ಸವಾಲು ಎದುರಿಸಿ ನಿಲ್ಲಲು ಕರ್ಜಗಿ ಸಲಹೆ

7

ಸವಾಲು ಎದುರಿಸಿ ನಿಲ್ಲಲು ಕರ್ಜಗಿ ಸಲಹೆ

Published:
Updated:
Deccan Herald

ಕಲಬುರ್ಗಿ: ‘ಜೀವನದಲ್ಲಿ ಎಂಥದ್ದೇ ಸವಾಲು ಮತ್ತು ಸಮಸ್ಯೆಗಳು ಎದುರಾದರೂ ಆತಂಕಕ್ಕೆ ಒಳಗಾಗಬಾರದು. ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬೇಕೆ ಹೊರತು, ವಿಮುಖರಾಗಬಾರದು’ ಎಂದು ಶಿಕ್ಷಣತಜ್ಞ ಡಾ.ಗುರುರಾಜ ಕರ್ಜಗಿ ಸಲಹೆ ನೀಡಿದರು.

ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ (ಎಸಿಟಿ) ಸಹಯೋಗದಲ್ಲಿ ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯು ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಸೃಜನಾತ್ಮಕ ನಾಯಕತ್ವ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ‘ಪ್ರತಿಯೊಂದು ಸಮಸ್ಯೆಗೆ ಯಾವುದಾದರೂ ಸ್ವರೂಪದಲ್ಲಿ ಪರಿಹಾರವಿದೆ ಎಂಬ ಆಶಾಭಾವ ಹೊಂದಿರಬೇಕು’ ಎಂದರು.

‘ಇಕ್ಕಟ್ಟಿಗೆ ಸಿಲುಕಿದ ಬಹುತೇಕ ಸಂದರ್ಭದಲ್ಲಿ ಎಲ್ಲವೂ ಮುಗಿದು ಹೋಯಿತು ಎಂಬ ನಿರಾಸೆ ಆವರಿಸುತ್ತದೆ. ಪರಿಹಾರವೇ ಇಲ್ಲ ಎಂದು ಕೈಕಟ್ಟಿ ಕೂರುತ್ತೇವೆ. ಆದರೆ ಸಮಸ್ಯೆಯಲ್ಲಿನ ಒಂದು ಸುಳಿವು ಆಧಾರವಾಗಿಸಿಕೊಂಡು ಸಂಕಷ್ಟದಿಂದ ಹೊರ ಬರಬಹುದೆಂದು ಮನಸ್ಸಿಗೆ ಹೊಳೆಯುವುದಿಲ್ಲ. ಇದರಿಂದ ತೀವ್ರ ಹಿನ್ನಡೆಯಾಗುತ್ತದೆ’ ಎಂದರು.

‘ಮಹಾತ್ಮ ಗಾಂಧಿ, ಜವಾಹರಲಾಲ್‌ ನೆಹರೂ ಸೇರಿದಂತೆ ಬಹುತೇಕ ನಾಯಕರು ಸಂಕಷ್ಟದ ಸರಮಾಲೆಗಳನ್ನು ದಿಟ್ಟವಾಗಿ ಎದುರಿಸಿಯೇ ಜೀವನದಲ್ಲಿ ಯಶಸ್ಸು ಕಂಡರು. ದೇಶದ ಜನರಿಗೆ ಹೊಸಮಾರ್ಗ ತೋರಿದರು. ತಮ್ಮನ್ನು ತಾವು ಸವಾಲಿಗೆ ಒಗ್ಗಿಕೊಳ್ಳುತ್ತ ಒಂದೊಂದೇ ಕಾರ್ಯದಲ್ಲಿ ಸಫಲತೆ ಕಂಡರು’ ಎಂದು ಸ್ಮರಿಸಿದರು.

ನೂತನ ವಿದ್ಯಾಲಯದ ಅಧ್ಯಕ್ಷ ಪಿ.ಸರ್ವೋತ್ತಮ ರಾವ್ ಮಾತನಾಡಿ, ‘ಶಿಕ್ಷಕರು ನಿತ್ಯವೂ ಪಾಠ ಮಾಡಿದ ನಂತರವೂ ಸ್ವಯಂ ಕಲಿಕೆಗೆ ತೆರೆದುಕೊಳ್ಳಬೇಕಾಗುತ್ತದೆ. ಕಲಿಕೆ ಎಂಬುದು ಜೀವನದ ಭಾಗವೆಂದು ಅರಿತು ಪ್ರತಿಯೊಬ್ಬ ಶಿಕ್ಷಕರು ಹೊಸ ವಿಷಯಗಳನ್ನು ಕಲಿಯಬೇಕು’ ಎಂದರು.

ಉಪನ್ಯಾಸ ಕಾರ್ಯಕ್ರಮದ ಬಳಿಕ ವಿವಿಧ ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಪ್ರಾಂಶುಪಾಲರು ಡಾ.ಗುರುರಾಜ ಕರಜಗಿ ಅವರೊಂದಿಗೆ ಸಂವಾದ ನಡೆಸಿದರು. ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಖಜಾಂಚಿ ಶ್ರೀಕಾಂತ ಕುಲಕರ್ಣಿ ಮತ್ತು ಕಾರ್ಯದರ್ಶಿ ಗೌತಮ ಜಹಗೀರದಾರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !