ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒತ್ತಡಕ್ಕೆ ಒಳಗಾಗದೆ ಪರೀಕ್ಷೆ ಎದುರಿಸಿ: ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಸಲಹೆ

ಎರಡು ದಿನಗಳ ಕಾರ್ಯಾಗಾರ
Last Updated 11 ಫೆಬ್ರುವರಿ 2019, 13:54 IST
ಅಕ್ಷರ ಗಾತ್ರ

ಕಲಬುರ್ಗಿ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗದೇ ಧೈರ್ಯದಿಂದ ಪರೀಕ್ಷೆಗಳನ್ನು ಎದುರಿಸಬೇಕು ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ವಸತಿ ಶಾಲಾ ನೌಕರರ ಸಂಘ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಹಾಗೂ ಪರೀಕ್ಷಾ ಭಯ ನಿವಾರಣೆಗಾಗಿ ಸೋಮವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು 8 ಹಾಗೂ 9ನೇ ತರಗತಿಯ ವಾರ್ಷಿಕ ಪರೀಕ್ಷೆಗಳನ್ನು ಎದುರಿಸಿದ ಹಾಗೆ ಭಯವಿಲ್ಲದೇ 10ನೇ ತರಗತಿ ಪರೀಕ್ಷೆಗಳನ್ನು ಎದುರಿಸಬೇಕು. ಮಾನಸಿಕ ಒತ್ತಡವೇ ಕಡಿಮೆ ಅಂಕ ಪಡೆಯಲು ಹಾಗೂ ಅನುತ್ತೀರ್ಣರಾಗಲು ಕಾರಣವಾಗಿದೆ. ವರ್ಷವಿಡೀ ಓದಿರುವ ವಿಷಯವನ್ನು ಪರೀಕ್ಷೆಯಲ್ಲಿ ಅಚ್ಚುಕಟ್ಟಾಗಿ ಬರೆಯಬೇಕು. ಪರೀಕ್ಷಾ ಸಮಯದಲ್ಲಿ ಗಲಿಬಿಲಿಗೊಳ್ಳದೇ ಮನಸ್ಸನ್ನು ಕೇಂದ್ರೀಕರಿಸಿ ಗೊತ್ತಿರುವ ಉತ್ತರಗಳನ್ನು ಮೊದಲು ಹಾಗೂ ಕಠಿಣ ಪ್ರಶ್ನೆಗಳಿಗೆ ನಿಧಾನವಾಗಿ ಆಲೋಚಿಸಿ ಬರೆದಲ್ಲಿ ಹೆಚ್ಚು ಅಂಕ ಗಳಿಸಲು ಸಾಧ್ಯ’ ಎಂದರು.

‘ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬೆಳೆಯಬೇಕಾದರೆ ಸಕಾರಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿಗಳು ಪ್ರತಿದಿನ ದಿನಪತ್ರಿಕೆಗಳನ್ನು ಓದುವ ರೂಢಿ ಬೆಳೆಸಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರತಿಭೆಗಳು ಸಹ ಹೆಚ್ಚಾಗಿ ಬೆಳಕಿಗೆ ಬರುತ್ತಿವೆ. ಶಿಕ್ಷಕರು ಪ್ರತಿದಿನ ಮಕ್ಕಳೊಂದಿಗೆ ಸಮಾಲೋಚಿಸಿ ಹದಿಹರೆಯದಲ್ಲಿರುವ ತೊಂದರೆಗಳನ್ನು ನಿವಾರಿಸಲು ಸೂಕ್ತ ಮಾರ್ಗದರ್ಶನ ಮಾಡಬೇಕು’ ಎಂದು ತಿಳಿಸಿದರು.

ಕುಲಪತಿ ಪ್ರೊ.ಎಸ್.ಆರ್.ನಿರಂಜನ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ತುಂಬಾ ಅವಶ್ಯಕವಾಗಿದೆ. ಇದಕ್ಕಾಗಿ ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಬೇಕು. ವಿದ್ಯಾರ್ಥಿಗಳು ನಕಲು ಮಾಡದೇ ತಮ್ಮ ಸ್ವಂತಿಕೆಯನ್ನು ಪ್ರದರ್ಶಿಸಿ ಜೀವನದಲ್ಲಿ ಯಶಸ್ವಿಯಾಗಬೇಕು. ಇದಕ್ಕಾಗಿ ಕಠಿಣ ಪರಿಶ್ರಮ ಹಾಗೂ ಓದು ಮುಖ್ಯವಾಗಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜಾ ಪಿ., ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಸ್.ಪಿ.ಮೇಲಕೇರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಸತೀಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮೆಹಬೂಬ್ ಪಾಷಾ ಕಾರಟಗಿ, ಬೆಳ್ತಂಗಡಿ ಸರ್ಕಾರಿ ಪ್ರೌಢಶಾಲೆ ಗಣಿತ ಶಿಕ್ಷಕ ಯಾಕೂಬ್ ಕೊಯ್ಯಾರು, ಕ್ರೈಸ್ ಸಂಸ್ಥೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆರ್.ವೈ.ಬೆಟ್ಟದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT