ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಗ್ರಾ.ಪಂ. ಅಧ್ಯಕ್ಷರ ಮೇಲೆ ಹಲ್ಲೆಗೆ ಆಕ್ರೋಶ

ಅಬಕಾರಿ ಪೊಲೀಸರ ಜೀಪ್‌ ಅಡ್ಡಗಟ್ಟಿದ ಭೀಮನಹಳ್ಳಿ ಗ್ರಾಮಸ್ಥರು
Last Updated 22 ಜನವರಿ 2022, 15:30 IST
ಅಕ್ಷರ ಗಾತ್ರ

ಚಿತ್ತಾಪುರ: ಕಳ್ಳಭಟ್ಟಿ ಸಾರಾಯಿ ಪತ್ತೆಗಾಗಿ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಮನೆಯೊಂದರ ಮೇಲೆ ಶನಿವಾರ ದಾಳಿ ಮಾಡಿದ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖಪ್ಪ ಕಾಸಲ್ ಅವರ ಮೇಲೆ ಚಿಂಚೋಳಿ ಅಬಕಾರಿ ಪೊಲೀಸ್ ಇನ್ಸ್‌ಪೆಕ್ಟರ್ ಜಟ್ಟೆಪ್ಪ ಅವರು ಹಲ್ಲೆ ನಡೆಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸ್ ಜೀಪ್ ಅಡ್ಡಗಟ್ಟಿ ಪ್ರತಿಭಟಿಸಿದರು.

ಅಬಕಾರಿ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಂತೆ ಚಿತ್ತಾಪುರ ಅಬಕಾರಿ ಸಿಪಿಐ ರಮೇಶ ಬಿರಾದಾರ, ಚಿಂಚೋಳಿ ಸಿಪಿಐ ಜಟ್ಟೆಪ್ಪ, ಚಿತ್ತಾಪುರ, ಸೇಡಂ, ಆಳಂದ ಪಿಎಸ್ಐ ಹಾಗೂ ಚಿತ್ತಾಪುರ ಉಪ ವಿಭಾಗದ ಅಧಿಕಾರಿಗಳು ಭೀಮನಹಳ್ಳಿ ಗ್ರಾಮದ ಆರೋಪಿ ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ಮಹಿಳೆಯನ್ನು ವಶಕ್ಕೆ ಪಡೆದಾಗ ಈ ಬೆಳವಣಿಗೆ ನಡೆದಿದೆ.

ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಭಾವಿಸಿದ ಇನ್‌ಸ್ಪೆಕ್ಟರ್ ಏಕಾಏಕಿ ಹಲ್ಲೆ ನಡೆಸಿದರು ಎಂದು ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಹಲ್ಲೆ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜನರು ಜಮಾಯಿಸಿದ್ದರಿಂದ ಕೆಲ ಕಾಲ ಉದ್ರಿಕ್ತ ವಾತಾವರಣ ನಿರ್ಮಾಣಗೊಂಡಿತ್ತು. ಅಬಕಾರಿ ಅಧಿಕಾರಿಗಳ ವಾಹನಗಳು ಗ್ರಾಮದಿಂದ ಹೊರಗೆ ಹೋಗದಂತೆ ತಡೆದು ಪ್ರತಿಭಟಿಸಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರ ಮೇಲೆ ನಡೆದ ಹಲ್ಲೆ ಬಗ್ಗೆ ಆಕ್ರೋಶಗೊಂಡ ಗ್ರಾಮಸ್ಥರು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

ಹಲ್ಲೆಗೊಳಗಾದ ಶೇಖಪ್ಪ, ‘ಜನರ ಭಾವನೆಗಳಿಗೆ ವಿರುದ್ಧ ಯಾವುದೇ ತೀರ್ಮಾನ ತೆಗೆದುಕೊಳ್ಳುವ ಹಾಗಿಲ್ಲ. ಹಲ್ಲೆ ಮಾಡಿದ ಅಧಿಕಾರಿಯನ್ನು ಕರೆಸಿ ಕ್ಷಮೆ ಕೇಳಿಸಿ ಅಥವಾ ಠಾಣೆಗೆ ಬಂದು ದೂರು ಬರೆದುಕೊಡುತ್ತೇನೆ ಎಫ್‌ಐಆರ್ ದಾಖಲಿಸಿಕೊಳ್ಳಿ’ ಎಂದು ಸ್ಥಳದಲ್ಲಿದ್ದ ಅಬಕಾರಿ ಡಿವೈಎಸ್ಪಿ ವಿಜಯಕುಮಾರ ರಾಂಪುರೆ ಅವರಿಗೆ ಹೇಳಿದರು.

ಅಬಕಾರಿ ಇಲಾಖೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ದೂರವಾಣಿಯಲ್ಲಿ ಮಾತನಾಡಿದ ಜಟ್ಟೆಪ್ಪ, ‘ಗ್ರಾಮ ಪಂಚಾಯಿತಿ ಅಧ್ಯಕ್ಷರೆಂದು ನನಗೆ ಗೊತ್ತಿರಲಿಲ್ಲ. ಹೊಡೆದಿದ್ದು ತಪ್ಪಾಗಿದೆ’ ಎಂದರು.

ಮಹಿಳಾ ಪೊಲೀಸ್ ಇಲ್ಲದೆ ಮಹಿಳೆ ವಶಕ್ಕೆ: ಗ್ರಾಮದ ಮನೆಯೊಂದರ ಮೇಲೆ ದಾಳಿ ಮಾಡಿ ಮಹಿಳೆಯನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ಸಮಯದಲ್ಲಿ ಅಬಕಾರಿ ಇಲಾಖೆಯ ಮಹಿಳಾ ಪೊಲೀಸ್ ಸಿಬ್ಬಂದಿ ಇರಲಿಲ್ಲ. ಹೀಗಾಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಕಳ್ಳಭಟ್ಟಿ ಸಾರಾಯಿ ಪ್ರಕರಣದಲ್ಲಿ ಆರೋಪಿ ಮಹಿಳೆ ಜಾಮೀನು ಪಡೆಯದೆ ನಿರ್ಲಕ್ಷಿಸಿದ್ದರಿಂದ ವಶಕ್ಕೆ ಪಡೆದಾಗ ಜನರು ಜಮಾಯಿಸಿದ್ದಾರೆ. ಜನರನ್ನು ಚದುರಿಸುವಾಗ ಗ್ರಾ.ಪಂ. ಅಧ್ಯಕ್ಷ ಯಾರೆಂದು ತಿಳಿಯದೆ ಇರುವಾಗ ಕೈ ತಾಗಿದ್ದನ್ನೇ ಹೊಡೆದಿದ್ದಾರೆಂದು ಭಾವಿಸಿದರು. ನಾವು ಯಾವುದೇ ದುರುದ್ದೇಶದಿಂದ ಕೆಲಸ ಮಾಡಿಲ್ಲ ಎಂದು ಅಬಕಾರಿ ಸಿಪಿಐ ರಮೇಶ ಬಿರಾದಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿತ್ತಾಪುರ ಪೊಲೀಸ್ ಠಾಣೆಯ ಸಿಪಿಐ ಪ್ರಕಾಶ ಯಾತನೂರು ಗ್ರಾಮಕ್ಕೆ ಭೇಟಿ ನೀಡಿ ಪರಿಸ್ಥಿತಿ ಶಾಂತಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT