನೀವು ಹೋಗಬೇಡಿ. ಅರಣ್ಯ ಇಲಾಖೆಯವರು ತಮ್ಮ ಕೆಲಸ ಮಾಡಲಿ. ನಮ್ಮ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿ ತಮಗೆ ತಿಳಿಸುತ್ತೇನೆ’ ಎಂದು ಹೇಳಿದ ಮೇಲೆ ವಾತಾವರಣ ತಿಳಿಗೊಂಡಿದೆ.

ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಕೆಲಸ ಮುಂದುವರಿಸಿ ಯಶಸ್ವಿಗೊಳಿಸಿದ್ದಾರೆ. ಸಬ್‌ ಇನ್‌ಸ್ಪೆಕ್ಟರ್‌ ರಾಜಶೇಖರ ರಾಠೋಡ್‌ ಬಂದೋಬಸ್ತ್‌ ಕೈಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)